ನೋಡ ನೋಡುತ್ತಿದ್ದಂತೆ ಬಹುಮಹಡಿಯ ಕಟ್ಟಡಗಳು ಕುಸಿತ! –ರಣಭೀಕರ ಮಳೆಗೆ ಈವರೆಗೆ 238 ಮಂದಿ ಬಲಿ

ನೋಡ ನೋಡುತ್ತಿದ್ದಂತೆ ಬಹುಮಹಡಿಯ ಕಟ್ಟಡಗಳು ಕುಸಿತ! –ರಣಭೀಕರ ಮಳೆಗೆ ಈವರೆಗೆ 238 ಮಂದಿ ಬಲಿ

ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರ ನರ್ತನ ನಿಲ್ಲುವಂತೆ ಕಾಣುತ್ತಿಲ್ಲ. ಮಳೆಯಿಂದಾಗಿ ಪ್ರತಿನಿತ್ಯ ಅವಘಡ, ಪ್ರಾಣಹಾನಿ ವರದಿಯಾಗುತ್ತಲೇ ಇದೆ. ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಕುಲ್ಲುವಿನ ಅನ್ನಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಅನೇಕ ಮನೆಗಳು ಏಕಾಏಕಿ ನೆಲಸಮವಾಗಿವೆ. ಪರಿಣಾಮ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಗುರುವಾರ ಮುಂಜಾನೆ ಈ ಅವಘಡ ಸಂಭವಿಸಿದೆ. ಹತ್ತಾರು ಮನೆಗಳು ಇಸ್ಪೀಟೆಲೆಗಳಂತೆ ಕುಸಿದು ಬೀಳುತ್ತಿರುವ ಭೀಕರ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಇನ್ನೇನು ವರ ತಾಳಿ ಕಟ್ಟಬೇಕು ಅನ್ನುವಾಗಲೇ ಉಲ್ಟಾ ಹೊಡೆದ ವಧು – ಮಂಟಪದಲ್ಲೇ ಮದುವೆಗೆ ನಿರಾಕರಿಸಿದ್ದೇಕೆ ಗೊತ್ತಾ?

ನೆಲಸಮವಾದ ಕಟ್ಟಗಳಲ್ಲಿದ್ದ ಬಾಡಿಗೆದಾರರು ಸಕಾಲದಲ್ಲಿ ಮನೆ ತೆರವು ಮಾಡಿದ್ದರು. ಇಲ್ಲದಿದ್ದರೆ ಇಲ್ಲಿ ದೊಡ್ಡ ಅವಘಡ ಸಂಭವಿಸುತ್ತಿತ್ತು ಎಂದು ತಿಳಿದುಬಂದಿದೆ. ಗುರುವಾರ ಬೆಳಗ್ಗೆಯಿಂದ ಒಂದರ ಹಿಂದೆ ಒಂದರಂತೆ ಮನೆಗಳು ಕುಸಿಯಲಾರಂಭಿಸಿದ್ದು, ಕಣ್ಣೆದುರೇ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೂಕುಸಿತ ಮತ್ತು ಮೇಘಸ್ಫೋಟದ ಪ್ರತ್ಯೇಕ ಘಟನೆಗಳಲ್ಲಿ ಐವರು ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಹಠಾತ್ ಪ್ರವಾಹದಿಂದಾಗಿ ಕೆಲವರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಈ ತಿಂಗಳು ಮಳೆ ಸಂಬಂಧಿತ ಘಟನೆಗಳಲ್ಲಿ 120 ಜನರು ಸಾವನ್ನಪ್ಪಿದ್ದರೆ, ಜೂನ್ 24 ರಂದು ರಾಜ್ಯದಲ್ಲಿ ಮಾನ್ಸೂನ್ ಪ್ರಾರಂಭವಾದಾಗಿನಿಂದ ಒಟ್ಟು 238 ಜನರು ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana