ಸರ್ಕಾರದ ಹಣ ಬರುತ್ತಿದ್ದಂತೆ ಪ್ರೇಮಿಗಳೊಂದಿಗೆ ನಾಲ್ವರು ವಿವಾಹಿತ ಮಹಿಳೆಯರು ಪರಾರಿ!

ಲಕ್ನೋ: ಚಿನ್ನ, ನಗದು ಹಿಡಿದು ಯುವಕನೊಂದಿಗೆ ಯುವತಿ ಪರಾರಿ. ಮದುವೆಯಾದ ದಿನದಂದೇ ಯುವತಿ ಪ್ರಿಯತಮನೊಂದಿಗೆ ನಾಪತ್ತೆ. ಇಂತಹ ಸಾಕಷ್ಟು ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ನಾಲ್ವರು ವಿವಾಹಿತ ಮಹಿಳೆಯರು ಸರ್ಕಾರದಿಂದ ಬಂದ ಹಣದೊಂದಿಗೆ ಪರಾರಿಯಾಗಿದ್ದಾರಂತೆ!
ಹೌದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹಣವನ್ನು ಪಡೆದ ನಾಲ್ವರು ಮಹಿಳೆಯರು ತಮ್ಮ ಪತಿಯರನ್ನು ಬಿಟ್ಟು ಪ್ರೇಮಿಗಳೊಂದಿಗೆ ಪರಾರಿಯಾದ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ: ಮಾಲೀಕನ ಕುತ್ತಿಗೆ ಕಚ್ಚಿ ಕೊಂದ ಒಂಟೆ! – ಕಾರಣ ಕೇಳಿದ್ರೆ ಶಾಕ್ ಆಗೋದು ಪಕ್ಕಾ
ಆರ್ಥಿಕವಾಗಿ ಹಿಂದುಳಿದ, ಕೆಳ ಮತ್ತು ಮಧ್ಯಮ ವರ್ಗಗಳಿಗೆ ಸ್ವಂತ ಸೂರು ಹೊಂದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ. ಇದನ್ನು ಬಳಸಿಕೊಂಡು ಜನರು ಮನೆಗಳನ್ನು ನಿರ್ಮಿಸಬಹುದಾಗಿದೆ. ಆದರೆ ಇದಕ್ಕೆ ಕುಟುಂಬದ ಮಹಿಳೆ ಮನೆಯ ಮಾಲಕಿ ಅಥವಾ ಸಹ ಮಾಲಕಿಯಾಗಿರಬೇಕೆಂದು ಕೇಂದ್ರ ಕಡ್ಡಾಯ ಮಾಡಿದೆ.
ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನಗರ ಪಂಚಾಯಿತಿ ಬೆಲ್ಹಾರ, ಬಂಕಿ, ಜೈದ್‌ಪುರ ಹಾಗೂ ಸಿದೌರ್‌ನ ನಾಲ್ವರು ಮಹಿಳೆಯರನ್ನು ಕುಟುಂಬಸ್ಥರು ಈ ಯೋಜನೆಯ ಫಲಾನುಭವಿಗಳಾಗಿ ನೋಂದಣಿ ಮಾಡಿಸಿದ್ದರು. ಆದರೆ ಈ ಮಹಿಳೆಯರು ಖಾತೆಗೆ ಮೊದಲ ಕಂತು 50 ಸಾವಿರ ಹಣ ಬರುತ್ತಿದ್ದಂತೆ ಪ್ರೇಮಿಗಳೊಂದಿಗೆ ಎಸ್ಕೇಪ್ ಆಗಿದ್ದಾರೆ.
ಫಲಾನುಭವಿಗಳ ಮನೆ ನಿರ್ಮಾಣ ಕಾರ್ಯ ಆರಂಭವಾಗದೇ ಇದ್ದದ್ದನ್ನು ಕಂಡ ಅಧಿಕಾರಿಗಳು ಪ್ರತಿ ಮನೆಗಳಿಗೆ ನೋಟಿಸ್ ನೀಡಿದ್ದಾರೆ. ಬಳಿಕ ಪರಾರಿಯಾದ ಮಹಿಳೆಯರ ಪತಿಯರು ಸರ್ಕಾರಿ ಕಚೇರಿಗೆ ಬಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ ಎರಡನೇ ಕಂತು ಜಮೆ ಮಾಡದಂತೆ ಕೇಳಿಕೊಂಡಿದ್ದಾರೆ.
ಇದೀಗ ಎಸ್ಕೇಪ್ ಆಗಿರೋ ಮಹಿಳೆಯರಿಂದ ಹಣವನ್ನು ವಸೂಲಿ ಮಾಡುವುದು ಹೇಗೆ ಎಂದು ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಪರಾರಿಯಾದ ಮಹಿಳೆಯರ ಗಂಡಂದಿರು ಅತ್ತ ಮನೆ ಕಟ್ಟಲಾಗದೇ, ಇತ್ತ ಸಾಲ ತೀರಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ.