ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣ – ಗಮನ ಸೆಳೆದ ‘ಆಪರೇಷನ್ ಸಿಂಧೂರ’ ಬ್ಯಾನರ್

ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧ್ವಜಾರೋಹಣ ನೆರವೇರಿಸಿದರು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಘೋಷವಾಕ್ಯ ‘ನಯ ಭಾರತ’ ಎಂಬುದಾಗಿದೆ. ಸಮೃದ್ಧ, ಸುರಕ್ಷಿತ ಮತ್ತು ದಿಟ್ಟ ನವ ಭಾರತದ ನಿರಂತರ ಉದಯವನ್ನು ಸ್ಮರಿಸುವ ಧ್ಯೇಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಧ್ವಜಾರೋಹಣಕ್ಕೂ ಮುನ್ನ ದೆಹಲಿಯ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ನಂತರ ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಮೂರು ಸೇನಾಪಡೆಗಳು ಗೌರವ ಸಲ್ಲಿಸಿದವು. ಮೋದಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು.
ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದರು. ರಾಷ್ಟ್ರಗೀತೆ ಮೊಳಗಿತು. ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ನಂತರ ಐಎಎಫ್ ಹೆಲಿಕಾಪ್ಟರ್ ಪುಷ್ಪವೃಷ್ಟಿಯನ್ನು ಮಾಡಿತು. ಒಂದು ಹೆಲಿಕಾಪ್ಟರ್ ತಿರಂಗವನ್ನು ಹಾರಾಡಿಸಿತು. ಮತ್ತೊಂದು ಹೆಲಿಕಾಪ್ಟರ್, ಆಪರೇಷನ್ ಸಿಂಧೂರ್‌ನ ಬ್ಯಾನರ್ ಅನ್ನು ಪ್ರದರ್ಶಿಸಿತು. ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದಾರೆ.
ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು, ಬಿಳಿ ಬಣ್ಣದ ಶರ್ಟ್, ಬಿಳಿ ಮತ್ತು ಕೇಸರಿ ಬಾರ್ಡರ್ ಇರುವ ಶಾಲು, ಕೇಸರಿ ಬಣ್ಣದ ಬಂದೆಜ್ ಸಫಾ ಪೇಟಾ ಧರಿಸಿದ್ದರು. ಪ್ರಧಾನಮಂತ್ರಿಗಳಾದ ಬಳಿಕ ಮೋದಿಯವರು ಪ್ರತೀ ಬಾರಿ ರಾಷ್ಟ್ರೀಯ ಹಬ್ಬಗಳಲ್ಲಿ ಬಣ್ಣ ಬಣ್ಣದ ಜೋಧ್ಪುರಿ ರುಮಾಲುಗಳನ್ನು ಧರಿಸಿ ವಿಶೇಷ ಗಮನ ಸೆಳೆಯುತ್ತಾರೆ. ಸತತ 12ನೇ ಬಾರಿಗೆ ದೆಹಲಿಯ ಕೆಂಪು ಕೋಟೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಲಿದ್ದಾರೆ.

ನೋಡಿರಿ

