ಶೇ.60ರಷ್ಟು ಕನ್ನಡ ನಾಮಫಲಕ ಕಡ್ಡಾಯ  – ನಿಯಮ ಪಾಲಿಸದ 49 ಸಾವಿರ ಅಂಗಡಿಗಳಿಗೆ ಬಿಬಿಎಂಪಿ ನೋಟಿಸ್

ಶೇ.60ರಷ್ಟು ಕನ್ನಡ ನಾಮಫಲಕ ಕಡ್ಡಾಯ  – ನಿಯಮ ಪಾಲಿಸದ 49 ಸಾವಿರ ಅಂಗಡಿಗಳಿಗೆ ಬಿಬಿಎಂಪಿ ನೋಟಿಸ್

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕನ್ನಡವೇ ಮಾಯ ಆಗುತ್ತಿದೆ. ಹಿಂದಿ, ಇಂಗ್ಲಿಷ್‌ ಭಾಷೆಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ ಅನ್ನೋ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ರಾಜ್ಯದಲ್ಲಿ ಕನ್ನಡ ನಾಮಫಲಕ ವಿಚಾರವಾಗಿ ಪ್ರತಿಭಟನೆ ನಡೆದಿತ್ತು. ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು, ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು  ಅಂತಾ ಕನ್ನಡ ಹೋರಾಟಗಾರರು ಒತ್ತಾಯಿಸಿದ್ದರು. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ವಾಣಿಜ್ಯ ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿರುವ ಬಿಬಿಎಂಪಿ, ನಿಯಮ ಪಾಲಿಸದ ಸುಮಾರು 49 ಸಾವಿರಕ್ಕೂ ಹೆಚ್ಚು ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ಟಿಪ್ಪು ಸುಲ್ತಾನ್‌ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು – ರಸ್ತೆ ಸಂಚಾರ ಬಂದ್.. ಉದ್ವಿಗ್ನ ಸ್ಥಿತಿ!

ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಎಲ್ಲಾ ವಲಯದ ಉದ್ದಿಮೆಗಳನ್ನು ಫೆಬ್ರವರಿಯೊಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು. ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ತಿಳುವಳಿಕೆ ಪತ್ರ ನೀಡಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕನ್ನಡ ಭಾಷೆಯನ್ನು ಬಳಸದ ಉದ್ದಿಮೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಬಿಬಿಎಂಪಿಗೆ ಸೂಚಿಸಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು, 49,241 ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಕೆ ಹಾಗೂ ಸಹಾಯ 2.0ರಲ್ಲಿ ಬಂದಂತಹ ದೂರುಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು, “ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 49,241 ಮಳಿಗೆಗಳಿಗೆ ನೋಟಿಸ್ ನೀಡಲಾಗಿದ್ದು, 16,813 ಮಳಿಗೆಗಳು ಶೇ. 60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಿವೆ. 32,428 ಮಳಿಗೆಗಳಲ್ಲಿ ನಾಮಫಲಕಗಳನ್ನು ಅಳವಡಿಸಬೇಕಿದೆ. ಫೆಬ್ರುವರಿ ಅಂತ್ಯದೊಳಗಾಗಿ ಎಲ್ಲ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸಿಕೊಂಡಿರಬೇಕು. ಅದಕ್ಕಾಗಿ ಆಯಾ ವಲಯಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

“ನಗರದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ಆದ್ಯತೆ ಮೇರೆಗೆ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಮಳಿಗೆಗಳಿಗೆ ತಿಳಿವಳಿಕೆ ಪತ್ರ ನೀಡಿದ ಬಳಿಕ 7 ದಿನ ಕಾಲಾವಕಾಶ ನೀಡಿದ ಬಳಿಕವೂ ಕನ್ನಡ ನಾಮಫಲಕ‌ ಅಳವಡಿಸದಿದ್ದಲ್ಲಿ ಅಂತಹ ಮಳಿಗೆಯ ಮೇಲೆ ಶಿಸ್ತು ಕ್ರಮ ಜರುಗಿಸಿ ಕೂಡಲೇ ನಾಮಫಲಕ ಅಳವಡಿಸುವಂತೆ ಮಾಡಬೇಕು” ಎಂದು ಸೂಚಿಸಿದರು.

Shwetha M