5 ವರ್ಷ 40 ಸಾವು.. ಸಾಲು ಸಾಲು ದುರಂತ– ಸಾವಿನ ಸೆಲೆಯಾಗುತ್ತಿದೆಯಾ ವಿಸಿ ನಾಲೆ

5 ವರ್ಷ 40 ಸಾವು.. ಸಾಲು ಸಾಲು ದುರಂತ– ಸಾವಿನ ಸೆಲೆಯಾಗುತ್ತಿದೆಯಾ ವಿಸಿ ನಾಲೆ

ವಿಸಿ ನಾಲೆ. ಈ ಹೆಸರು ಕಿವಿಗೆ ಅಪ್ಪಳಿಸಿದರೆ ಮಂಡ್ಯದ ಜನರು ನಮ್ಮ ಜೀವನಾಡಿ ಎಂದು ಹೆಮ್ಮೆ ಪಡುತ್ತಿದ್ದರು. ಆದರೆ, ಈಗ ವಿಸಿ ನಾಲೆ ಜೀವಸೆಲೆಯಾಗಿ ಉಳಿದಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಯಾಕೆಂದರೆ ಯಾವುದು ಜೀವಸೆಲೆ ಅಂತಾ ಜನ ಅಂದುಕೊಂಡಿದ್ದರೋ ಅದೇ ನಾಲೆ ಈಗ ಸಾವಿನ ಬಲೆಯಾಗಿದೆ. ಸಾವಿನ ಸೆಲೆಯಾಗಿ ಒಬ್ಬರ ಮೇಲೆ ಒಬ್ಬರಂತೆ ಜೀವವನ್ನು ಬಲಿ ಪಡೆಯುತ್ತಿದೆ.

ಇದನ್ನೂ ಓದಿ:  ಮಹಿಳೆಯನ್ನು ಬಲಿ ಪಡೆದ ಆನೆ ಸೆರೆಗೆ ಸರ್ಕಾರದ ಆದೇಶ – ಒಂಟಿ ಸಲಗ ಹಿಡಿಯಲು ಫೀಲ್ಡಿಗಿಳಿದ ಗಜಪಡೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟದ ಬಳಿ ಮಂಗಳವಾರ ಸಂಜೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದಿದೆ. ಮಗು ಸೇರಿ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದರು. ಈ ಘಟನೆಯಿಂದ ಇಡೀ ಮಂಡ್ಯ ಜಿಲ್ಲೆಯ ಜನ ತುಂಬಾ ನೋವು ಪಟ್ಟಿದ್ದರು. ವಿಸಿ ನಾಲೆಯಲ್ಲಿ ಆಗಿರುವ ದುರಂತಕ್ಕೆ ಜನ ನೋವು ಪಟ್ಟಿರುವುದಕ್ಕೆ ಇದೊಂದೇ ಘಟನೆಗೆ ಅಂತಲ್ಲ. ಇಲ್ಲಿ ಕಳೆದ ಐದು ವರ್ಷಗಳಲ್ಲಿ 40 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಅದರಲ್ಲೂ ಮೂರು ತಿಂಗಳಲ್ಲಿ ಮೂರು ಕಾರುಗಳು ವಿಸಿ ನಾಲೆಗೆ ಉರುಳಿ ಬಿದ್ದಿವೆ. ಜುಲೈ 27ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯಲ್ಲಿ ವಿಸಿ ನಾಲೆಗೆ ಕಾರು ಉರುಳಿ ಲೋಕೇಶ್ ಎಂಬುವವರು ಸಾವನ್ನಪ್ಪಿದ್ದರು. ಜುಲೈ 29ರಂದು ಶ್ರೀರಂಗಪಟ್ಟಣದ ಗಾಮನಗಳ್ಳಿಯ ವಿಸಿ ನಾಲೆಗೆ ಕಾರು ಉರುಳಿ ನಾಲ್ವರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದರು. ಇದಾದ ಮೇಲೆ ಮಂಗಳವಾರ ಪಾಂಡವಪುರ ಬನಘಟ್ಟದ ವಿಸಿ ನಾಲೆಗೆ ಕಾರು ಉರುಳಿ ಐವರೂ ಕೂಡಾ ಜಲಸಮಾಧಿಯಾಗಿರುವುದು ನಿಜಕ್ಕೂ ದುರಂತವೇ ಸರಿ.

ಮೇಲಿಂದ ಮೇಲೆ ದುರಂತ ಸಂಭವಿಸುತ್ತಿರುವುದು ನೋಡಿ ಸ್ಥಳೀಯರು ಆತಂಕಗೊಂಡಿದ್ದಾರೆ. ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣ ಆಗ್ತಿದೆ. ಘಟನೆ ನಡೆದಿರುವ ಸ್ಥಳದಲ್ಲಿ ಯಾವುದೇ ಸೂಚನೆ ಫಲಕ, ತಡೆಗೋಡೆ ಹಾಕಲಾಗಿಲ್ಲ. ಈ ಹಿಂದೆ ಇಂಥ ದುರಂತ ಘಟನೆಗಳು ನಡೆದಿದ್ದರೂ ತಡೆಗೋಡೆ, ಸೂಚನಾ ಫಲಕ ಹಾಕದಿರುವುದು ಕೂಡಾ ಕಾರಣವಾಗಿದೆ. ಮಂಗಳವಾರ ನಡೆದ ದುರಂತದಿಂದ ಎಚ್ಚೆತ್ತುಕೊಂಡಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಡೆಗೋಡೆ ಮತ್ತೆ ಸೂಚನ ಫಲಕ ಅಳವಡಿಕೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಧಿಕಾರಿಗಳ ತುರ್ತು ಸಭೆ ಕರೆದಿರುವ ಶಾಸಕ ದರ್ಶನ ಪುಟ್ಟಣ್ಣಯ್ಯ ಎಚ್ಚರಿಕೆ ಕ್ರಮ ಕೈಗೊಳ್ಳಲು ಹೇಳಿದ್ದಾರೆ.

2018ರ ನವೆಂಬರ್ 24 ರಂದು ಕನಗನಮರಡಿ ಬಸ್ ದುರಂತದಲ್ಲಿ 30 ಜನ ಸಾವಿಗೀಡಾಗಿದ್ದರು. ಇದಾದ ಮೇಲೆ ಒಂದಲ್ಲಾ ಒಂದು ದುರಂತ ಸಂಭವಿಸುತ್ತಲೇ ಇದೆ. ಇನ್ನಾದರೂ ರಸ್ತೆ ಸಮೀಪವಿರುವ ನಾಲೆಗೆ ವಾಹನಗಳು ಉರುಳಿಬೀಳದಂತೆ ತಡೆಗೋಡೆ ನಿರ್ಮಿಸಬೇಕಿದೆ. ಜನರ ಪ್ರಾಣ ಕಾಪಾಡಬೇಕಿದೆ. ಇಲ್ಲದಿದ್ದರೆ ಯಾವುದು ಜೀವ ಸೆಲೆ ಅಂದುಕೊಂಡಿದ್ದರೋ ಅದುವೆ ಸಾವಿನ ಸೆಲೆಯಾಗುತ್ತಿದೆ.

Sulekha