ಇಂಧನ ಖಾಲಿಯಾಗಿ ರಸ್ತೆ ಮಧ್ಯೆಯೇ ಕೆಟ್ಟು ನಿಂತ ಪೊಲೀಸ್‌ ವಾಹನ – ಕೋರ್ಟ್​ವರೆಗೆ ಕಾರನ್ನು ತಳ್ಳಿದ ಆರೋಪಿಗಳು

ಇಂಧನ ಖಾಲಿಯಾಗಿ ರಸ್ತೆ ಮಧ್ಯೆಯೇ ಕೆಟ್ಟು ನಿಂತ ಪೊಲೀಸ್‌ ವಾಹನ – ಕೋರ್ಟ್​ವರೆಗೆ ಕಾರನ್ನು ತಳ್ಳಿದ ಆರೋಪಿಗಳು

ವಾಹನಗಳಲ್ಲಿ ಹೋಗುವಾಗ ದಾರಿ ಮಧ್ಯೆ ವಾಹನ ಕೆಟ್ಟು ಹೋಗುವುದು, ಇಂಧನ ಖಾಲಿ ಆಗೋದು ಸಾಮಾನ್ಯ. ಈ ವೇಳೆ ರಸ್ತೆಯಲ್ಲಿ ಯಾರಾದ್ರೂ ಸಿಕ್ರೆ ಅವರ ಬಳಿ ಸಹಾಯ ಕೇಳುತ್ತೇವೆ. ಇಲ್ಲದಿದ್ದರೆ ಬೇರೆ ವಾಹನದಲ್ಲಿ ಸಂಚರಿಸುತ್ತೇವೆ. ಆದ್ರೆ ಇಲ್ಲೊಂದು ಕಡೆ ಪೊಲೀಸರ ವಾಹನದಲ್ಲಿ ಇಂಧನ ಖಾಲಿ ಆಗಿ ರಸ್ತೆ ಮಧ್ಯೆ ನಿಂತಿತ್ತು. ಈ ವೇಳೆ ಆರೋಪಿಗಳೇ ನ್ಯಾಯಾಲಯದವರೆಗೆ ಕಾರನ್ನು ತಳ್ಳಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಚಿಲಿ ಅರಣ್ಯದಲ್ಲಿ ಭಯಾನಕ ಕಾಡ್ಗಿಚ್ಚು – ಸಾವಿನ ಸಂಖ್ಯೆ 99ಕ್ಕೆ ಏರಿಕೆ, 1100ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಈ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದಲ್ಲಿ ಮದ್ಯ ನಿಷೇಧವಿದ್ದರೂ ಕೂಡ ಯಾವುದೇ ಮೂಲದಿಂದ ಜನರು ಮದ್ಯ ಖರೀದಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದರು. ಈ ವೇಳೆ ಇಂಧನ ಖಾಲಿಯಾಗಿ ಪೊಲೀಸ್​ ವಾಹನ ರಸ್ತೆ ಮಧ್ಯೆಯೆ ನಿಂತಿತ್ತು. ಬಳಿಕ ಅಲ್ಲಿದ್ದ ಆರೋಪಿಗಳೇ ನ್ಯಾಯಾಲಯದವರೆಗೆ ಕಾರನ್ನು ತಳ್ಳಿಕೊಂಡು ಹೋಗಿದ್ದಾರೆ.

ವಿಡಿಯೋದಲ್ಲಿ ಕೈದಿಗಳು ತಮ್ಮ ಸೊಂಟಕ್ಕೆ ಹಗ್ಗಗಳನ್ನು ಕಟ್ಟಿಕೊಂಡು, ಪೊಲೀಸ್ ಅಧಿಕಾರಿಯ ಮಾರ್ಗದರ್ಶನದಲ್ಲಿ ವಾಹನವನ್ನು ತಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಬಹಳ ಪ್ರಯತ್ನದ ನಂತರ ಆರೋಪಿಗಳು ಮತ್ತು ಪೊಲೀಸ್ ವಾಹನ ಎರಡೂ ಸಿವಿಲ್ ನ್ಯಾಯಾಲಯವನ್ನು ತಲುಪಿದವು.

ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಷ್ಟರಲ್ಲಿ ಯಾರೋ ದಾರಿಯಲ್ಲಿ ಅವರ ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಕೆಲವರು ಕಮೆಂಟ್​ ಮಾಡಿದ್ದಾರೆ ಒಬ್ಬರು ಆರೋಪಿಗಳ ಕೈಲಿ ಇಂತಹ ಕೆಲಸಗಳನ್ನು ಮಾಡಿಸುವುದು ತಪ್ಪು ಎಂದು ಹೇಳಿದ್ದರೆ ಇನ್ನೂ ಕೆಲವರು ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ.

Shwetha M