ಕರ್ನಾಟಕ ಬಂದ್‌ನಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊಡೆತ – ಒಂದೇ ದಿನದಲ್ಲಿ ಬರೋಬ್ಬರಿ 5,000 ಕೋಟಿ ರೂ. ನಷ್ಟ!
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಶುಕ್ರವಾರ ಕರ್ನಾಟಕ ಬಂದ್ ಮಾಡಲಾಗಿತ್ತು. ಬಂದ್‌ನಿಂದಾಗಿ ರಾಜ್ಯಾದ್ಯಂತ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿತ್ತು. ಇದರಿಂದಾಗಿ ಬರೋಬ್ಬರಿ 5 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ. ಇನ್ನು ಒಂದೇ ದಿನ ಎಲ್ಲಾ ರೀತಿಯ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಂದ ಸಂಗ್ರಹವಾಗುತ್ತಿದ್ದ 400 ಕೋಟಿ ರೂ.ಗೂ ಅಧಿಕ ತೆರಿಗೆ ಹಣಕ್ಕೆ ಹೊಡೆತ ಬಿದ್ದಿದೆ ಎಂದು ವರದಿಯಾಗಿದೆ.
ಕರ್ನಾಟಕ ಬಂದ್‌ನಿಂದ್‌ಗೆ ರಾಜ್ಯದಾದ್ಯಂತ ಇರುವ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯದ ಸುಮಾರು ಶೇ.70ರಷ್ಟು ಉದ್ಯಮಿಗಳು ಬೆಂಬಲ ನೀಡಿದ್ದಾರೆ. ಈ ಬಂದ್‌ಗೆ ಎಫ್‌ಕೆಸಿಸಿಐ ಕೂಡ ಸಂಪೂರ್ಣ ಬೆಂಬಲ ನೀಡಿದ್ದು, ಬಂದ್‌ನಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 400 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೀನುಗಾರರ ಬಲೆಗೆ ಬಿತ್ತು 300 ಕೆಜಿ ತೂಕದ ಮುರು ಮೀನು! – ಮೀನು ಮಾರಾಟವಾದ ಬೆಲೆ ಎಷ್ಟು ಗೊತ್ತಾ?
ಬಂದ್ ಹಿನ್ನೆಲೆ ಬೆಂಗಳೂರು ಒಂದರಲ್ಲಿಯೇ ರೆಸ್ಟೋರೆಂಟ್, ಬೇಕರಿ, ಸ್ವೀಟ್ ಸ್ಟಾಲ್, ಐಸ್‌ಕ್ರೀಮ್ ಪಾರ್ಲರ್‌ಗಳೂ ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳು ಬಂದ್ ಬೆಂಬಲಿಸಿ ವಹಿವಾಟು ಸ್ಥಗಿತಗೊಳಿಸಿದವು. ಶಾಲಾ ಕಾಲೇಜುಗಳು, ಕೈಗಾರಿಕೆಗಳು, ಖಾಸಗಿ ಕಂಪನಿಗಳಿಗೆ ಮುಂಚಿತವಾಗಿ ರಜೆ ಘೋಷಿಸಲಾಗಿತ್ತು. ಐಟಿ ಮಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಿದರು. ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಿದರೂ ನೌಕರರ ಹಾಜರಾತಿ ಕಡಿಮೆಯಿತ್ತು. ಜನರು ಕಚೇರಿ, ಬ್ಯಾಂಕ್‌ಗಳತ್ತ ಮುಖ ಮಾಡಲಿಲ್ಲ. ಅಷ್ಟೇ ಅಲ್ಲದೇ ದಿಲ್ಲಿ, ಮುಂಬಯಿ, ಕೋಲ್ಕತ್ತಾ, ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಕೆಐಎಎಲ್‌ಗೆ ಬರಬೇಕಿದ್ದ 22 ವಿಮಾನಗಳ ಹಾರಾಟ ರದ್ದಾಗಿತ್ತು. ಬಂದ್‌ನ ಕಾರಣಕ್ಕೆ ಓಲಾ, ಉಬರ್ ಟ್ಯಾಕ್ಸಿ, ಕ್ಯಾಬ್ ಸಂಚಾರ ಇರಲಿಲ್ಲ. ಹೀಗಾಗಿ, ಜನರ ಓಡಾಟ ವಿರಳವಾಗಿತ್ತು. ಈ ಎಲ್ಲಾ ಅಂಶಗಳು ರಾಜ್ಯದ ಉದ್ಯಮದ ಮೇಲೆ ಪರಿಣಾಮ ಬೀರಿವೆ ಎಂದು ವರದಿಯಾಗಿದೆ.