ವರ್ಷಕ್ಕೂ ಮುನ್ನವೇ ಶಕ್ತಿ ಯೋಜನೆಯ ಅನುದಾನ ಶೇ.71 ರಷ್ಟು ಖಾಲಿ! –ಮುಂದೇನು ಮಾಡುತ್ತೆ ಸರ್ಕಾರ?
ಬೆಂಗಳೂರು: ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಯೋಜನೆ ಆರಂಭವಾದಾಗಿಂದ ಮಹಿಳೆಯರ ಓಡಾಟ ಹೆಚ್ಚಿದೆ. ಇದರಿಂದಾಗಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯವೂ ಏರಿಕೆಯಾಗುತ್ತಿದ್ದು, ಅದು ಸರ್ಕಾರಕ್ಕೆ ಆರ್ಥಿಕ ಹೊರೆ ತಂದೊಡ್ಡುತ್ತಿದೆ.
ಹೌದು ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾಗಿ ಸುಮಾರು 5 ತಿಂಗಳಾಗುತ್ತಾ ಬಂದಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ಸಾರಿಗೆ ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಜೂನ್ 11ರಂದು ಆರಂಭವಾದ ಯೋಜನೆಯ ಲಾಭವನ್ನು 84.31 ಕೋಟಿ ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಅಲ್ಲದೆ, ಶಕ್ತಿ ಯೋಜನೆಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನದ ಪೈಕಿ ಶೇ. 71.42ರಷ್ಟು ಹಣ ಈಗಾಗಲೆ ಖರ್ಚಾಗಿದೆ. ಹೀಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಉಳಿದಿರುವ 5 ತಿಂಗಳಲ್ಲಿ ಹೆಚ್ಚುವರಿ ಅನುದಾನದ ಅವಶ್ಯಕತೆಯಿದ್ದು, ಅದಕ್ಕಾಗಿ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಬೇಕಾದ ಅನಿರ್ವಾಯತೆ ಸಾರಿಗೆ ಇಲಾಖೆಗೆ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಉಸಿರಾಡುವ ಗಾಳಿಯೇ ಜೀವಕ್ಕೆ ಮಾರಕ! – ಕಳಪೆ ಮಟ್ಟಕ್ಕೆ ಇಳಿಯುತ್ತಿದೆ ರಾಜ್ಯ ರಾಜಧಾನಿ ವಾಯುಗುಣಮಟ್ಟ!
ಶಕ್ತಿ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 2,800 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಅದರಲ್ಲಿ ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ 2 ಸಾವಿರ ಕೋಟಿ ರು. ಮೊತ್ತದ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಅಷ್ಟು ಮೊತ್ತವನ್ನು ಆರ್ಥಿಕ ಇಲಾಖೆ ನಾಲ್ಕೂ ಸಾರಿಗೆ ನಿಗಮಗಳಿಗೆ ನೀಡಬೇಕಿದೆ. ಜೂನ್ ತಿಂಗಳು ಹೊರತುಪಡಿಸಿ ಉಳಿದ ನಾಲ್ಕು ತಿಂಗಳಲ್ಲಿ ಸರಾಸರಿ 440 ಕೋಟಿ ರು. ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿದೆ.
ಹೀಗಾಗಿ ಸದ್ಯ ಸರ್ಕಾರ ನಿಗದಿ ಮಾಡಿರುವ ಅನುದಾನದ ಪೈಕಿ 800 ಕೋಟಿ ರು. ಮಾತ್ರ ಉಳಿದಿದ್ದು, ಮುಂದಿನ 5 ತಿಂಗಳ ಅವಧಿಗಾಗಿ ಕನಿಷ್ಠ 1 ಸಾವಿರ ಕೋಟಿ ರು. ಅವಶ್ಯಕತೆ ಬೀಳಲಿದೆ. ಹೀಗಾಗಿ ಡಿಸೆಂಬರ್‌ನಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಸಾರಿಗೆ ಇಲಾಖೆಯಿಂದ ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.