ಬೈಕ್ ಹಿಡಿದುಕೊಂಡ ವ್ಯಕ್ತಿಯನ್ನು ರಸ್ತೆ ಮೇಲೆ ದರದರನೇ ಎಳೆದೊಯ್ದ – ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಕೃತ್ಯ

ಬೈಕ್ ಹಿಡಿದುಕೊಂಡ ವ್ಯಕ್ತಿಯನ್ನು ರಸ್ತೆ ಮೇಲೆ ದರದರನೇ ಎಳೆದೊಯ್ದ – ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಕೃತ್ಯ

ಬೆಂಗಳೂರು: ದೆಹಲಿಯ ಹಿಟ್ ಆ್ಯಂಡ್ ರನ್ ಪ್ರಕರಣ ಘಟನೆ ಮಾಸುವ ಮುನ್ನವೇ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮಾದರಿಯ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ.  ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸ್ಕೂಟರ್ ಸವಾರನೊಬ್ಬ ವಯಸ್ಸಾದ ವ್ಯಕ್ತಿಯನ್ನು ಸುಮಾರು ಒಂದು ಕಿ.ಮೀ ದೂರ ಎಳೆದೊಯ್ದಿದ್ದಾನೆ.

ಇದನ್ನೂ ಓದಿ: ಪೈಲಟ್ ಆಗಿದ್ದ ಗಂಡ ವಿಮಾನ ದುರಂತಕ್ಕೆ ಬಲಿಯಾಗಿದ್ದ – ಈಗ ಪತ್ನಿಯದ್ದೂ ಅದೇ ದುರಂತ ಸಾವು..!

ಘಟನೆ ವಿವರ: ಈ ಘಟನೆ ನಡೆಯುವುದಕ್ಕೂ ಮೊದಲು, ಬೈಕ್ ಸವಾರ ಬೊಲೆರೊಗೆ ಹಿಂದೆಯಿಂದ ಬಂದು ಗುದ್ದಿದ್ದಾನೆ. ಈ ವೇಳೆ ಬೊಲೆರೊಗೆ ಚಾಲಕ ಮುತ್ತಪ್ಪ, ಪ್ರಶ್ನೆ ಮಾಡಿದ್ದಾರೆ. ಕೆಲಹೊತ್ತು ಬೈಕ್ ಸವಾರ ಹಾಗೂ ಮುತ್ತಪ್ಪ ಮಧ್ಯೆ ವಾಗ್ವಾದ ನಡೆದಿದೆ. ತಕ್ಷಣವೇ ಬೈಕ್ ಸವಾರ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಮುತ್ತಪ್ಪ ಬೈಕ್‌ ಹಿಡಿದುಕೊಂಡಿದ್ದಾನೆ. ಮುತ್ತಪ್ಪ ಅವರ ವಯಸ್ಸನ್ನೂ ಲೆಕ್ಕಿಸದೇ ಬೈಕ್ ಸವಾರ ಹಾಗೇ ರೈಡ್ ಮಾಡಿಕೊಂಡು ಹೋಗಿದ್ದಾನೆ. ಪಾಪ… ಮುತ್ತಪ್ಪ.. ಆ ಕಡೆ ಬೈಕ್ ಬಿಡುವಂಗಿಲ್ಲ. ಬಿಟ್ಟರೆ ಅಪಾಯ. ಇತ್ತ ಮುತ್ತಪ್ಪನನ್ನು ದರ ದರ ಎಳೆದುಕೊಂಡು ಬರುತ್ತಿರುವ ಬೈಕ್ ಸವಾರನಿಗೂ ಕಿಂಚಿತ್ತೂ ಪಾಪ ಪ್ರಜ್ಞೆಯೂ ಕಾಡಲಿಲ್ಲ. ಆದರೆ, ಉಳಿದ ವಾಹನ ಸವಾರರು ಇದನ್ನು ಗಮನಿಸಿದ್ದಾರೆ. ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಬೈಕ್ ಸವಾರ ಮುತ್ತಪ್ಪನನ್ನು ಎಳೆದೊಯ್ಯುತ್ತಿರುವುದನ್ನ ಗಮನಿಸಿದ ಉಳಿದ ವಾಹನ ಸವಾರರು ಬೈಕ್‌ನ್ನು ಅಡ್ಡಗಟ್ಟಿದ್ದಾರೆ. ಬೈಕ್ ಸವಾರನನ್ನು ಥಳಿಸಿ, ಬುದ್ದಿ ಹೇಳಿದ್ದಾರೆ. ಗಾಯಗೊಂಡ ಮುತ್ತಪ್ಪ ಹಾಗೂ ಸ್ಕೂಟರ್ ಸವಾರನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಕುರಿತು ಟಾಟಾ ಸುಮೋ ಚಾಲಕ ಮುತ್ತಪ್ಪ ಹೇಳಿಕೆ ನೀಡಿದ್ದು, ‘ಚಂದ್ರಾ ಲೇಔಟ್​ನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದಾಗ ಮೊಬೈಲ್​ನಲ್ಲಿ ಮಾತನಾಡಿಕೊಂಡು ಬಂದ ಬೈಕ್ ಸವಾರ ನನ್ನ ವಾಹನಕ್ಕೆ ಗುದ್ದಿದ್ದಾನೆ. ಯಾಕೆ ನನ್ನ ವಾಹನಕ್ಕೆ ಡಿಕ್ಕಿ ಹೊಡೆದೆ ಎಂದು ಕೇಳಿದೆ. ಸ್ಥಳದಲ್ಲೇ ವಾಹನ ನಿಲ್ಲಿಸಿ ಕ್ಷಮೆಯಾಚಿಸಿದ್ದರೆ ಬಿಟ್ಟುಬಿಡುತ್ತಿದ್ದೆ. ಅವನು ಏನೂ ಮಾತನಾಡದೇ ಪರಾರಿಯಾಗಲು ಯತ್ನಿಸಿದ್ದ. ಏನಾದರೂ ಸರಿ… ಬೈಕ್ ಸವಾರನನ್ನು ಬಿಡಬಾರದು ಎಂದು ನಿರ್ಧರಿಸಿ ಹಿಡಿಯಲು ಮುಂದಾದೆ. ನಾನು ಆತನ ಬೈಕ್‌ ಅನ್ನು ಹಿಡಿದುಕೊಂಡೆ. ಸುಮಾರು 1 ಕಿ.ಮೀ ನನ್ನ ಬೈಕ್‌ನಲ್ಲಿ ಎಳೆದುಕೊಂಡು ಹೋದ. ಬಳಿಕ ಜನರು ಅಡ್ಡ ಹಾಕಿ ಬೈಕ್‌ ಸವಾರನನ್ನು ತಡೆದರು. ನನ್ನ ಸೊಂಟ, ಕಾಲು, ಕೈಗೆ ಗಾಯವಾಗಿದೆ’ ಎಂದಿದ್ದಾರೆ.

ಬೈಕ್ ಸವಾರನನ್ನು ಬ್ಯಾಟರಾಯನಪುರ ನಿವಾಸಿ ಸುಹೇಲ್‌ ಅಲಿಯಾಸ್‌ ಸಾಹಿಲ್ ಸೈಯದ್‌ ಎಂದು ಗುರುತಿಸಲಾಗಿದೆ. ಈತ ಸೇಲ್ಸ್‌ಮನ್‌ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ವಿಚಾರಣೆ ನಡೆಸುವ ವೇಳೆ ತಿಳಿದುಬಂದಿದೆ. ಈ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಸತಿ ಸಚಿವ ವಿ.ಸೋಮಣ್ಣ ಆಸ್ಪತ್ರೆಗೆ ಭೇಟಿ ನೀಡಿ, ಮುತ್ತಪ್ಪ ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ವಿ. ಸೋಮಣ್ಣ, ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

suddiyaana