ಉತ್ತರಾಖಂಡ್ ನಲ್ಲಿ ಭಾರಿ ಭೂಕುಸಿತ – ಸಂಕಷ್ಟದಲ್ಲಿ 300 ಕ್ಕೂ ಹೆಚ್ಚು ಪ್ರಯಾಣಿಕರು
ಉತ್ತರಾಖಂಡ್ ನ ಪಿಥೋರಾಗಢ್ ನಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಅಲ್ಲಲ್ಲಿ ರಸ್ತೆಗಳು ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ 300 ಕ್ಕೂ ಹೆಚ್ಚು ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಲಖನ್ ಪುರ್ ಸಮೀಪದ ಧಾರ್ಚುಲಾದಿಂದ 45 ಕಿಲೋ ಮೀಟರ್ ಎತ್ತರದ ಲಿಪುಲೇಖ್ -ತವಾಘಾಟ್ ನ ರಸ್ತೆ ಸುಮಾರು 100 ಮೀಟರ್ ನಷ್ಟು ಕುಸಿತವಾಗಿದೆ. ಇದರಿಂದಾಗಿ ಧಾರ್ಚುಲಾ ಮತ್ತು ಗುಂಜಿ ಪ್ರದೇಶದ ನಡುವೆ ಸುಮಾರು 300 ಪ್ರಯಾಣಿಕರು ಪರದಾಡುವಂತಾಗಿದೆ. ಈಗಾಗಲೇ ರಸ್ತೆ ಸಂಪರ್ಕ ಕಡಿತಗೊಂಡಿದ್ದು. ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ರಸ್ತೆ ಸಂಚಾರ ಮತ್ತೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: 66 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ! – ಮೇ ತಿಂಗಳಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?
ಇನ್ನು ಉತ್ತರಾಖಂಡ್ ನ ಹಲವು ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರ್ದ್ವಾರ್, ನೈನಿತಾಲ್, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ ಗರ್ವಾಲ್, ಉಧಮ್ ಸಿಂಗ್ ನಗರ ಮತ್ತು ಉತ್ತರಕಾಶಿ ಜಿಲ್ಲೆಯ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಹೇಳಿದೆ.
ಪೊಲೀಸರು ಕೂಡ ಅಲ್ಲಿನ ಸ್ಥಳೀಯರಿಗೆ ಹಾಗೂ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸೂಚನೆ ನೀಡಿದ್ದಾರೆ. ಅನಗತ್ಯವಾಗಿ ಎಲ್ಲಿಯೂ ಸಂಚರಿಸದೇ ತಮ್ಮ ವಾಹನಗಳನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ. ಹವಾಮಾನ ಸರಿಯಿದ್ದಾಗ ಮಾತ್ರ ಸಂಚರಿಸಿ. ಯಮುನೋತ್ರಿ ಮತ್ತು ಗಂಗೋತ್ರಿ ಧಾಮ ಯಾತ್ರೆಗೆ ಬರುವ ಎಲ್ಲಾ ಭಕ್ತರು ಹವಾಮಾನ ಮುನ್ಸೂಚನೆಯನ್ನು ತಿಳಿದ ನಂತರ ಪ್ರಯಾಣಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.