ಪಾಕ್ ನ 50 ಪ್ಲೇಯರ್ಸ್ UNSOLD – ಇಂಗ್ಲೆಂಡ್ ನಲ್ಲೂ ಕೇಳೋರೇ ದಿಕ್ಕಿಲ್ವಾ?

ಐಸಿಚಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿ ಕೈಸುಟ್ಟುಕೊಂಡಿರೋ ಪಾಕ್ ಕ್ರಿಕೆಟ್ ಮಂಡಳಿ ತಮ್ಮ ಆಟಗಾರರ ಸಂಬಳಕ್ಕೆ ಕತ್ತರಿ ಹಾಕಿತ್ತು. ಹಿಂಗಾದ್ರೂ ಸ್ವಲ್ಪ ಹಣ ಉಳಿಸೋಣ ಅನ್ನೋದು ಪಿಸಿಬಿ ಪ್ಲ್ಯಾನ್. ಮತ್ತೊಂದೆಡೆ ತಮ್ಮ ದೇಶದಲ್ಲಿ ಸಿಗೋ ಚಿಲ್ರೆ ಕಾಸು ಸಾಕಾಗಲ್ಲ ಅಂತಾ ಪಾಕ್ ಆಟಗಾರರು ಬೇರೆ ದೇಶಗಳ ಲೀಗ್ಗಳತ್ತ ಮುಖ ಮಾಡಿದ್ರು. ಇಂಗ್ಲೆಂಡ್‌ನ ಪ್ರತಿಷ್ಠಿತ ದಿ ಹಂಡ್ರೆಡ್ ಲೀಗ್ ಟೂರ್ನಿಗೆ ಹೆಸರನ್ನೂ ನೋಂದಾಯಿಸಿಕೊಂಡಿದ್ರು. ಬಟ್ ಅಲ್ಲೂ ಕೂಡ ಅವ್ರನ್ನ ಕೇಳೋರೇ ಇಲ್ಲದಂತಾಗಿದೆ.
ಇದನ್ನೂ ಓದಿ : ಗುಜರಾತ್ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ – MI- ಡೆಲ್ಲಿ ನಡುವೆ ಡಬ್ಲ್ಯುಪಿಎಲ್ ಫೈನಲ್
ಇಂಗ್ಲೆಂಡ್‌ನ ಜನಪ್ರಿಯ ದಿ ಹಂಡ್ರೆಡ್ ಕ್ರಿಕೆಟ್ ಲೀಗ್‌ನ 2025ರ ಆವೃತ್ತಿಗಾಗಿ ನಡೆದ ಆಟಗಾರರ ಡ್ರಾಫ್ಟ್‌ನಲ್ಲಿ ಶಾಕಿಂಗ್ ಡವಲಪ್ಮೆಂಟ್ ಆಗಿದೆ. ಪಾಕಿಸ್ತಾನದ ಒಟ್ಟು 50 ಆಟಗಾರರು ಈ ಡ್ರಾಫ್ಟ್‌ಗೆ ನೋಂದಾಯಿಸಿದ್ದರೂ, ಯಾವುದೇ ತಂಡಗಳು ಒಬ್ಬೇ ಒಬ್ಬ ಪಾಕಿಸ್ತಾನಿ ಕ್ರಿಕೆಟಿಗನನ್ನೂ ಖರೀದಿ ಮಾಡಿಲ್ಲ. ಪಾಕ್ನ ಪ್ರಸಿದ್ಧ ಆಟಗಾರರಾದ ನಸೀಮ್ ಷಾ, ಇಮಾದ್ ವಸೀಮ್, ಶಾದಾಬ್ ಖಾನ್ ಮತ್ತು ಹಸನ್ ಅಲಿ ಸೇರಿದಂತೆ ಹಲವು ಸ್ಟಾರ್ ಕ್ರಿಕೆಟಿಗರು ಭಾಗವಹಿಸಿದ್ದರು. ಆದರೆ, ಎಂಟು ತಂಡಗಳಲ್ಲಿ ಯಾವೊಂದೂ ತಂಡವೂ ಈ ಆಟಗಾರರನ್ನು ಆಯ್ಕೆ ಮಾಡಲಿಲ್ಲ. ಇದೇ ರೀತಿ, ಮಹಿಳಾ ಡ್ರಾಫ್ಟ್‌ನಲ್ಲಿ ನೋಂದಾಯಿಸಿದ ಐವರು ಪಾಕಿಸ್ತಾನಿ ಆಟಗಾರ್ತಿಯರೂ ಆಯ್ಕೆಯಾಗಿಲ್ಲ. ಪಾಕ್ನ ಯಾರೊಬ್ರೂ ಸೆಲೆಕ್ಟ್ ಆಗದೇ ಇದ್ರೂ ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೇಲಿಯಾದ ಆಟಗಾರರು ಸ್ಥಾನ ಪಡೆದಿದ್ದಾರೆ.
ಪಾಕ್ ಆಟಗಾರರ ಅನ್ ಸೋಲ್ಡ್ ಹಿಂದೆ ಐಪಿಎಲ್ ಪ್ರಭಾವ ಕೇಳಿ ಬರ್ತಿದೆ. ಯಾಕಂದರೆ ಈ ಬಾರಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಫ್ರಾಂಚೈಸಿಗಳಲ್ಲಿ ಹೂಡಿಕೆ ಮಾಡಲು ಹೊರಗಿನವರಿಗೆ ಆಹ್ವಾನ ನೀಡಿತ್ತು. ಆ ಪ್ರಕಾರ, ಲೀಗ್‌ನಲ್ಲಿ ಆಡುತ್ತಿರುವ 8 ತಂಡಗಳ ಪೈಕಿ, ನಾಲ್ಕು ತಂಡಗಳಲ್ಲಿ ಐಪಿಎಲ್ ಫ್ರಾಂಚೈಸಿಗಳು ಹೂಡಿಕೆ ಮಾಡಿವೆ. ಹೀಗಾಗಿ ಐಪಿಎಲ್ ಫ್ರಾಂಚೈಸಿಗಳು ಪಾಕಿಸ್ತಾನ ಆಟಗಾರರನ್ನು ಖರೀದಿಸದಂತೆ ತಡೆದಿವೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಇಲ್ಲಿರುವ ದೊಡ್ಡ ಪ್ರಶ್ನೆಯೆಂದರೆ, ಐಪಿಎಲ್ ತಂಡಗಳ ಒಡೆತನದಲ್ಲಿಲ್ಲದ ಇತರ ನಾಲ್ಕು ತಂಡಗಳು ಪಾಕಿಸ್ತಾನಿ ಆಟಗಾರರನ್ನು ಏಕೆ ಖರೀದಿಸಲಿಲ್ಲ ಅನ್ನೋದು. ಇನ್ನು ಇಷ್ಟೇ ಅಲ್ಲ ದಕ್ಷಿಣ ಆಫ್ರಿಕಾದ SA20 ಲೀಗ್‌ನಲ್ಲಿರುವ ಎಲ್ಲಾ ಆರು ತಂಡಗಳು ಸಹ ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿವೆ. ಈ ಲೀಗ್ನಲ್ಲೂ ಇಲ್ಲಿಯವರೆಗೆ ಒಬ್ಬ ಪಾಕಿಸ್ತಾನಿ ಆಟಗಾರನೂ ಈ ಲೀಗ್‌ನಲ್ಲಿ ಸ್ಥಾನ ಪಡೆದಿಲ್ಲ.
ಅಸಲಿಗೆ ಹಿಂದಿನ ಸೀಸನ್ಗಳಲ್ಲಿ ಶಾಹೀನ್ ಶಾ ಆಫ್ರಿದಿ, ಶಾದಾಬ್ ಖಾನ್, ಹಾರಿಸ್ ರೌಫ್, ಇಮಾದ್ ವಸೀಮ್ ಮತ್ತು ಮೊಹಮ್ಮದ್ ಅಮೀರ್‌ರಂತಹ ಪಾಕಿಸ್ತಾನಿ ಆಟಗಾರರು ದಿ ಹಂಡ್ರೆಡ್ ಲೀಗ್‌ನಲ್ಲಿ ಆಡಿದ್ದರು. ಆದರೆ, ಈ ಬಾರಿ ಯಾವೊಬ್ಬ ಪಾಕ್ ಆಟಗಾರನಿಗೂ ಸ್ಥಾನ ಸಿಗದಿರುವುದು ಪಾಕಿಸ್ತಾನ ಕ್ರಿಕೆಟ್‌ಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಬಾರೀ ಚರ್ಚೆಯಾಗ್ತಿದೆ. ಕೆಲವರು ಇದನ್ನು ಪಾಕಿಸ್ತಾನ ಕ್ರಿಕೆಟ್‌ಗೆ ಮುಖಭಂಗ ಎಂದರೆ, ಇನ್ನು ಕೆಲವರು ಐಪಿಎಲ್ ಮಾಲೀಕರ ಮೇಲೆ ಆರೋಪ ಮಾಡಿದ್ದಾರೆ. ಒಟ್ನಲ್ಲಿ ಪಾಕಿಸ್ತಾನ ಕ್ರಿಕೆಟ್ನಲ್ಲಿ ಮೊದ್ಲೇ ಒಂದರ ಹಿಂದೆ ಒಂದರಂತೆ ಕೈಸುಟ್ಟುಕೊಳ್ತಿದೆ. ಈಗ ಆಟಗಾರರ ವ್ಯಾಲ್ಯೂ ಕೂಡ ಕಮ್ಮಿಯಾಗ್ತಿರೋದು ಕ್ರಿಕೆಟ್ ಜಗತ್ತಿನಲ್ಲೂ ಕವಡೆ ಕಾಸಿನ ಕಿಮ್ಮತ್ತು ಸಿಗಲ್ವಾ ಅನ್ನೋ ಪ್ರಶ್ನೆಗಳು ಮೂಡಿವೆ.