51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿದ ಬಿಬಿಎಂಪಿ!
ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಸ್ಕ್ವೇರ್ ಮಾಲ್‌ಗೆ ಮತ್ತೊಮ್ಮೆ ಬೀಗ ಹಾಕಲಾಗಿದೆ. ಬಾಕಿ ಉಳಿದಿರುವ ತೆರಿಗೆ ಬಾಕಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂತ್ರಿ ಸ್ಕ್ವೇರ್ ಮಾಲ್‌ಗೆ ಮತ್ತೊಮ್ಮೆ ಬೀಗ ಜಡಿದಿದೆ.
ಇದನ್ನೂ ಓದಿ: ತೀವ್ರಗೊಂಡ ಕರವೇ ಹೋರಾಟದ ಕಿಚ್ಚು – ರಾತ್ರೋರಾತ್ರಿ ನಾರಾಯಣಗೌಡ ಅರೆಸ್ಟ್, 14 ದಿನ ನ್ಯಾಯಾಂಗ ಬಂಧನ
ಮಲ್ಲೇಶ್ವರಂನಲ್ಲಿರುವ ಮಂತಿ ಸ್ಕ್ವೇರ್ ಮಾಲ್‌ನ 2019-20ರವರೆಗಿನ ತೆರಿಗೆ ಬಾಕಿಯನ್ನು ಪಾವತಿಸುವಂತೆ ಬಿಬಿಎಂಪಿ ಮಾಲ್‌ನ ಆಡಳಿತ ಮಂಡಳಿಗೆ ಸೂಚಿಸಿತ್ತು. ಬಳಿಕ 2020ರ ಆಗಸ್ಟ್ನಲ್ಲಿ ಬಿಬಿಎಂಪಿಗೆ ನ ಆಡಳಿತ ಮಂಡಳಿ 10 ಕೋಟಿ ರೂ. ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರು ಕೂಡ ಮಾಲ್‌ನ ಆಡಳಿತ ಮಂಡಳಿ ತೆರಿಗೆ ಪಾವತಿಸಲು ಕ್ರಮ ಕೈಗೊಂಡಿಲ್ಲ. ಸುಮಾರು 51 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಮಂತ್ರಿ ಸ್ಕ್ವೇರ್ ಮಾಲ್‌ನ ಪ್ರಮುಖ ದ್ವಾರಕ್ಕೆ ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ರಿಂದ ಲಾಕ್ ಮಾಡಲಾಗಿದೆ.
ತೆರಿಗೆ ಪಾವತಿಸದ ವಿಚಾರವಾಗಿ ಮಂತ್ರಿ ಸ್ಕ್ವೇರ್ ಮಾಲ್‌ಗೆ ಬಿಬಿಎಂಪಿ ಬೀಗ ಜಡಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮಂತ್ರಿ ಮಾಲ್ ಸುಮಾರು 42,63,40,874 ರೂ. ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಆ ವೇಳೆ ಮಾಲ್ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. 2021ರಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದರು. ಬಳಿಕ ಮಂತ್ರಿ ಮಾಲ್ ಬೀಗ ಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಮತ್ತೆ ಮಾಲ್ ಗೆ ಬೀಗ ಹಾಕಲಾಗಿದೆ.