ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು ಮಂಜೂರು

ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು ಮಂಜೂರು

ವಿಧಾನಸಭೆ ಚುನಾವಣೆ  ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿರುವ ಪ್ರಕರಣದಲ್ಲಿ ದಾಖಲಾಗಿರುವ ಮಾನನಷ್ಟ ಕೇಸ್​​ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಗೆ ಬಿಗ್‌ ರಿಲೀಫ್‌ ಸಿಕ್ಕಿದೆ.  42ನೇ ಎಸಿಎಂಎಂ ಕೋರ್ಟ್ ಸಿಎಂ ಹಾಗೂ ಡಿಸಿಎಂ​ಗೆ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ:

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾಹೀರಾತು ಮೂಲಕ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಸಿಎಂ ಹುದ್ದೆಗಾಗಿ 2,500 ಕೋಟಿ, ಮಂತ್ರಿ ಸ್ಥಾನಕ್ಕಾಗಿ 500 ಕೋಟಿ ರೂಪಾಯಿ ಹಣವನ್ನು ಬಿಜೆಪಿ ಹೈಕಮಾಂಡ್​ಗೆ ನೀಡಿ ರಾಜ್ಯ ಬಿಜೆಪಿ ನಾಯಕರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಮೂಲಕ ಕೋವಿಡ್ ಕಿಟ್ ಪೂರೈಕೆ ಟೆಂಡರ್​ ಡೀಲ್​ನಲ್ಲಿ ಶೇಕಡಾ 75, ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್​ನಲ್ಲಿ ಶೇ 40 ರಷ್ಟು ಸೇರಿದಂತೆ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಲ್ಲಿ ಕಮೀಷನ್ ಡೀಲ್ ಮಾಡಿಕೊಂಡಿದೆ ಎಂದು ಕಾಂಗ್ರೆಸ್​ ಆರೋಪ ಮಾಡಿತ್ತು.

ಇದನ್ನು ಪ್ರಶ್ನಿಸಿ ಬಿಜೆಪಿ ಪ್ರಧಾನಕಾರ್ಯದರ್ಶಿ ಕೇಶವಪ್ರಸಾದ್, ಖಾಸಗಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದರು. ಕೆಪಿಸಿಸಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಯನ್ನು ಪ್ರತಿವಾದಿಯಾಗಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆಯಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು​ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಇದೀಗ ಸಿಎಂ ಹಾಗೂ ಡಿಸಿಎಂ ಗೆ ಕೊರ್ಟ್‌ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಮುಂದೆ ಇಬ್ಬರು ನಾಯಕರು ಹಾಜರಾಗಿದ್ದರು. ಜಡ್ಜ್ ಮುಂದೆ ಡಿಕೆ ಶಿವಕುಮಾರ್ ಕೈಕಟ್ಟಿ ನಿಂತಿದ್ದರು. ಆರೋಪಿಗಳು ಯಾರು ಯಾರು ಎಂಬ ಪ್ರಶ್ನೆಗೆ ವಕೀಲರು ಎ-2 ಡಿಕೆ ಶಿವಕುಮಾರ್, ಎ-3 ಸಿದ್ದರಾಮಯ್ಯ ಎಂದು ವಕೀಲರು ಕೋರ್ಟ್​ಗೆ ತಿಳಿಸಿದರು. ಇದೇ ವೇಳೆ ಇಬ್ಬರೂ ಕೂಡ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. ಅಲ್ಲದೇ ವಿಚಾರಣೆ ಹಾಜರಾಗದ ರಾಹುಲ್ ಗಾಂಧಿಗೆ ವಿನಾಯತಿ ನೀಡುವಂತೆ ಕೋರ್ಟ್ ಬಳಿ ಕಾಂಗ್ರೆಸ್ ಪರ ವಕೀಲರು ಮನವಿ ಮಾಡಿಕೊಂಡರು.

ಇಂಡಿಯಾ ಒಕ್ಕೂಟದ ಮೀಟಿಂಗ್​ನಲ್ಲಿ ರಾಹುಲ್ ಗಾಂಧಿ ಭಾಗಿ ಆಗಿರೋದಕ್ಕೆ ಬಿಜೆಪಿ ಪರ ವಕೀಲರು ತಕರಾರು ತೆಗೆದರು. ಕೋರ್ಟ್ ಮುಂದೆ ಎಲ್ಲರು ಸಮಾನರು, ಹೀಗಿದ್ದಾಗ ಏಕೆ ವಿನಾಯಿತಿ‌ ನೀಡಬೇಕು? ಎಂದು ವಕೀಲ ವಿನೋದ್ ಕುಮಾರ್ ವಾದಿಸಿದರು. ನಂತರ ರಾಹುಲ್ ಗಾಂಧಿ ಗೈರು ಕುರಿತು ಕೋರ್ಟ್​ನ ವಾದ ಪ್ರತಿವಾದ ನಡೆಸಿದ ಕೋರ್ಟ್​ ತೀರ್ಪನ್ನು ಮಧ್ಯಾಹ್ನಕ್ಕೆ ಕಾಯ್ದಿರಿಸಿತು. ಇತ್ತ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ಗೆ ಜಾಮೀನು ಸಿಗುತ್ತಿದ್ದಂತೆಯೇ ಬಾಂಡ್ ಪೇಪರ್​ಗೆ ಸಹಿ ಮಾಡಿ ಕೋರ್ಟ್​ನಿಂದ ನಿರ್ಗಮಿಸಿದ್ದಾರೆ.

Shwetha M