2 ತಿಂಗಳು.. 6 ದಿಗ್ಗಜರ ಯುಗಾಂತ್ಯ! – RO-KO, ಛೆಟ್ರಿ, ವಿನೇಶ್ ಗುಡ್ ಬೈ
ಕ್ರಿಕೆಟ್.. ಹಾಕಿ.. ಕುಸ್ತಿ ಮುಗಿಸಿದ್ಯಾರು?

2 ತಿಂಗಳು.. 6 ದಿಗ್ಗಜರ ಯುಗಾಂತ್ಯ! – RO-KO, ಛೆಟ್ರಿ, ವಿನೇಶ್ ಗುಡ್ ಬೈಕ್ರಿಕೆಟ್.. ಹಾಕಿ.. ಕುಸ್ತಿ ಮುಗಿಸಿದ್ಯಾರು?

ಅಖಂಡ ಭಾರತದಲ್ಲಿ ಕ್ರಿಕೆಟ್ ಅನ್ನೋದು ಜಸ್ಟ್ ಒಂದು ಕ್ರೀಡೆಯಾಗಿ ಉಳಿದಿಲ್ಲ. ನಮ್ಮ ನೋವು, ನಲಿವು, ಹೆಮ್ಮೆ, ಗೌರವ, ಪ್ರತಿಷ್ಠೆ, ಸ್ಪೂರ್ತಿ ಹೀಗೆ ಕಣಕಣಕದಲ್ಲೂ ಬೆರೆತು ಹೋಗಿದೆ. ಆಟಗಾರರನ್ನ ನಮ್ಮ ಕುಟುಂಬ ಸದಸ್ಯರಂತೆಯೇ ಟ್ರೀಟ್ ಮಾಡೋ ನಾವು ಅವ್ರು ಸೋತಾಗ ಸಂಕಟ ಪಡ್ತೀವಿ. ಗೆದ್ದಾಗ ಅವ್ರಿಗಿಂತ ಸ್ವಲ್ಪ ಜಾಸ್ತಿಯೇ ಸಂಭ್ರಮಿಸ್ತೇವೆ. ಅದೆಷ್ಟೋ ಬಾರಿ ನಮಗರಿವಿಲ್ಲದೆಯೇ ಕಣ್ಣಾಲೆಗಳೂ ಒದ್ದೆಯಾಗಿ ಬಿಡ್ತಾವೆ. ಕ್ರಿಕೆಟ್ಗೆ ಇಷ್ಟೊಂದು ರಾಜಮರ್ಯಾದೆ ಕೊಡೋ ನಾವು ಇತರೆ ಕ್ರೀಡೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ದು ಅಷ್ಟಕ್ಕಷ್ಟೇ. ಆದ್ರೆ ಒಲಿಂಪಿಕ್ಸ್ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದಂತಹ ಮಹಾಸಾಧಕರನ್ನ ಮಾತ್ರ ಕೊಂಡಾಡುತ್ತೇವೆ. ಹೀಗೆ ಆಟದ ಮೂಲಕವೇ ಕೋಟಿ ಕೋಟಿ ಭಾರತೀಯರ ಮನಗೆದ್ದ ಅನೇಕ ಕ್ರೀಡಾಸಾಧಕರ ಯುಗಾಂತ್ಯವಾಗಿದೆ. ಮಹತ್ವದ ಪಂದ್ಯಗಳ ಮೂಲಕವೇ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ 2024ರಲ್ಲಿ ಭಾರತೀಯ ಹೃದಯ ಛಿದ್ರ ಮಾಡಿದಂತಹ ಆಟಗಾರರು ಯಾರ್ಯಾರು? ಅವ್ರ ಸಾಧನೆ ಎಂಥಾದ್ದು..? ಅನ್ನೋ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ʼಯುಐʼ ಜಗತ್ತು ತೆರೆಗೆ ಬರಲು ಸಿದ್ದ – ಯಾವಾಗ ರಿಲೀಸ್‌ ಆಗಲಿದೆ ಉಪ್ಪಿ ಸಿನಿಮಾ?

ಸ್ಪೋರ್ಟ್ಸ್ ಅನ್ನೋದು ಬರೀ ಒಂದು ಗೇಮ್ ಅಲ್ಲ. ಜನರ ಎಮೋಷನ್ಸ್, ದೇಶದ ಪ್ರತಿಷ್ಠೆ, ಕ್ರೀಡಾಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಒಂದೇ ಒಂದು ವಿಕ್ಟರಿ ಲಕ್ಷಾಂತರ ಜನರನ್ನ ಇನ್ಸ್ಪೈರ್ ಮಾಡ್ಬೋದು. ಹಾಗೇ ಒಂದು ಸೋಲು ಕೋಟ್ಯಂತರ ಅಭಿಮಾನಿಗಳ ಹೃದಯವನ್ನ ನುಚ್ಚು ನೂರು ಮಾಡುತ್ತೆ. ಅಂಥಾದ್ದೊಂದು ಸಾಮರ್ಥ್ಯ ಕ್ರೀಡೆಗಿದೆ. ಇದೇ ಕಾರಣಕ್ಕೆ ಮೊದ್ಲೆಲ್ಲಾ ಆಟ ಅಂದ್ರೆ ಮೂಗು ಮುರೀತಿದ್ದ ಪೋಷಕರು ಈಗ ತಮ್ಮ ಮಕ್ಕಳ ಭವಿಷ್ಯವನ್ನೇ ಬದಲಿಸೋ ನಿರ್ಧಾರ ಮಾಡ್ತಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟಕ್ಕೇರೋದು ಕ್ರಿಕೆಟ್ ಲೋಕದ ಸಾಧನೆಯಾದ್ರೆ ಒಲಿಂಪಿಕ್ಸ್ನಲ್ಲಿ ಒಂದು ಮೆಡಲ್ ಕಚ್ಚಬೇಕು ಅನ್ನೋದು ಅದೆಷ್ಟೋ ಕ್ರೀಡಾಪಟುಗಳ ಕನಸಾಗಿರುತ್ತೆ. ಹೀಗೆ ತಮ್ಮ ಜರ್ನಿಯುದ್ಧಕ್ಕೂ ದೇಶಕ್ಕಾಗಿ ಆಡಿದ ಸಾವಿರಾರು ಕ್ರೀಡಾಪಟುಗಳು ನಮ್ಮ ನಡುವೆಯೇ ಇದ್ದಾರೆ. ಇಂಥವ್ರ ಪೈಕಿ ಸಾಧನೆಯ ಶಿಖರಕ್ಕೇರಿ ಮೆರೆಯುತ್ತಿದ್ದ ದಿಗ್ಗಜರು ಕ್ರೀಡೆಗೆ ವಿದಾಯ ಘೋಷಿಸಿದ್ದಾರೆ. 2024ರಲ್ಲಿ ವಿದಾಯದ ಶಾಕ್ ನೀಡಿರೋ ಆಟಗಾರರ ಬಗ್ಗೆಯೇ ಹೇಳ್ತೇನೆ ನೋಡಿ.

ಟಿ-20ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರೋಹಿತ್ & ಕೊಹ್ಲಿ!

ಭಾರತದಲ್ಲಿ ಪ್ರಸೆಂಟ್ ಸಿಚುಯೇಶನ್ನಲ್ಲಿ ಕ್ರಿಕೆಟ್ ಅಂದ್ರೆ ಥಟ್ ಅಂತಾ ನೆನಪಾಗೋದೇ ಹಿಟ್ಮ್ಯಾನ್ ರೋಹಿತ್ ಶರ್ಮಾ ಹಾಗೇ ಕಿಂಗ್ ವಿರಾಟ್ ಕೊಹ್ಲಿ. ಇವ್ರಿಬ್ಬರು ಮೈದಾನದಲ್ಲಿ ಇದ್ದಾರೆ ಅಂದ್ರೆ ಅದ್ರ ಕ್ರೇಜೇ ಬೇರೆ. ಇಬ್ಬರೂ ಕೂಡ ಟೀಂ ಇಂಡಿಯಾದ ಬ್ಯಾಟಿಂಗ್ ಸ್ಟ್ರೆಂಥ್. ಕ್ರಿಕೆಟ್ ಲೋಕದ ಐಕಾನ್ಸ್. ಬಟ್ ಟಿ-20 ವಿಶ್ವಕಪ್ ಗೆದ್ದ ದಿನವೇ ಇಬ್ಬರೂ ಲೆಂಜಡರಿ ಕ್ರಿಕೆಟರ್ಸ್ ತಮ್ಮ ಟಿ-20ಐ ಫಾರ್ಮೇಟ್ ಕ್ರಿಕೆಟ್ಗೆ ವಿದಾಯ ಘೋಷಿಸಿ ದೊಡ್ಡ ಆಘಾತ ನೀಡಿದ್ರು. ಇನ್ನೆಂದೂ ಕೂಡ ಈ ಇಬ್ಬರು ಸ್ಟಾರ್ಸ್ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಕಾಣಿಸಿಕೊಳ್ಳೋದೇ ಇಲ್ಲ. ಈ ಮೂಲಕ ಚುಟುಕು ಸಮರದಲ್ಲಿ ಇಬ್ಬರ ಯುಗಾಂತ್ಯವಾಗಿದೆ. ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

T-20Iನಲ್ಲಿ ರೋಹಿತ್ ಶರ್ಮಾ ಭಾರತದ ಬಾಸ್!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಹಿಟ್ಟಿಂಗ್ ಬ್ಯಾಟರ್ಸ್. ಅದ್ರಲ್ಲೂ ಟಿ-20ಐ ಫಾರ್ಮೇಟ್ ಅಂದ್ರೆ ರೇಸ್ಗೆ ಬಿದ್ದವರಂತೆ ರನ್ ಚಚ್ಚುತ್ತಾರೆ. ಈ ವಿಚಾರದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಯಾಕೆ ಅನ್ನೋದನ್ನೇ ಹೇಳ್ತೇನೆ ನೋಡಿ. ಟಿ-20ಐ ಫಾರ್ಮೇಟ್ನಲ್ಲಿ ಭಾರತದ ಪರ ಒಟ್ಟು 159 ಪಂದ್ಯಗಳನ್ನ ಆಡಿರುವ ರೋಹಿತ್ ಶರ್ಮಾ ಬರೋಬ್ಬರಿ 4231 ರನ್ ಕಲೆ ಹಾಕಿದ್ದಾರೆ. 140.89 ಸ್ಟ್ರೈಕ್ರೇಟ್ ಹಾಗೇ 32.05ರ ಸರಾಸರಿಯಲ್ಲಿ ಬ್ಯಾಸ್ ಬೀಸಿದ್ದಾರೆ. ರೋಹಿತ್ರ ಹೈಯೆಸ್ಟ್ ಸ್ಕೋರ್ ಅಂದ್ರೆ 2024ರ ಜನವರಿ 17ರಂದು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯ. ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ-20ಐ ಸರಣಿಯಲ್ಲಿ ಹೊಡಿಬಡಿ ಆಟವಾಡಿದ್ದ ರೋಹಿತ್ ಜಸ್ಟ್ 69 ಎಸೆತಗಳಲ್ಲಿ 11 ಫೋರ್, 8 ಸಿಕ್ಸರ್ ಸಮೇತ 121 ರನ್ ಚಚ್ಚಿ ನಾಟ್ಔಟ್ ಆಗಿದ್ರು. ಇದೇ ಇನ್ನಿಂಗ್ಸ್ ರೋಹಿತ್ ಬದುಕಿನ ಚುಟುಕು ಸಮರದ ಬೆಸ್ಟ್ ಇನ್ನಿಂಗ್ಸ್ ಆಗಿದೆ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟಿ-20 ವಿಶ್ವಕಪ್ನ ಮೊದಲ ಆವೃತ್ತಿಯಲ್ಲಿ ಆಡಿದ್ದ ರೋಹಿತ್ ಶರ್ಮಾ 2024ರಲ್ಲಿ ಕೆರೆಬಿಯನ್ ನಾಡಿನಲ್ಲಿ ಟಿ-20 ವಿಶ್ವಕಪ್ ಗೆಲ್ಲುವ ಮೂಲಕ ತಮ್ಮ ಟಿ-20 ಕರಿಯರ್ ಮುಗಿಸಿದ್ದಾರೆ. ಈ ಮೂಲಕ ರೋಹಿತ್ ಟೀಂ ಇಂಡಿಯಾ ಪರ ಟಿ-20ಐ ಫಾರ್ಮೇಟ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ.

ದಾಖಲೆಗಳ ಸರದಾರ ರನ್ ಮಷಿನ್ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ. ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಗೊತ್ತೋ ಗೊತ್ತಿಲ್ಲದೆಯೇ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ವಿರಾಟ್ ಕೊಹ್ಲಿ ಕಿಂಗ್ ಆಗಿದ್ದಾರೆ. ಕ್ರಿಕೆಟ್ ಕರಿಯರ್ ಕಟ್ಟಿಕೊಳ್ಬೇಕು ಅನ್ನೋರಿಗೆ ರೋಲ್ ಮಾಡೆಲ್. ಟಿ-20ಐ ಫಾರ್ಮೇಟ್ನಲ್ಲೂ ಅತ್ಯದ್ಭುತ ಪ್ರದರ್ಶನ ನೀಡಿರುವ ವಿರಾಟ್ ಅನೇಕ ದಾಖಲೆಗಳನ್ನ ಬರೆದಿದ್ದಾರೆ. 2010ರಲ್ಲಿ ಚುಟುಕು ಸಮರದ ಮಾದರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಿರಾಟ್ 2024ರ ಟಿ-20 ವಿಶ್ವಕಪ್ವರೆಗೂ 125 ಪಂದ್ಯಗಳನ್ನ ಆಡಿದ್ದಾರೆ. ಈ ವೇಳೆ 48.69ರ ಆವರೇಜ್, 137.04ರ ಸ್ಟ್ರೈಕ್ರೇಟ್ನಲ್ಲಿ 4,118 ರನ್ ಕಲೆ ಹಾಕಿದ್ದಾರೆ. ಭಾರತದ ಪರ ಟಿ-20 ಇತಿಹಾಸದಲ್ಲಿ ರೋಹಿತ್ ಶರ್ಮಾರನ್ನ ಹೊರತು ಪಡಿಸಿದ್ರೆ ವಿರಾಟ್ ಕೊಹ್ಲಿಯೇ ಅತೀ ಹೆಚ್ಚು ರನ್ ಸ್ಕೋರ್ ಮಾಡಿದವರ ಲಿಸ್ಟ್ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದ್ರೆ ವಿರಾಟ್ ಕೂಡ 2024ರ ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಚುಟುಕು ಸಮರಕ್ಕೆ ವಿದಾಯ ಘೋಷಿಸಿದ್ರು.

ಟಿ-20 ವಿಶ್ವಕಪ್ ಬೆನ್ನಲ್ಲೇ ರಾಹುಲ್ ದ್ರಾವಿಡ್ ವಿದಾಯ!

ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಗುತ್ತಿದ್ದಂತೆ ರಾಹುಲ್ ದ್ರಾವಿಡ್ ಕೂಡ ಕೋಚ್ ಸ್ಥಾನದಿಂದ ಕೆಳಗಿಳಿದಿದ್ರು. ಇನ್ಮುಂದೆ ಭಾರತ ತಂಡದ ತರಬೇತುದಾರರಾಗಿ ರಾಹುಲ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಟಿ20 ವಿಶ್ವಕಪ್ ಫೈನಲ್ ಪಂದ್ಯವು ದ್ರಾವಿಡ್ ಪಾಲಿಗೆ ತುಂಬಾ ಮಹತ್ವದ ಪಂದ್ಯವಾಗಿತ್ತು. ಅದರಂತೆ ಇದೀಗ ವಿಶ್ವಕಪ್ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಆಟಗಾರರು ಗುರುವಿಗೆ ಅತ್ಯುತ್ತಮ ಬೀಳ್ಕೊಡುಗೆ ನೀಡಿದ್ದಾರೆ. ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ ನಂತರ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದ್ರು ಹಲವು ಸಲ ಚಾಂಪಿಯನ್ ಪಟ್ಟದಿಂದ ಜಸ್ಟ್ ಮಿಸ್ ಆಗಿತ್ತು.  2022ರ ಟಿ 20 ವಿಶ್ವಕಪ್ನ ಸೆಮಿಫೈನಲ್ ತಲುಪಿದೆ. ಕಳೆದ ವರ್ಷ ಭಾರತ ತಂಡವು 2023ರ ಏಕದಿನ ವಿಶ್ವಕಪ್ ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ರನ್ನರ್ ಅಪ್ ಆಗಿತ್ತು. ಬಟ್ 2024ರ ಟಿ-20 ವಿಶ್ವಕಪ್ ಗೆಲ್ಲುವ ಮೂಲಕ ಜಗತ್ತನ್ನೇ ಗೆದ್ದ ಖುಷಿಯಲ್ಲಿ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ರು.

ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ!

ಭಾರತೀಯ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಕೂಡ ಅಂತರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿಯಾಗುವ ಮೂಲಕ ಶಾಕ್ ಕೊಟ್ಟಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಕುವೈತ್ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯಗಳ ಎರಡನೇ ಸುತ್ತಿನಲ್ಲಿ ಸುನಿಲ್ ಛೆಟ್ರಿ ದೇಶಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ರು. 39 ವರ್ಷ ವಯಸ್ಸಿನ ಛೆಟ್ರಿ, ಭಾರತಕ್ಕಾಗಿ ಆಡಿದ 150 ಪಂದ್ಯಗಳಲ್ಲಿ 94 ಗೋಲುಗಳನ್ನು ಗಳಿಸುವ ಮೂಲಕ ದೇಶದ ಅತ್ಯುತ್ತಮ ಫುಟ್ಬಾಲ್ ಆಟಗಾರನಾಗಿ ಹೆಸರು ಗಳಿಸಿದ್ದಾರೆ. ಪ್ರಸ್ತುತ ಅಂತರಾಷ್ಟ್ರೀಯ ಗೋಲ್ ಸ್ಕೋರರ್ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಒಲಿಂಪಿಕ್ಸ್ ಅನರ್ಹತೆ ಬೆನ್ನಲ್ಲೇ ಕುಸ್ತಿಗೆ ವಿದಾಯ ಹೇಳಿದ ಫೋಗಟ್!

ವಿನೇಶ್ ಫೋಗಟ್. ಸದ್ಯ ಭಾರತದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರೋ ಹೆಸರು. ಪ್ಯಾರಿಸ್ ನಲ್ಲಿ ನಡೆದ 2024ರ  ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆಜಿ ವಿಭಾಗದ ಫೈನಲ್ ನಲ್ಲಿ ಸೆಣೆಸಬೇಕಿದ್ದ ಫೋಗಟ್, ನಿಗದಿತ ತೂಕಕ್ಕಿಂತ ಕೇವಲ 150 ಗ್ರಾಂ ತೂಕ ಹೆಚ್ಚಾಗಿದ್ದ ಕಾರಣಕ್ಕೆ ಅನರ್ಹಗೊಂಡಿದ್ರು. ಇದ್ರಿಂದ ಮಾನಸಿಕವಾಗಿ ತೀವ್ರವಾಗಿ ಆಘಾತ ಅನುಭವಿಸಿದ ವಿನೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಟ್ವಿಟರ್ ನಲ್ಲಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಘೋಷಣೆ ಮಾಡಿದ್ರು. ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿತು, ನಾನು ಸೋತೆ. ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ ಎಂದು ಬರೆದುಕೊಂಡಿದ್ರು.

29 ವರ್ಷ ವಯಸ್ಸಿನ ವಿನೇಶ್ ಕಳೆದೊಂದು ದಶಕದಲ್ಲಿ ವಿಶ್ವ ಚಾಂಪಿಯನ್ಷಿಪ್, ಏಷ್ಯಾ ಚಾಂಪಿಯನ್ಷಿಪ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಜಯಿಸಿದ್ದಾರೆ. ಆದ್ರೆ ಮೂರು ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ರೂ ಅದೃಷ್ಟ ಕೈ ಹಿಡಿಯಲಿಲ್ಲ. 2016ರ ರಿಯೊ ಒಲಿಂಪಿಕ್ಸ್ನಲ್ಲಿ ಕಾಲಿನ ಗಾಯದಿಂದಾಗಿ ಹೊರಬಿದ್ದಿದ್ರು. 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋತರು. ಆದರೆ ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ 50 ಕೆ.ಜಿ. ವಿಭಾಗದಲ್ಲಿ ಘಟಾನುಘಟಿಗಳನ್ನು ಸೋಲಿಸಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ್ದರು. ಒಲಿಂಪಿಕ್ಸ್ ಚಿನ್ನದ ಪದಕ ಸುತ್ತಿಗೆ ಲಗ್ಗೆ ಇಟ್ಟ ಭಾರತದ ಮೊದಲ ಮಹಿಳೆಯೆಂಬ ಹೆಗ್ಗಳಿಕೆ ಅವರದ್ದು. ಆದರೆ ಫೈನಲ್ಗೂ ಮೊದಲು ನಡೆಸುವ ತೂಕ ಪರೀಕ್ಷೆಯಲ್ಲಿ ಮತ್ತೊಮ್ಮೆ ಅವರಿಗೆ ದುರದೃಷ್ಟ ಕಾಡಿತು. 100 ಗ್ರಾಂ ಹೆಚ್ಚುವರಿ ತೂಕಕ್ಕೆ ಅವರ ಜೀವಮಾನದ ಪರಿಶ್ರಮ, ತ್ಯಾಗ ಮತ್ತು ಭಾರತೀಯರ ಚಿನ್ನದ ಕನಸು ನುಚ್ಚು ನೂರಾಗಿತ್ತು. 2001ರಲ್ಲಿ ವೃತ್ತಿಪರ ಚೊಚ್ಚಲ ಪಂದ್ಯವಾಡಿದ್ದ ವಿನೇಶ್ 2024 ಕುಸ್ತಿಪಟುವಾಗಿ ಒಲಿಂಪಿಕ್ಸ್ಗೆ ಕಾಲಿಟ್ಟಿದ್ರು. ಘಟಾನುಘಟಿ ಕುಸ್ತಿಪಟುಗಳನ್ನೇ ಮಕಾಡೆ ಮಲಗಿಸಿ ಫಿನಾಲೆಗೆ ಲಗ್ಗೆ ಇಟ್ಟಿದ್ರು. ಆದ್ರೆ ಚಿನ್ನ ತಂದೇ ತರುತ್ತಾಳೆ ಅಂತಾ ಕಾಯ್ತಿದ್ದ ಭಾರತಕ್ಕೆ ಅನರ್ಹತೆಯ ಆಘಾರ ಎದುರಾಗಿತ್ತು.

4 ಒಲಿಂಪಿಕ್ಸ್.. 2 ಸಲ ಪದಕ.. ಶ್ರೀಜೇಶ್ ವಿದಾಯ!

ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆ. ಆದ್ರೆ ಕ್ರಿಕೆಟ್ಗೆ ಇರೋ ವ್ಯಾಲ್ಯೂ ಹಾಕಿಗೆ ಇಲ್ಲ. ಸದ್ಯ 2024ರ ಒಲಿಂಪಿಕ್ಸ್ನಲ್ಲಿ ನಮ್ಮ ಭಾರತದ ಹಾಕಿ ತಂಡ ಸತತ ಎರಡನೇ ಬಾರಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಹಾಕಿ ಕ್ರೀಡೆಯ ವಾಲ್ ಅಂತಾನೇ ಕರೆಸಿಕೊಳ್ಳೋ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್. 2006 ರಲ್ಲಿ ಹಾಕಿಗೆ ಪದಾರ್ಪಣೆ ಮಾಡಿದ್ದ ಶ್ರೀಜೇಶ್ ಒಟ್ಟು 4 ಒಲಿಂಪಿಕ್ಸ್ ಆಡಿದ್ದಾರೆ. ಈ ಪೈಕಿ 2 ಪದಕ ಗೆದ್ದಿದ್ದಾರೆ. 18 ವರ್ಷಗಳ ವೃತ್ತಿಜೀವನವನ್ನು ಕೊನೆಗೊಳಿಸಿರುವ ಶ್ರೀಜೇಶ್ ಹಾಕಿ ತಂಡದ ಬೆನ್ನೆಲುಬಾಗಿದ್ರು. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ನಂತರ ವಿದಾಯ ಘೋಷಿಸಿದ್ರು. ಸದ್ಯ 36 ವರ್ಷದ ಶ್ರೀಜೇಶ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಜೂನಿಯರ್ ಪುರುಷರ ಹಾಕಿ ತಂಡಕ್ಕೆ ಮುಖ್ಯಕೋಚ್ ಆಗಿ ಅವರನ್ನು ನೇಮಿಸಲಾಗಿದೆ.

ಕ್ರಿಕೆಟ್.. ಕುಸ್ತಿ, ಹಾಕಿ ಹೀಗೆ ಹಲವು ವಿಭಾಗಗಳಲ್ಲಿ ದೇಶದ ಕೀರ್ತಿಪತಾಕೆಯನ್ನ ಜಗತ್ತಿನೆಲ್ಲೆಡೆ ಹಾರಿಸಿದ್ದ ಮಹಾನ್ ಸಾಧಕರು ನಿವೃತ್ತಿಯ ಶಾಕ್ ನೀಡಿದ್ದಾರೆ. ಜಸ್ಟ್ 2 ತಿಂಗಳ ಅವಧಿಯಲ್ಲಿ ಹಲವು ಲೆಜೆಂಡ್ಗಳ ಯುಗಾಂತ್ಯವಾಗಿದೆ.

Shwetha M

Leave a Reply

Your email address will not be published. Required fields are marked *