ಗ್ಲೋಬಲ್ ಸೂಪರ್ ಲೀಗ್ ನಲ್ಲಿ ವಿಶ್ವದ 5 ತಂಡಗಳು – ನವೆಂಬರ್ 26 ರಿಂದ ಡಿಸೆಂಬರ್ 7 ರವರೆಗೆ ಟಿ20 ಕ್ರಿಕೆಟ್ ಹಬ್ಬ

ಟಿ20 ಕ್ರಿಕೆಟ್ಗೆ ಮತ್ತೊಂದು ಹೊಸ ಲೀಗ್ ಸೇರ್ಪಡೆಯಾಗಿದೆ. ಗ್ಲೋಬಲ್ ಸೂಪರ್ ಲೀಗ್ ಎಂಬ ಹೆಸರಿನ ಫ್ರಾಂಚೈಸಿ ಲೀಗ್‌ನಲ್ಲಿ ವಿಶ್ವದ 5 ತಂಡಗಳು ಕಣಕ್ಕಿಳಿಯಲಿದೆ. ಈ ಮೂಲಕ ಬೇರೆ ದೇಶಗಳ ಫ್ರಾಂಚೈಸಿ ತಂಡಗಳನ್ನು ಒಂದೆಡೆ ಸೇರಿಸಲು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ಗಯಾನಾದಲ್ಲಿ ನಡೆಯಲಿರುವ ಈ ಲೀಗ್ನ ಬಹುಮಾನ ಮೊತ್ತ 1 ಮಿಲಿಯನ್ ಯುಎಸ್ ಡಾಲರ್. ಇದು ಭಾರತೀಯ ಮೌಲ್ಯದಲ್ಲಿ ಸುಮಾರು 8 ಕೋಟಿ ರೂಪಾಯಿ. ಈ ಟೂರ್ನಿ ನವೆಂಬರ್ 26 ರಿಂದ ಡಿಸೆಂಬರ್ 7 ರವರೆಗೆ ನಡೆಯಲಿದೆ.
ಇದನ್ನೂ ಓದಿ: SLKಗೆ ಟ್ರೋಫಿ ಗೆದ್ದುಕೊಟ್ಟ ಫಾಫ್ – RCBಯಲ್ಲೇ ಉಳೀತಾರಾ ಡುಪ್ಲೆಸಿಸ್?
ಇನ್ನು ಗ್ಲೋಬಲ್ ಸೂಪರ್ ಲೀಗ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ನಿಂದ ಗಯಾನಾ ಅಮೆಝಾನ್ ವಾರಿಯರ್ಸ್ ಕಣಕ್ಕಿಳಿಯುವುದು ಖಚಿತವಾಗಿದೆ. ಹಾಗೆಯೇ ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಚಾಂಪಿಯನ್ ತಂಡ ಹ್ಯಾಂಪ್‌ಶೈರ್‌ಗೆ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಇನ್ನು ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಿಂದ ಒಂದು ತಂಡ ಆಯ್ಕೆಯಾಗಲಿದೆ ಎಂದು ತಿಳಿದು ಬಂದಿದೆ. ಇನ್ನುಳಿದ ಎರಡು ತಂಡಗಳಾವುವು ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ. ಈ ಹಿಂದೆ ಬಿಸಿಸಿಐ ವಿಶ್ವದ ಪ್ರಮುಖ ಲೀಗ್ಗಳ ಚಾಂಪಿಯನ್ ತಂಡಗಳನ್ನು ಒಳಗೊಂಡಂತೆ ಚಾಂಪಿಯನ್ಸ್ ಲೀಗ್ ಅನ್ನು ಆಯೋಜಿಸಿತ್ತು. 2009-10 ರಿಂದ 2014-15 ರವರೆಗೆ ನಡೆದಿದ್ದ ಈ ಟೂರ್ನಿಯಲ್ಲಿ ಐಪಿಎಲ್ನ ಮೂರು ತಂಡಗಳು, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಲೀಗ್ನಿಂದ ತಲಾ ಎರಡು ತಂಡಗಳು ಹಾಗೂ ಪಾಕಿಸ್ತಾನ್, ವೆಸ್ಟ್ ಇಂಡೀಸ್ ಮತ್ತು ನ್ಯೂಝಿಲೆಂಡ್ನ ಟಿ20 ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡಗಳು ಕಣಕ್ಕಿಳಿದಿದ್ದವು.