2,000 ಕೋಟಿ ವೆಚ್ಚ ದೇಶದಲ್ಲಿ 72,000 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ : ಹೆಚ್‌ಡಿ ಕುಮಾರಸ್ವಾಮಿ

ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಅನುಷ್ಠಾನವನ್ನು ಪರಿಶೀಲನೆ ಹಾಗೂ ಅದನ್ನು ಮತ್ತಷ್ಟು ವೇಗವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಹೆಚ್.ಡಿ ಕುಮಾರಸ್ವಾಮಿ ಅಂತರ್ ಸಚಿವಾಲಯ ಸಮನ್ವಯ ಸಭೆಯನ್ನು ನಡೆಸಿದರು.
ನವದೆಹಲಿಯ ತಮ್ಮ ಸಚಿವಾಲಯದಲ್ಲಿ ಸಚಿವರು ಕರೆದಿದ್ದ ಈ ಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಧಾನಿಗಳ ದೂರದೃಷ್ಟಿಯಂತೆ ಈ ಯೋಜನೆಯು ಮಾಲಿನ್ಯ ಮುಕ್ತ ಸಾರಿಗೆ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಸಾಂಪ್ರದಾಯಿಕ ಇಂಧನಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ರಾಷ್ಟ್ರವ್ಯಾಪಿ ವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಅಗತ್ಯವಾದ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಮನ್ವಯ ಅತ್ಯಗತ್ಯ ಎಂದು ಪ್ರತಿಪಾದಿಸಿದರು
2000 ಕೋಟಿ ರೂ. ವೆಚ್ಚ
ಪಿಎಂ ಇ-ಡ್ರೈವ್ ಯೋಜನೆ ಮೂಲಕ 2,000 ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಸುಮಾರು 72,000 ಸಾರ್ವಜನಿಕ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಬೆಂಬಲ ನೀಡುತ್ತದೆ. ಈ ಕೇಂದ್ರಗಳನ್ನು 50 ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳಲ್ಲಿ, ಮೆಟ್ರೋ ನಗರಗಳು, ಟೋಲ್ ಪ್ಲಾಜಾಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಇಂಧನ ಮಳಿಗೆಗಳು ಮತ್ತು ರಾಜ್ಯ ಹೆದ್ದಾರಿಗಳಂತಹ ಹೆಚ್ಚಿನ ದಟ್ಟಣೆಯ ತಾಣಗಳಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.