IPLನಲ್ಲಿ ಅಬ್ಬರಿಸದ ರೋಹಿತ್ ವಿಶ್ವಕಪ್ ಗೆಲ್ತಾರಾ? – ಫ್ಯಾನ್ಸ್ ಕೆರಳಿದ್ದು ಯಾಕೆ?  

IPLನಲ್ಲಿ ಅಬ್ಬರಿಸದ ರೋಹಿತ್ ವಿಶ್ವಕಪ್ ಗೆಲ್ತಾರಾ? – ಫ್ಯಾನ್ಸ್ ಕೆರಳಿದ್ದು ಯಾಕೆ?  

ಐಪಿಎಲ್ ಹಬ್ಬ ಮುಗಿದ ಬೆನ್ನಲ್ಲೇ ಮಹತ್ವದ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್​ಎನಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ಕ್ರಿಕೆಟ್‌ ತಂಡವನ್ನು ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಮುನ್ನಡೆಸಲಿದ್ದಾರೆ. ಆದರೆ, ಐಪಿಎಲ್‌ನಲ್ಲಿ ರೋಹಿತ್‌ ಶರ್ಮಾ ಅವರ ಕಳಪೆ ಫಾರ್ಮ್‌ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ರೋಹಿತ್ ಮತ್ತೊಮ್ಮೆ  ಬ್ಯಾಟಿಂಗ್ ನಲ್ಲಿ ಫೇಲ್ ಆಗಿದ್ದಾರೆ. ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಹಿಟ್​ಮ್ಯಾನ್ ಕಳೆದ ಕೆಲವು ಪಂದ್ಯಗಳಲ್ಲಿ ಒಂದಂಕಿ ಮೊತ್ತ ದಾಟದೇ ವಿಕೆಟ್ ಒಪ್ಪಿಸುತ್ತಿದ್ದಾರೆ. ರೋಹಿತ್​ರ ಇದೇ ಪರ್ಫಾಮೆನ್ಸ್ ಭಾರತೀಯ ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್ – ಪ್ಲೇಆಫ್ ಕನಸು ಜೀವಂತ

ರೋಹಿತ್ ಫೇಲ್ಯೂರ್!

ಹಿಟ್​ಮ್ಯಾನ್ ಅಂತಾನೇ ಕರೆಸಿಕೊಳ್ಳೋ ರೋಹಿತ್ ಅಬ್ಬರಿಸೋಕೆ ನಿಂತ್ರೆ ಅಲ್ಲಿ ಸಿಕ್ಸ್, ಫೋರ್​ಗಳ ಅಬ್ಬರಕ್ಕೆ ಲೆಕ್ಕವೇ ಇರೋದಿಲ್ಲ. ಆದ್ರೆ ಅದೇ ರೋಹಿತ್​ ಈ ಬಾರಿ ಐಪಿಎಲ್​ನಲ್ಲಿ ಫುಲ್ ಡಲ್ ಆಗಿದ್ದಾರೆ. ಅನುಭವಿ ನಾಯಕನ ಸತತ ಕಳಪೆ ಪ್ರದರ್ಶನವು ಇದೀಗ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಐಪಿಎಲ್ 2024ರ ಮೊದಲಾರ್ಧದಲ್ಲಿ ಓಕೆ ಎನಿಸಿದ್ದ ರೋಹಿತ್ ದ್ವಿತೀಯಾರ್ಧದಲ್ಲಿ ಹೀನಾಯವಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಒಂದಂಕಿಯನ್ನ ದಾಟಲೂ ಹೆಣಗಾಡುತ್ತಿದ್ದಾರೆ. ಮೊದಲ 7 ಇನ್ನಿಂಗ್ಸ್‌ಗಳಲ್ಲಿ 297 ರನ್ ಗಳಿಸಿದ್ದ ರೋಹಿತ್ ನಂತರದ 5 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಜಸ್ಟ್ 33 ರನ್ ಮಾತ್ರ. ಟೂರ್ನಿಯಲ್ಲಿ ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ 43 ರನ್ ಗಳಿಸಿದ್ದ ರೋಹಿತ್ ಎರಡನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 26 ರನ್ ಬಾರಿಸಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ಔಟಾದರು. ಡಿಸಿ ವಿರುದ್ಧ ನಾಲ್ಕನೇ ಪಂದ್ಯದಲ್ಲಿ 49 ರನ್, ಆರ್​ಸಿಬಿ ವಿರುದ್ಧ ಐದನೇ ಪಂದ್ಯದಲ್ಲಿ 38 ರನ್‌ ಬಾರಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 6ನೇ ಮ್ಯಾಚ್​ನಲ್ಲಿ ಅಜೇಯ ಶತಕ ಬಾರಿಸಿದ್ದರು. ಏಪ್ರಿಲ್ 7ರಂದು ನಡೆದಿದ್ದ ಪಂದ್ಯದಲ್ಲಿ 105 ರನ್‌ಗಳ ಇನಿಂಗ್ಸ್‌ ಆಡಿದ್ದರು. ಈ ಪಂದ್ಯದ ನಂತರ ರೋಹಿತ್ ಬ್ಯಾಟ್‌ನಿಂದ ಯಾವುದೇ ಬಿಗ್‌ ಸ್ಕೋರ್‌ ಬಂದೇ ಇಲ್ಲ. ಪಂಜಾಬ್ ವಿರುದ್ಧ 36, ರಾಜಸ್ತಾನ್ ರಾಯಲ್ಸ್ ವಿರುದ್ಧ 6, ಡಿಸಿ ವಿರುದ್ಧ 8, ಎಲ್​ಎಸ್​ಜಿ ವಿರುದ್ಧ 4, ಕೆಕೆಆರ್ ವಿರುದ್ಧ 11, ಹಾಗೇ ಎಸ್​ಆರ್​ಹೆಚ್ ವಿರುದ್ಧ 4 ರನ್ ಅಷ್ಟೇ ಸಿಡಿಸಿದ್ದಾರೆ. ಅಂದ್ರೆ ಮೊದಲ 7 ಇನ್ನಿಂಗ್ಸ್​ಗಳಲ್ಲಿ 297 ರನ್ ಬಾರಿಸಿದ್ದ ರೋಹಿತ್ ಮುಂದಿನ 5 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 33 ರನ್ ಮಾತ್ರ.

ಸದ್ಯ ರೋಹಿತ್ ಶರ್ಮಾರ ಫಾರ್ಮ್ ಸಹಜವಾಗಿಯೇ ಬಿಸಿಸಿಐ ಹಾಗೂ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನನಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ರೋಹಿತ್‌, ಸತತ ಐದು ಪಂದ್ಯಗಳಿಂದ ಬ್ಯಾಟ್‌ ಬೀಸಲು ಪರದಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕನ ಫಾರ್ಮ್ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ರೋಹಿತ್ ಫ್ಯಾನ್ಸ್ ಗರಂ!  

ರೋಹಿತ್ ಶರ್ಮಾ ಈ ಸೀಸನ್​ನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಒಟ್ಟಾರೆ 330 ರನ್ ಗಳಿಸಿದ್ದಾರೆ.  ಸೋಮವಾರ ವಾಂಖೇಡೆಯಲ್ಲಿ ಎಸ್​ಆರ್​ಹೆಚ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಸೆಂಚುರಿ ಮೂಲಕ ಮುಂಬೈ ಗೆದ್ದು ಬೀಗಿದೆ. ಆದ್ರೆ ಈ ಪಂದ್ಯದಲ್ಲೂ ಜಸ್ಟ್ 4 ರನ್​ಗೆ ಔಟಾಗಿದ್ದ ರೋಹಿತ್ ತಮ್ಮ ಕಳಪೆ ಫಾರ್ಮ್​​ನಿಂದ ತೀವ್ರವಾಗಿ ಬೇಸರಗೊಂಡಿದ್ದಾರೆ. ಮುಂಬೈ ತಂಡದ ಗೆಲುವಿನ ಬಳಿಕ ಡಗೌಟ್‌ನಲ್ಲಿ ಕೂತಿದ್ದ ರೋಹಿತ್ ಶರ್ಮಾ, ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆಗಿವೆ.  ರೋಹಿತ್​ರ ಕಳಪೆ ಫಾರ್ಮ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ತಲೆನೋವು ಹೆಚ್ಚಿಸುವಂತೆ ಮಾಡಿದೆ. ಇನ್ನು ರೋಹಿತ್ ಫಾರ್ಮ್‌ಗೆ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷಾ ಭೋಗ್ಲೆ ಕೂಡಾ ಎಕ್ಸ್ ಮೂಲಕ ಎಚ್ಚರಿಕೆ ರವಾನಿಸಿದ್ದಾರೆ. ಹಾಗೇ ಫ್ಯಾನ್ಸ್ ಕೂಡ ಆಕ್ರೋಶಗೊಂಡಿದ್ದಾರೆ.  ಐಪಿಎಲ್​ನಲ್ಲೇ ಬ್ಯಾಟ್ ಬೀಸಲು ಪರದಾಡುತ್ತಿರುವ ರೋಹಿತ್ ವಿಶ್ವಕಪ್​ನಲ್ಲಿ ಹೇಗೆ ಇಂಡಿಯಾವನ್ನ ಗೆಲ್ಲಿಸ್ತಾರೆ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ತಮ್ಮ ಜೆರ್ಸಿ ನಂಬರ್ ಪ್ರಮೋಟ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸದ್ಯ ಐಪಿಎಲ್​ನಲ್ಲಿ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿರೋ ಮುಂಬೈ ಇಂಡಿಯನ್ಸ್ ಇನ್ನುಳಿದ ಪಂದ್ಯವನ್ನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಆಡಬೇಕಿದೆ. ವಿಶ್ವಕಪ್​ಗಾಗಿ ಯುಎಸ್ಎಗೆ ತೆರಳುವ ಮೊದಲು ರೋಹಿತ್​ಗೆ ಫಾರ್ಮ್ ಕಂಡುಕೊಳ್ಳಲು ಇನ್ನೂ ಎರಡು ಅವಕಾಶಗಳಿವೆ. ಮುಂಬೈ ಮೇ 11 ಮತ್ತು 17 ರಂದು ಕ್ರಮವಾಗಿ ಕೆಕೆಆರ್ ಮತ್ತು ಲಖನೌ ವಿರುದ್ಧ ಆಡಲಿದೆ. ಈ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅದ್ಧೂರಿ ಇನ್ನಿಂಗ್ಸ್ ಆಡಿದರೆ ಉತ್ತಮ ವಿಶ್ವಾಸದೊಂದಿಗೆ ಟಿ20 ವಿಶ್ವಕಪ್ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ದೇ ಈ ಬಾರಿಯ ವಿಶ್ವಕಪ್ ಮೆಗಾಟೂರ್ನಮೆಂಟ್ ರೋಹಿತ್ ಶರ್ಮಾ ಅವರ ಪಾಲಿಗೆ ಕೊನೆಯ ಟಿ20 ವಿಶ್ವಕಪ್ ಆಗಲಿದೆ ಎಂಬ ಚರ್ಚೆಯೂ ನಡೀತಿದೆ. ಬಳಿಕ ಈ ಸ್ವರೂಪಕ್ಕೆ ವಿದಾಯ ಹೇಳುವ ಸಾಧ್ಯತೆ ಇದೆ. ಹೀಗಾಗಿ ಹಿಟ್​ಮ್ಯಾನ್ ವಿಶ್ವಕಪ್​ಗೂ ಮುನ್ನ ತನ್ನನ್ನ ತಾನು ಪ್ರೂವ್ ಮಾಡಿಕೊಳ್ಳಲೇಬೇಕಿದೆ.

Shwetha M