ಬಡತನ.. ಅಸಹಾಯಕತೆ.. ಪಿಂಚಣಿ ಹಣ ಪಡೆಯಲು ಕಿ.ಮೀ ಗಟ್ಟಲೆ ನಡೆದ ವೃದ್ಧೆ!

ಬಡತನ.. ಅಸಹಾಯಕತೆ.. ಪಿಂಚಣಿ ಹಣ ಪಡೆಯಲು ಕಿ.ಮೀ ಗಟ್ಟಲೆ ನಡೆದ ವೃದ್ಧೆ!

ಪಿಂಚಣಿ ಹಣವನ್ನು ಪಡೆಯಲು ವೃದ್ಧೆಯೊಬ್ಬರು ಕಿಲೋ ಮೀಟರ್ ಗಟ್ಟಲೆ ನಡೆದಿದ್ದಾರೆ. ಈ ವೃದ್ದೆ ಕುರ್ಚಿಯನ್ನೇ ಊರುಗೋಲಿನಂತೆ ಬಳಸಿಕೊಂಡು ಸುಡು ಬಿಸಿಲಿಗೆ ಬರಿಗಾಲಿನಲ್ಲಿ ಬ್ಯಾಂಕ್ ನತ್ತ ಹೆಜ್ಜೆ ಹಾಕಿದ್ದಾರೆ. ಈ ಮನಕಲುಕುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ಸೆಲೆಬ್ರಿಟಿಗಳ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ಮಾಯ – ಕಾರಣವೇನು ಗೊತ್ತಾ?

ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಜರಿಗಾಂವ್ ಬ್ಲಾಕ್‌ನ 70 ವರ್ಷದ ಸೂರ್ಯ ಹರಿಜನ ಎಂಬ ವೃದ್ಧೆಗೆ ತಿಂಗಳಿಗೆ ಬರುವ ಪಿಂಚಣಿ ಹಣ ಬಡತನದ ಬದುಕು ಸಾಗಿಸಲು ಅನಿವಾರ್ಯ. ಇವರ ಹಿರಿಯ ಮಗ ಬೇರೆ ಬೇರೆ ರಾಜ್ಯದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ವೃದ್ಧೆ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದಾರೆ. ಕಿರಿಯ ಮಗ ದನಗಳನ್ನು ಮೇಯಿಸುತ್ತಾ ಜೀವನ ಸಾಗಿಸುತ್ತಾನೆ. ಗುಡಿಸಲಿನಲ್ಲೇ ವಾಸಿಸುವ ವೃದ್ಧೆಗೆ ತಿಂಗಳ ಪಿಂಚಣಿ ಹಣ ಮೂರು ಹೊತ್ತಿನ ಊಟಕ್ಕೆ ಅನಿವಾರ್ಯ. ಹೀಗಾಗಿ 70 ವರ್ಷವಾದರೂ ಅವರು ಪಿಂಚಣಿ ಹಣಕ್ಕಾಗಿ ಬ್ಯಾಂಕ್‌ ಇರುವ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಾರೆ. ವಯಸ್ಸಾದ ಕಾರಣ ಬಾಗಿದ ಬೆನ್ನು, ಬರೀ ಕಾಲಿನಲ್ಲಿ ಕುರ್ಚಿಯೊಂದರ ಸಹಾಯ ಪಡೆದು ಮೆಲ್ಲನೆ ಕುಂಟುತ್ತಾ ಬ್ಯಾಂಕಿಗೆ ಹೋಗಿದ್ದಾರೆ, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೃದ್ಧೆ ಅಷ್ಟು ಕಷ್ಟ ಬ್ಯಾಂಕಿಗೆ ಹೋಗಿದ್ದರೂ ಆಕೆಗೆ ಪಿಂಚಣಿ ಪಡೆಯಲು ಸಾಧ್ಯವಾಗಿಲ್ಲ. ಏಕೆಂದರೆ ಆಕೆಯ ಹೆಬ್ಬೆರಳುಗಳು ದಾಖಲೆಗಳಿಗೆ ಹೊಂದಾಣಿಯಾಗುತ್ತಿಲ್ಲ. ಆಕೆಗೆ ಸಿಗಬೇಕಿದ್ದ ಬಿಡಿಗಾಸು ಕೂಡ ಕೈತಪ್ಪಿ ಹೋಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್‌ ಮ್ಯಾನೇಜರ್, ವೃದ್ದೆಯ ಬೆರಳು ಮುರಿದಿದೆ. ಇದರಿಂದ ಆಕೆ ಥಂಬ್‌ ನೀಡಲು ಆಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ವೃದ್ಧೆಯ ಕೈ ಬೆರಳುಗಳು ಮುರಿದುಹೋಗಿವೆ. ಹೀಗಾಗಿ ಆಕೆ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸದ್ಯ ಅವರಿಗೆ ಬ್ಯಾಂಕ್‌ ನಿಂದಲೇ ಕ್ಯಾಶ್‌ ರೂಪದಲ್ಲಿ 3,000 ರೂಪಾಯಿ ನೀಡಲಾಗಿದೆ. ನಾವು ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ ಎಂದು ಜರಿಗಾಂವ್ ಶಾಖೆಯ ಎಸ್‌ಬಿಐ ವ್ಯವಸ್ಥಾಪಕರು ತಿಳಿಸಿದ್ದಾರೆ.

ಗ್ರಾಮದ ಸರಪಂಚ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂಥ ಅಸಹಾಯಕ ವ್ಯಕ್ತಿಗಳ ಸಮಸ್ಯೆಯನ್ನು ಆಲಿಸಿ ನಾವು ಪಿಂಚಣಿ ಹಣವನ್ನು ತಲುಪಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

suddiyaana