“ಮಾಲಿನ್ಯ” ಸಿಟಿಯಾದ ಬೆಂಗಳೂರು – ಒಂದೇ ವರ್ಷದಲ್ಲಿ ಶೇ 40 ರಷ್ಟು ಮಾಲಿನ್ಯ ಹೆಚ್ಚಳ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಪೊಲ್ಯೂಶನ್ ಸಿಟಿಯಾಗಿ ಬದಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ವಾಯುಮಾಲಿನ್ಯ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ಶೇ 40 ರಷ್ಟು ಏರಿಕೆ ಕಂಡುಬಂದಿದೆ. ಇದರಿಂದಾಗಿ ಇನ್ಮುಂದೆ ಉಸಿರಾಡುವುದೂ ಕಷ್ಟ ಕಷ್ಟ ಎನ್ನುವಂತಾಗಿದೆ.
2022ರ ನವೆಂಬರ್ ತಿಂಗಳ 30 ದಿನಗಳ ಅಧ್ಯಯನದ ಪ್ರಕಾರ ವಾಯು ಗುಣಮಟ್ಟ ಸೂಚ್ಯಂಕ 93 ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಎಕ್ಯೂಐ 66 ಇತ್ತು. ಅಂದರೆ ಒಂದೇ ವರ್ಷಕ್ಕೆ ಶೇ.40ರಷ್ಟು ವಾಯುಮಾಲಿನ್ಯ ಏರಿಕೆ ಕಂಡಿದೆ. ಮಾಲಿನ್ಯ ಎಫೆಕ್ಟ್ ನಿಂದ ದೆಹಲಿಯಲ್ಲಿ ಉಂಟಾದ ನಿರ್ಬಂಧಗಳು ಬೆಂಗಳೂರಿನಲ್ಲೂ ಶುರುವಾಗುವ ಭೀತಿ ಉಂಟಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ ‘ಹಳ್ಳಿ ಹಕ್ಕಿ’ ವಿಶ್ವನಾಥ್ – ಹಳೇ ಶತ್ರುಗಳ ನಡುವೆ ಸಂಧಾನ ನಡೆಯಿತಾ?
ಬೆಂಗಳೂರಿನಲ್ಲಿ ದೀಪಾವಳಿ ಬಳಿಕ ವಾಯು ಮಾಲಿನ್ಯ ಹೆಚ್ಚಳವಾಗಿದೆ. ಬೆಂಗಳೂರು ಸಿಟಿ ಜಂಕ್ಷನ್, ಹೆಬ್ಬಾಳ, ಮೈಸೂರು ರಸ್ತೆ, ಸಾಣೆಗುರುವನಹಳ್ಳಿ, ನಿಮ್ಹಾನ್ಸ್, ಜಯನಗರ ಹಾಗೂ ಸಿಲ್ಕ್ ಬೋರ್ಡ್‌ನಲ್ಲಿರುವ 7 ನಿರ್ವಹಣಾ ನಿಲ್ದಾಣಗಳ ಸಹಾಯದಿಂದ ಎಕ್ಯೂಐ ಪ್ರಮಾಣ ಅಳೆಯಲಾಗಿದ್ದು, ಈ ವೇಳೆ ಕಳಪೆ ಗಾಳಿಯ ಗುಣಮಟ್ಟ ಕಂಡು ಬಂದಿದೆ.
ಅಕ್ಟೋಬರ್ ನಂತರ ನಗರದ ವಾಯು ಗುಣಮಟ್ಟ ಸೂಚ್ಯಂಕ ಮೇಲ್ವಿಚಾರಣೆ ಮಾಡಲಾಗಿದೆ. ವಾಯು ಮಾಲಿನ್ಯ ಅಧಿಕವಾಗಿರುವುದರಿಂದ ನಗರದ ಜನ ಆರೋಗ್ಯ ಬಗ್ಗೆ ಗಮನಹರಿಸುವ ಅಗತ್ಯವಿದೆ. ನಗರದಲ್ಲಿ ಗಾಳಿ ಗುಣಮಟ್ಟ ಮಧ್ಯಮ ಮತ್ತು ಅತ್ಯಂತ ಕಳಪೆ ಮಧ್ಯದಲ್ಲಿ ಇದೆ. ಚಳಿಗಾಲಕ್ಕೆ ಸಂಬಂಧಿಸಿದ ನೈಸರ್ಗಿಕ ಪರಿಸ್ಥಿತಿಗಳ ಹೊರತಾಗಿ ಹೆಚ್ಚಾದ ವಾಹನಗಳ ಹೊಗೆಯಿಂದ ಉಸಿರಾಡಲು ಶುದ್ಧ ಗಾಳಿ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಪ್ರಾಯ ಪಟ್ಟಿದೆ.