5 ವರ್ಷದ ನಂತ್ರ ಮತ್ತೆ ಕೊರೊನಾ ಉಗ್ರರೂಪ – ದೇಶದಲ್ಲಿ 1,009ರ ಗಡಿಯಲ್ಲಿ ಕೋವಿಡ್ ಕೇಸ್

5 ವರ್ಷಗಳ ಹಿಂದೆ.. ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳನ್ನ ಬಲಿ ಪಡೆದಿದ್ದ ರಕ್ಕಸ ಕೊರೊನಾ ಮತ್ತೆ ಉಗ್ರರೂಪ ತಾಳಿದೆ. ದೆಹಲಿ ಕಳೆದ ವಾರ 99 ಕರೋನಾ ಕೇಸ್ಗಳು ವರದಿಯಾಗಿದ್ದವು. ಆದ್ರೆ ಆ ಕೇಸ್ಗಳ ಸಂಖ್ಯೆ ಇಂದಿಗೆ 100ರ ಗಡಿ ದಾಟಿದೆ. ಸದ್ಯಕ್ಕೆ ದೇಶ ರಾಜಧಾನಿ ದೆಹಲಿಯಲ್ಲಿ 104 ಕೊರೊನಾ ವೈರಸ್ ಪ್ರಕರಣಗಳಿವೆ. ದೇಶದಲ್ಲೇ ಈಗ ದೆಹಲಿ ಕೊರೊನಾ ಕೇಸ್ಗಳಲ್ಲಿ 3ನೇ ಸ್ಥಾನದಲ್ಲಿದೆ.
209 ಪ್ರಕರಣಗಳಲ್ಲಿ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಗುಜರಾತ್ನಲ್ಲಿ 83, ಕರ್ನಾಟಕ 71, ಉತ್ತರ ಪ್ರದೇಶ 15 ಕೇಸ್ಗಳಿದ್ದರೆ, ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳಿವೆ. ಕೇರಳದಲ್ಲಿ ಈ ಬಾರಿಯೂ 430 ಪ್ರಕರಣಗಳು ದಾಖಲಾಗಿ ಅಗ್ರಸ್ಥಾನದಲ್ಲಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್-19 ಮಹಾಮಾರಿಗೆ ಕನಿಷ್ಠ ನಾಲ್ಕು ಮಂದಿ ಸಾವಾಗಿರೋ ವರದಿಯಾಗಿದೆ. ಕೇರಳದಲ್ಲಿ ಎರಡು ಸಾವುಗಳಾಗಿದ್ದರೆ, ಕರ್ನಾಟಕದಲ್ಲಿ ಒಂದು ಸಾವು ಆಗಿದೆ. ಮತ್ತೊಂದು ಆಘಾತದ ವರದಿ ಏನಂದರೆ ದೇಶಾದ್ಯಂತ ಒಟ್ಟು 1,009ರ ಗಡಿಯಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್-19 ಪೋರ್ಟಲ್ ಮಾಹಿತಿ ನೀಡಿದೆ.
ರಾಜ್ಯ ರಾಜಧಾನಿ ನಮ್ಮ ಬೆಂಗಳೂರಲ್ಲಿ ಇದುವರೆಗೂ 71 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಟೆಸ್ಟಿಂಗ್ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ರಾಜ್ಯದಲ್ಲಿ ದಿನನಿತ್ಯ 150 ರಿಂದ 200 ಪರೀಕ್ಷೆಗೆ ಆರೋಗ್ಯ ಇಲಾಖೆ ನಿಗದಿಪಡಿಸಿದೆ.
ಎಲ್ಲಾ SARI ಪ್ರಕರಣಗಳಲ್ಲಿ ಕೋವಿಡ್-19 ಸೋಂಕನ್ನು ಧೃಡ ಪಡಿಸಿಕೊಳ್ಳಲು RT-PCR ಪರೀಕ್ಷೆಯನ್ನು ನಿಗದಿ ಪಡಿಸಿರುವ ಪ್ರಯೋಗಾಲಯಗಳಿಗೆ ಸ್ಯಾಂಪಲ್ ಸಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸಬೇಕು ಎಂದು ಸೂಚಿಸಿದೆ.

ನೋಡಿರಿ

