7 ವಾರ.. 8 ಜನ ದಿಢೀರ್ ನಿವೃತ್ತಿ – RO-KO, ಮ್ಯಾಕ್ಸಿ, ಕ್ಲಾಸೆನ್ ಗುಡ್ ಬೈ
ಪವರ್ ಹಿಟ್ಟರ್ ಪೂರನ್ ಗೆ ಕಾಡಿದ್ದೇನು?

ಕ್ರಿಕೆಟ್ನಲ್ಲಿ ಹಳೇ ಬೇರು ಹೊಸ ಚಿಗುರು ಅನ್ನೋ ಹಾಗೇ ಹಳಬರೆಲ್ಲಾ ನಿವೃತ್ತಿ ಪಡೆದು ಹೊರನಡೆದ್ರೆ ಯಂಗ್ ಸ್ಟರ್ಸ್ ಇನ್ನಿಂಗ್ಸ್ ಆರಂಭಿಸ್ತಾರೆ. ಅದ್ರಲ್ಲೂ ಕಳೆದ ಒಂದೂವರೆ ತಿಂಗಳಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನ ಸಾಕಷ್ಟು ಆಟಗಾರರು ನಿವೃತ್ತಿ ಘೋಷಣೆ ಮಾಡಿದ್ದಾರೆ. ಕೆಲವರು ಒಂದು ಸ್ವರೂಪಕ್ಕೆ ವಿದಾಯ ಹೇಳಿದ್ದರೆ, ಇನ್ನು ಕೆಲವರು ಎಲ್ಲಾ ಸ್ವರೂಪಗಳಿಂದಲೂ ರಿಟೈರ್ಡ್ಮೆಂಟ್ ತಗೊಂಡಿದ್ದಾರೆ. ಇದರಲ್ಲಿ ಭಾರತೀಯ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ರಂತಹ ಪ್ಲೇಯರ್ಸ್ ಕೂಡ ಇದ್ದಾರೆ.
ಇದನ್ನೂ ಓದಿ : ಡ್ರೆಸ್ಸಿಂಗ್ ರೂಮ್ ನಲ್ಲಿ ರೋಹಿತ್ & ವಿರಾಟ್ ಆಬ್ಸೆನ್ಸ್ ಕಾಡುತ್ತೆ – ಬೇಸರ ಹೊರ ಹಾಕಿದ ಕೆಎಲ್ ರಾಹುಲ್
ಭಾರತ ಕಂಡಂತರ ಸೂಪರ್ ಸ್ಟಾರ್ ಪ್ಲೇಯರ್ ಌಂಡ್ ಕ್ಯಾಪ್ಟನ್ ರೋಹಿತ್ ಶರ್ಮಾ ಮೇ ತಿಂಗಳಲ್ಲಿ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ರು. ಮೇ 7ರಂದು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ರು.ಪವರ್ ಹಿಟ್ಟಿಂಗ್ ಬ್ಯಾಟಿಂಗ್ನಿಂದಲೇ ಹಿಟ್‌ಮ್ಯಾನ್ ಎಂದು ಕರೆಸಿಕೊಳ್ತಿದ್ದ ರೋಹಿತ್ ಶರ್ಮಾ 67 ಟೆಸ್ಟ್ ಪಂದ್ಯಗಳಿಂದ 4,301 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ. 2024ರಲ್ಲಿ ಟಿ-20 ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದ ರೋಹಿತ್ ಈಗ ಟೆಸ್ಟ್ ನಿಂದಲೂ ಹೊರ ಬಂದಿದ್ದಾರೆ.
ರೋಹಿತ್ ನಿವೃತ್ತಿ ನಿರ್ಧಾರದ ಬಿಸಿಯಲ್ಲೇ ವಿರಾಟ್ ಕೊಹ್ಲಿ ಕೂಡ ನಿವೃತ್ತಿ ಶಾಕ್ ನೀಡಿದ್ರು. ಮೇ 12 ರಂದು ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದರು. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅನೌನ್ಸ್ ಮಾಡಿದ್ರು. 123 ಟೆಸ್ಟ್ ಪಂದ್ಯಗಳನ್ನ ಆಡಿರುವ ಕೊಹ್ಲಿ 9,230 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 7 ದ್ವಿಶತಕ ಮತ್ತು 30 ಶತಕಗಳನ್ನು ಗಳಿಸಿದ್ದಾರೆ. 2011 ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಟೆಸ್ಟ್ ವೃತ್ತಿಜೀವನ ಆರಂಭಿಸಿದ ವಿರಾಟ್, 2025 ರ ಜನವರಿಯಲ್ಲಿ ಆಸೀಸ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದರು.
ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಜೂನ್ 2 ರಂದು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 149 ಏಕದಿನ ಪಂದ್ಯಗಳಲ್ಲಿ 3990 ರನ್ ಗಳಿಸಿರುವ ಮ್ಯಾಕ್ಸ್‌ವೆಲ್, ಟಿ20 ಸ್ವರೂಪದಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. 2023 ರ ವಿಶ್ವಕಪ್‌ನಲ್ಲಿ ಅವರ 201 ರನ್ ಗಳಿಸಿ ನಾಟೌಟ್ ಆಗಿದ್ದು ಅವರ ವೃತ್ತಿಜೀವನದ ಬಹುದೊಡ್ಡ ಸಾಧನೆಯಾಗಿದೆ.
ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ 33 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಜೂನ್ 2ರಂದು ಈ ನಿರ್ಧಾರ ಘೋಷಿಸಿದ್ರು. ಸೌತ್ ಆಫ್ರಿಕಾ ಪರ 4 ಟೆಸ್ಟ್, 60 ಏಕದಿನ ಮತ್ತು 58 ಟಿ20ಐಗಳನ್ನು ಆಡಿದ್ದಾರೆ. ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಪರ 14 ಪಂದ್ಯಗಳಲ್ಲಿ 487 ರನ್ ಗಳಿಸಿದ್ದಾರೆ. ಕ್ಲಾಸೆನ್ ದಿಢೀರ್ ನಿವೃತ್ತಿ ಕ್ರಿಕೆಟ್ ಲೋಕಕ್ಕೆ ದೊಡ್ಡ ಶಾಕ್ ನೀಡಿದೆ.
ವೆಸ್ಟ್ ಇಂಡೀಸ್‌ನ ಡೇಂಜರಸ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಕೇವಲ 29 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 10ರಂದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹಿಂದೆ ಸರಿಯೋದಾಗಿ ತಿಳಿಸಿದ್ರು. ವೆಸ್ಟ್ ಇಂಡೀಸ್ ಪರ 106 ಟಿ20ಐ ಮತ್ತು 61 ಏಕದಿನ ಪಂದ್ಯಗಳಲ್ಲಿ 4000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅದ್ರಲ್ಲೂ 2025ರ ಸೀಸನ್ನ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಪರ ಅವರು ಅದ್ಭುತ ಪ್ರದರ್ಶನ ನೀಡಿದ್ರು.
ಶ್ರೀಲಂಕಾದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಕೂಡ ವಿದಾಯ ಘೋಷಿಸಿದ್ದಾರೆ. ಮೇ 23 ರಂದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಜೂನ್ 17 ರಂದು ಪ್ರಾರಂಭವಾಗಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯವೇ ಅವರ ಕೊನೆಯ ಪಂದ್ಯವಾಗಲಿದೆ. 2009 ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಮ್ಯಾಥ್ಯೂಸ್ ಅವರ 17 ವರ್ಷಗಳ ವೃತ್ತಿಜೀವನಕ್ಕೆ ಬಾಂಗ್ಲಾದೇಶ ಪಂದ್ಯ ಅಂತ್ಯ ಹಾಡಲಿದೆ.
ಭಾರತದ ಲೆಗ್-ಸ್ಪಿನ್ನರ್ ಪಿಯೂಷ್ ಚಾವ್ಲಾ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಪರ 3 ಟೆಸ್ಟ್, 25 ಏಕದಿನ ಮತ್ತು 7 ಟಿ20ಐಗಳನ್ನು ಆಡಿದ್ದಾರೆ, 43 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚಾವ್ಲಾ 2007 ರ ಟಿ20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.

ನೋಡಿರಿ

