75ನೇ ಗಣರಾಜ್ಯೋತ್ಸವ ಸಂಭ್ರಮ – ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಜ.25, 26ರಂದು ದೀಪಾಲಂಕಾರ
ದೇಶದಾದ್ಯಂತ ಜನವರಿ 26 ರಂದು 75ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಗಣರಾಜ್ಯೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲೂ ಗಣರಾಜ್ಯೋತ್ಸವದ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. 75ನೇ ಗಣರಾಜ್ಯೋತ್ಸವದ ಅಂಗವಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಧಾರ್ಮಿಕ ಸಂಸ್ಥೆಗಳು ಹಾಗೂ ದೇವಸ್ಥಾನಗಳಲ್ಲಿ ಜನವರಿ 25 ಮತ್ತು 26ರಂದು ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಲಾಗಿದೆ.
ಹೌದು, 75ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ/ ಜಿಲ್ಲಾ/ ತಾಲ್ಲೂಕು ಮಟ್ಟದಲ್ಲಿ ಸಂಭ್ರಮದಿಂದ ಸರ್ಕಾರದ ಕಾರ್ಯಕ್ರಮವಾಗಿ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ರೂ 50 ಲಕ್ಷಗಳು, ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಗೆ ರೂ.1 ಲಕ್ಷ ಮತ್ತು ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕಿಗೆ ರೂ. 20,000ಗಳ ಅನುದಾನ ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಇದನ್ನೂ ಓದಿ: ಇಂಡಿಯಾ ಒಕ್ಕೂಟದ ಮೈತ್ರಿ ಠುಸ್ –ಲೋಕ ಸಮರದಲ್ಲಿ ಏಕಾಂಗಿ ಸ್ಪರ್ಧೆ ಎಂದ ಮಮತಾ ಬ್ಯಾನರ್ಜಿ
ಇನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಧಾರ್ಮಿಕ ಸಂಸ್ಥೆಗಳು ಹಾಗೂ ದೇವಸ್ಥಾನಗಳಲ್ಲಿ ಜನವರಿ 25 ಮತ್ತು 26ರಂದು ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಲಾಗಿದೆ. ಜನವರಿ 26ರಂದು ವಿಶೇಷ ಪೂಜೆ, ಪ್ರಾರ್ಥನೆ ವ್ಯವಸ್ಥೆಯನ್ನು ಮಾಡಬೇಕು ಎಂದು ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ಸುತ್ತೋಲೆಯಲ್ಲಿ ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯ 34 ಸಾವಿರ ದೇವಾಲಯಗಳಿವೆ. ದೇವಾಲಯದ ವಾರ್ಷಿಕ ಆದಾಯವನ್ನು ಪರಿಗಣಿಸಿ ಅವುಗಳನ್ನು ಎ, ಬಿ ಮತ್ತು ಸಿ ಎಂದು ವಿಭಾಗ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ವಹಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಈ ಕುರಿತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆಯನ್ನು ನೀಡಿದ್ದರು. ಸಚಿವರು ಮಾತನಾಡಿ, “ಕೆಲವು ಹಿಂದೂ ಸಂಘಟನೆಗಳಿಗೆ ಮಾಹಿತಿ ಕೊರತೆಯಿದೆ, ಸರ್ಕಾರ ಯಾವುದೇ ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ. ನಮ್ಮ ಸರ್ಕಾರ ಬಂದ ಮೇಲಂತೂ ಒಂದೂ ತೆಗೆದುಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದರು. “ದೇವಾಲಯಗಳಲ್ಲಿ ಕೆಲವು ಸಂದರ್ಭದಲ್ಲಿ ಹಣ ದುರಪಯೋಗ ಆಗುತ್ತಿದೆ. ಟ್ರಸ್ಟಿಗಳಲ್ಲಿ ಜಗಳಗಳು ಆದಾಗ ಅವರು ಕೋರ್ಟ್‌ಗೆ ಹೋಗುತ್ತಾರೆ. ಈ ರೀತಿಯ ಸಂದರ್ಭಗಳಲ್ಲಿ ಹಿಂದೆ ಕೆಲವು ದೇವಾಲಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ ನಮ್ಮ ಸರ್ಕಾರ ಬಂದ ಮೇಲೆ ಯಾವ ದೇವಾಲಯವನ್ನೂ ತೆಗೆದುಕೊಂಡಿಲ್ಲ, ತೆಗೆದುಕೊಳ್ಳುವ ಉದ್ದೇಶವೂ ಇಲ್ಲ” ಎಂದು ಹೇಳಿದ್ದರು.