ಈರುಳ್ಳಿ ರಫ್ತಿಗೆ ಶೇ.40 ಸುಂಕ – ಆಕ್ರೋಶದ ಬೆನ್ನಲ್ಲೇ ಕೇಂದ್ರದಿಂದ 2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಿದ ಮಹಾರಾಷ್ಟ್ರ ಸರ್ಕಾರ

ಈರುಳ್ಳಿ ರಫ್ತಿಗೆ ಶೇ.40 ಸುಂಕ – ಆಕ್ರೋಶದ ಬೆನ್ನಲ್ಲೇ ಕೇಂದ್ರದಿಂದ 2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಿದ ಮಹಾರಾಷ್ಟ್ರ ಸರ್ಕಾರ

ಕೇಂದ್ರ ಸರ್ಕಾರವು ದೇಶದಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಣಕ್ಕಾಗಿ ರಫ್ತಿನ ಮೇಲೆ ಶೇ.40ರಷ್ಟುಸುಂಕವನ್ನು ವಿಧಿಸಿರುವುದನ್ನು ವಿರೋಧಿಸಿ ದೇಶದ ಅತಿ ದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆಯಾದ ನಾಸಿಕ್‌ ಮತ್ತು ಜಿಲ್ಲೆಯಾದ್ಯಂತ ಇರುವ ಎಪಿಎಂಸಿ ಮಂಡಿ ವರ್ತಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದೆ. ಪ್ರತಿಭಟನೆಯ ಕಾವು ಏರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ 2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಇದನ್ನೂ ಓದಿ: ಅಮಾವಾಸ್ಯೆಯಂದು ಹೆಚ್ಚಾಗುತ್ತೆ ಅಪರಾಧ ಕೃತ್ಯಗಳು.. ಹಿಂದೂ ಪಂಚಾಂಗ ಅನುಸರಿಸಿ! – ಪೊಲೀಸ್‌ ಇಲಾಖೆ ಸುತ್ತೋಲೆ!

ಬೆಲೆ ಏರಿಕೆಯನ್ನು ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಸುಧಾರಿಸಲು ಈರುಳ್ಳಿ ಮೇಲೆ ಶೇಕಡಾ 40 ರಷ್ಟು ರಫ್ತು ಸುಂಕ ವಿಧಿಸುವ ಕೇಂದ್ರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳ ಪ್ರತಿಭಟನೆ ನಡೆಸುತ್ತಿರುವಂತೆಯೇ  ಫಡ್ನವೀಸ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಪ್ರತಿ ಕ್ವಿಂಟಲ್‌ಗೆ ರೂ. 2,410  ದರದಲ್ಲಿ 2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ನಾಸಿಕ್ ಮತ್ತು ಅಹಮದ್‌ನಗರದಲ್ಲಿ ವಿಶೇಷ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 19 ರಂದು ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಪ್ರಕಾರ ಈ ವರ್ಷಾಂತ್ಯದವರೆಗೂ ಈರುಳ್ಳಿಯ ಮೇಲೆ ಶೇಕಡಾ 40 ರಷ್ಟು ರಫ್ತು ಸುಂಕವನ್ನು ವಿಧಿಸಲಾಗಿದೆ.

ಪ್ರಸ್ತುತ ಜಪಾನ್ ಪ್ರವಾಸದಲ್ಲಿರುವ ಫಡ್ನವಿಸ್ ಈ ಕುರಿತು ಟ್ವೀಟ್ ಮಾಡಿದ್ದು,  ಈರುಳ್ಳಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ  ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

suddiyaana