6 ವರ್ಷದ ಬಾಲಕಿ ಮೇಲೆ ಪಿಟ್ ಬುಲ್ ದಾಳಿ – ಮುಖದ ಮೇಲೆ 1,000 ಹೊಲಿಗೆ!

6 ವರ್ಷದ ಬಾಲಕಿ ಮೇಲೆ ಪಿಟ್ ಬುಲ್ ದಾಳಿ – ಮುಖದ ಮೇಲೆ 1,000 ಹೊಲಿಗೆ!

ಒಂಟಾರಿಯೊ: ವಿದೇಶಿ ತಳಿಯ ಪಿಟ್ ಬುಲ್ ನಾಯಿ ಅನೇಕ ಜನರ ಮೇಲೆ ದಾಳಿ ನಡೆಸುತ್ತಿದೆ. ಈಗಾಗಲೇ ಪಿಟ್ ಬುಲ್ ದಾಳಿಯಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಕೆಲವರು ಸಾವನ್ನಪ್ಪಿದ ಘಟನೆಯೂ ನಡೆದಿದೆ. ಹೀಗಾಗಿ ಅನೇಕ ದೇಶಗಳು ಪಿಟ್ ಬುಲ್ ನಾಯಿಯನ್ನು ನಿಷೇಧಿಸಿವೆ. ಅಲ್ಲದೇ ಕೆಲ ದೇಶಗಳು ಈ ತಳಿಯ ನಾಯಿ ಮಾರಾಟವನ್ನು ಕೂಡ ಬ್ಯಾನ್ ಮಾಡಬೇಕು ಅಂತಾ ಒತ್ತಾಯಿಸಿವೆ. ಇದರ ಬೆನ್ನಲ್ಲೇ ಪಿಟ್ ಬುಲ್ ನಾಯಿಯೊಂದು 6 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಬಾಲಕಿ ಮುಖದ ಮೇಲೆ ವೈದ್ಯರು ಒಂದಲ್ಲ ಎರಡಲ್ಲ ಬರೋಬ್ಬರಿ 1,000 ಹೊಲಿಗೆ ಹಾಕಿದ್ದಾರೆ.

ಇದನ್ನೂ ಓದಿ: ಅದೃಷ್ಟ ಬರುತ್ತದೆಂದು ನಂಬಿ ನರಿ ಸಾಕಿದ – ಬೆಳಗೆದ್ದು ಮುಖ ನೋಡ್ತಿದ್ದವನು ಅದೇ ನರಿಯಿಂದ ಜೈಲುಪಾಲಾದ!

ಹೌದು, ಅಮೆರಿಕದ ಒಂಟಾರಿಯೊ ಪ್ರಾಂತ್ಯದ ಚೆಸ್ಟರ್‌ವಿಲ್ಲೆ ಗ್ರಾಮದ ಬಾಲಕಿ ಲಿಲ್ಲಿ (6) ಪಿಟ್ ಬುಲ್ ನಾಯಿಯಿಂದ ದಾಳಿಗೆ ಒಳಗಾಗಿದ್ದಾಳೆ. ಲಿಲ್ಲಿ ತನ್ನ ನೆರೆಮನೆಯ ಗೆಳತಿಯೊಂದಿಗೆ ಆಟವಾಡಲು ಆಕೆಯ ಮನೆಗೆ ಹೋಗಿದ್ದಾಳೆ. ಈ ವೇಳೆ ಲಿಲ್ಲಿ ಅಲ್ಲೇ ಇದ್ದ ಟೇಬಲ್ ಮೇಲೆ ಕುಳಿತಿದ್ದಳು. ಆಕೆಯನ್ನು ಕಂಡ ಗೆಳತಿ ಮನೆಯ ಪಿಟ್ ಬುಲ್  ಹಾರಿ ಬಂದು ಭುಜದ ಮೇಲೆ ಎರಗಿದೆ. ಈ ವೇಳೆ ಲಿಲ್ಲಿ ಹಿಂದಕ್ಕೆ ಬಾಗಿದ್ದಾಳೆ. ಆಗ ನಾಯಿ ಆಕೆಯ ಕುತ್ತಿಗೆ ಮೇಲೆ ಕಚ್ಚಲು ಮುಂದಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಲಿಲ್ಲಿ ತನ್ನ ಮುಖವನ್ನು ಮುಂದಕ್ಕೆ ಎಳೆದಿದ್ದಾಳೆ. ಇದರ ಪರಿಣಾಮ ಆಕೆಯ ಮುಖಕ್ಕೆ ಗಂಭೀರ ಗಾಯವಾಗಿದೆ.

ಕೂಡಲೇ ಬಾಲಕಿಯನ್ನು  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ನಾಯಿ ದಾಳಿಯಿಂದ ಬಾಲಕಿಯ ಮುಖ ಸಂಪೂರ್ಣ ಛಿದ್ರವಾಗಿದೆ. ಹೀಗಾಗಿ ವೈದ್ಯರು ಒಂದಲ್ಲ ಎರಡಲ್ಲ ಬರೋಬ್ಬರಿ 1,000 ಹೊಲಿಗೆಗಳನ್ನು ಹಾಕಿದ್ದಾರೆ. ಹೊಲಿಗೆ ಹಾಕಿದ ಪರಿಣಾಮ ಬಾಲಕಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆಕೆಯ ಪೋಷಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಾಯಿ ದಾಳಿಯಿಂದ ಲಿಲ್ಲಿಯ ಲಾಲಾರಸ ಗ್ರಂಥಿಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವಳ ಮುಖದ ಸ್ನಾಯುಗಳು ಹಾನಿಗೊಳಗಾಗಿವೆ. ಸದ್ಯ ಬಾಲಕಿ ಇನ್ನು ಕೆಲವು ದಿನಗಳ ಕಾಲ ಕೃತಕ ಉಸಿರಾಟದಲ್ಲೇ ಇರಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಲಿಲ್ಲಿ ಸಂಪೂರ್ಣ ಗುಣಮುಖವಾಗಲು ಇನ್ನೂ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ. ಹೀಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುವುದನ್ನು ಅರಿತ ಆಕೆಯ ಕುಟುಂಬದ ಸ್ನೇಹಿತರು ಸಹಾಯಕ್ಕಾಗಿ ‘ಗೋ ಫಂಡ್ ಮೀ’ ಎಂಬ ಅಭಿಯಾನ ಕೂಡ ಆರಂಭಿಸಿದ್ದಾರೆ.

suddiyaana