‘ಭಾರತ್‌ ಜೋಡೋ’ ಬಳಿಕ ‘ಹಾಥ್‌ ಸೇ ಹಾಥ್‌ ಜೋಡೋ’ ಯಾತ್ರೆ: ಪ್ರಿಯಾಂಕಾ ಗಾಂಧಿ ನೇತೃತ್ವ

‘ಭಾರತ್‌ ಜೋಡೋ’ ಬಳಿಕ ‘ಹಾಥ್‌ ಸೇ ಹಾಥ್‌ ಜೋಡೋ’ ಯಾತ್ರೆ: ಪ್ರಿಯಾಂಕಾ ಗಾಂಧಿ ನೇತೃತ್ವ

ಲಕ್ನೋ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ  ಉತ್ತರ ಪ್ರದೇಶದಲ್ಲಿ 9 ದಿನಗಳ ಚಳಿಗಾಲದ ವಿರಾಮ ಪಡೆದು ಮಂಗಳವಾರ ಮತ್ತೆ ಪುನರಾರಂಭವಾಗಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಜೋಡೋ ಯಾತ್ರೆ 110 ದಿಗಳಿಗಿಂತಲೂ ಹೆಚ್ಚು ಕಳೆದಿದ್ದು, ಸುಮಾರು 3,000 ಕಿ.ಮೀ ಕ್ರಮಿಸಿದೆ.

ದಕ್ಷಿಣದ ರಾಜ್ಯದಿಂದ ಪ್ರಾರಂಭವಾದ ಪಾದಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಹೊರಟು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಸಂಚರಿಸಿದ್ದು, ಜಮ್ಮು ಕಾಶ್ಮೀರದಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ.

ಇದನ್ನೂ ಓದಿ: 2030ಕ್ಕೆ ಭಾರತದಲ್ಲಿ ವಿಶ್ವದ ಅತಿದೊಡ್ಡ “ಹಸಿರು ರೈಲ್ವೆ”

ಭಾರತದ ಇತಿಹಾಸದಲ್ಲಿ ಭಾರತೀಯ ರಾಜಕಾರಣಿ ನಡೆಸಿರುವ ಅತಿ ಉದ್ದದ ಯಾತ್ರೆ ಇದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಜನವರಿ 26 ರಂದು ಯಾತ್ರೆ ಶ್ರೀನಗರ ತಲುಪಲಿದ್ದು, ಅಲ್ಲಿ ಕೊನೆಗೊಳ್ಳಲಿದೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಕೊನೆಗೊಳಿಸಿದ ಬಳಿಕ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಗುರಿಯನ್ನು ರಾಹುಲ್ ಗಾಂಧಿ ಹೊಂದಿದ್ದಾರೆ.

ಹಾಥ್ ಸೇ ಹಾಥ್ ಜೋಡೋಯಾತ್ರೆಗೆ ಕಾಂಗ್ರೆಸ್ಸಿದ್ಧತೆ

ಜನವರಿ 26 ರಂದು ಶ್ರೀನಗರದಲ್ಲಿ ಕೊನೆಗೊಳ್ಳುವ ಯಾತ್ರೆಯ ನಂತರ, ‘ಹಾಥ್ ಸೇ ಹಾಥ್ ಜೋಡೋ’ ಎಂಬ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಲಿದೆ. ಪಕ್ಷದ ಮೂಲಗಳ ಪ್ರಕಾರ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ‘ಹಾಥ್ ಸೇ ಹಾಥ್ ಜೋಡೋ’ ಅಭಿಯಾನವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

‘ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಎರಡು ತಿಂಗಳ ‘ಹಾಥ್‌ ಸೇ ಹಾಥ್‌ ಜೋಡೋ ಅಭಿಯಾನ’ವನ್ನು ಪ್ರಾರಂಭಿಸಲಿದೆ. ಈ ಅಭಿಯಾನದಲ್ಲಿ ಪ್ರಿಯಾಂಕಾ ಗಾಂಧಿ ಅವರು ಮಹಿಳಾ ಸದಸ್ಯರೊಂದಿಗೆ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಗಳನ್ನು ಮುನ್ನಡೆಸಲಿದ್ದಾರೆ. ‘ಭಾರತ್ ಜೋಡೋ ಯಾತ್ರೆ’ಯ ಸಂದೇಶವನ್ನು ಹರಡಲು ಈ ಅಭಿಯಾನವನ್ನು ರೂಪಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ಮಹಿಳಾ ಕಾರ್ಯಕರ್ತರೊಂದಿಗೆ ಮಾರ್ಚ್‌ನಲ್ಲಿ ಈ ಅಭಿಯಾನವನ್ನು ಮುನ್ನಡೆಸಲಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ಇತರ ಸಮಸ್ಯೆಗಳು ಕೂಡ ಅಭಿಯಾನದಲ್ಲಿ ಪ್ರಮುಖ ವಿಷಯವಾಗಿರಲಿದೆ. ದೇಶದ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟು ಭಾಗವನ್ನು ಒಳಗೊಂಡಿರುವ ಮಹಿಳಾ ಮತದಾರರನ್ನು ಓಲೈಸುವ ಗುರಿಯನ್ನು ಪಕ್ಷ ಹೊಂದಿದೆ ಎನ್ನಲಾಗಿದೆ.

suddiyaana