ಕೊಲೆ, ರೇಪ್, ದೌರ್ಜನ್ಯ.. ಅಬ್ಬಬ್ಬಾ ಒಂದಾ ಎರಡಾ – ರಾಜ್ಯದ ಶೇ.55ರಷ್ಟು ಶಾಸಕರ ಮೇಲಿವೆ ಕ್ರಿಮಿನಲ್ ಕೇಸ್!

ಕೊಲೆ, ರೇಪ್, ದೌರ್ಜನ್ಯ.. ಅಬ್ಬಬ್ಬಾ ಒಂದಾ ಎರಡಾ – ರಾಜ್ಯದ ಶೇ.55ರಷ್ಟು ಶಾಸಕರ ಮೇಲಿವೆ ಕ್ರಿಮಿನಲ್ ಕೇಸ್!

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅನ್ನೋ ಮಾತಿದೆ. ಆದರೆ ಈಗ ಬಹುಶಃ ಅದನ್ನ ಇಂದಿನ ಕ್ರಿಮಿನಲ್ ಗಳೇ ಮುಂದಿನ ರಾಜಕಾರಣಿಗಳು ಎಂದು ಬದಲಿಸಿಕೊಳ್ಳಬಹುದು ಅನ್ನಿಸುತ್ತೆ. ಯಾಕಂದ್ರೆ ಕ್ರೈಂ ಮತ್ತು ಪಾಲಿಟಿಕ್ಸ್ ಎರಡಕ್ಕೂ ಎಲ್ಲಿಲ್ಲದ ನಂಟು. ಕೆಲವರು ಅಪರಾಧ ಮಾಡಿ ರಾಜಕೀಯಕ್ಕೆ ಬಂದ್ರೆ ಇನ್ನೂ ಕೆಲವರು ಖಾದಿ ತೊಟ್ಟ ಮೇಲೆ ಅಪರಾಧಗಳಲ್ಲಿ ಭಾಗಿಯಾಗುತ್ತಾರೆ. ಅದರಲ್ಲೂ ಈ ಬಾರಿಯ ಚುನಾವಣೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಶಾಸಕರ ಸಂಖ್ಯೆಯೇ ಭಯ ಹುಟ್ಟಿಸುವಂತಿದೆ.

ಇದನ್ನೂ ಓದಿ : ಆಡಳಿತ ಪಕ್ಷವಾಗಿದ್ರೂ ಜನಮನ ಗೆಲ್ಲುವಲ್ಲಿ ಫೇಲ್ – ಹೀನಾಯ ಸೋಲಿಗೆ ಕಾರಣ ಹುಡುಕಿದ ಬಿಜೆಪಿ ನಾಯಕರು!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ಮುಗಿದು ಮೇ 13ರಂದು ಫಲಿತಾಂಶ ಹೊರಬಿದ್ದಿದೆ. 135 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಆದರೆ ಈ ಬಾರಿ ಕ್ರಿಮಿನಲ್‌ ಹಿನ್ನೆಲೆಯುಳ್ಳ ಶಾಸಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕರ್ನಾಟಕ ಎಲೆಕ್ಷನ್‌ ವಾಚ್‌ ಮತ್ತು ಅಸೋಸಿಯೇಷನ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿಯಲ್ಲಿ ಕರ್ನಾಟಕದ ಶೇ.55ರಷ್ಟು ಶಾಸಕರಿಗೆ ಕ್ರಿಮಿನಲ್‌ ಹಿನ್ನೆಲೆ ಎಂಬುದು ಬಹಿರಂಗವಾಗಿದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ 122 ಶಾಸಕರು ಕ್ರಿಮಿನಲ್‌ ಹಿನ್ನೆಲೆಯುಳ್ಳವರಾಗಿದ್ದಾರೆ. ಅದರಲ್ಲಿ ಶೇ.32ರಷ್ಟು ಶಾಸಕರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ ಬಾರಿಗೆ ಹೋಲಿಸಿದರೆ ಅಪರಾಧ ಹಿನ್ನೆಲೆ ಹೊಂದಿರುವ ಶಾಸಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಬಾರಿ ಅಂದ್ರೇ 2018ರಲ್ಲಿ ಶೇ.35ರಷ್ಟು ಶಾಸಕರು ಅಪರಾಧ ಹಿನ್ನೆಲೆ ಹೊಂದಿದ್ದು, ಅದರಲ್ಲಿ ಶೇ.24ರಷ್ಟು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿದ್ದರು.

ಕಾಂಗ್ರೆಸ್‌ ಶಾಸಕರ ಪೈಕಿ ಶೇ.58ರಷ್ಟು ಎಂಎಲ್‌ಎಗಳು ಅಪರಾಧ ಹಿನ್ನೆಲೆ ಹೊಂದಿದ್ದರೆ, ಶೇ.52ರಷ್ಟು ಬಿಜೆಪಿ ಶಾಸಕರು ಕ್ರಿಮಿನಲ್‌ ಬ್ಯಾಕ್‌ಗ್ರೌಂಡ್‌ ಹೊಂದಿದ್ದಾರೆ. ಜೆಡಿಎಸ್‌ನ ಶೇ.47ಷ್ಟು ಶಾಸಕರ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಾಂಗ್ರೆಸ್‌ನ 40 ಮಂದಿ, ಬಿಜೆಪಿಯ 23, ಜೆಡಿಎಸ್‌ನ 7 ಜನರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಓರ್ವ ಶಾಸಕರ ಮೇಲೆ ಕೊಲೆ ಪ್ರಕರಣ ಇದ್ದು, ಒಬ್ಬರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. 7 ಶಾಸಕರ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

suddiyaana