ಇಲಿ ಕೊಂದ ವ್ಯಕ್ತಿಯ ವಿರುದ್ಧ 30 ಪುಟದ ಚಾರ್ಜ್ ಶೀಟ್! – ಏನಿದು ರ‍್ಯಾಟ್ ಕೇಸ್?

ಇಲಿ ಕೊಂದ ವ್ಯಕ್ತಿಯ ವಿರುದ್ಧ 30 ಪುಟದ ಚಾರ್ಜ್ ಶೀಟ್! – ಏನಿದು ರ‍್ಯಾಟ್ ಕೇಸ್?

ಉತ್ತರಪ್ರದೇಶ: ಎಲ್ಲರ ಮನೆಯಲ್ಲೂ ಇಲಿಗಳ ಕಾಟ ಇದ್ದೇ ಇರುತ್ತದೆ. ಇವುಗಳ ಉಪಟಳ ತಡೆಯಲು ಸಾಧ್ಯವಾಗದೇ ಅನೇಕರು ಇಲಿ ಪಾಷಾಣ ಇಡುವುದನ್ನು ಕೇಳಿರುತ್ತೇವೆ. ಇಲಿ ಕೊಂದರೆ ಯಾರು ಕೇಸ್ ಹಾಕ್ತಾರೆ ಅಂತಾ ಎಲ್ಲರೂ ಹೇಳುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಇಲಿ ಕೊಂದಿದ್ದಕ್ಕೆ ಆತನಿಗೆ ಕಾನೂನು ಸಂಕಷ್ಟ ಎದುರಾಗಿದೆ.

ಉತ್ತರ ಪ್ರದೇಶದ ಬದೌನ್ ಎಂಬಲ್ಲಿ ಮನೋಜ್ ಕುಮಾರ್  ಎಂಬಾತ ಇಲಿಯ ಬಾಲವನ್ನು ಇಟ್ಟಿಗೆಗೆ ಕಟ್ಟಿ ಚರಂಡಿಯಲ್ಲಿ ಮುಳುಗಿಸಿ ಕೊಂದಿದ್ದಾನೆ. ಈ ಆರೋಪ ಮೇಲೆ ಉತ್ತರ ಪ್ರದೇಶದ ಬದೌನ್‌ನ ಪೊಲೀಸರು ಆತನ ಮೇಲೆ 30 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ತಮ್ಮದೇ ಶ್ರದ್ಧಾಂಜಲಿ ಬರೆಯಲು ಹೇಳಿದ ಶಿಕ್ಷಕಿ – ಆ ಮೇಲೆ ಶಿಕ್ಷಕಿಯ ಪಾಡು ಏನಾಯ್ತು ಗೊತ್ತಾ?

25 ನವೆಂಬರ್ 2022 ರಂದು ಪ್ರಾಣಿ ಪ್ರೇಮಿ ವಿಕೇಂದ್ರ ಶರ್ಮಾ ಬುದೌನ್ ನ ಗಾಂಧಿ ಗ್ರೌಂಡ್ ರಸ್ತೆಯ ಬಳಿ ಹಾದು ಹೋಗುತ್ತಿದ್ದರು. ಈ ವೇಳೆ ಮನೋಜ್ ಕುಮಾರ್ ಎಂಬ ವ್ಯಕ್ತಿ ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ಚರಂಡಿಯಲ್ಲಿ ಮುಳುಗಿಸುತ್ತಿರುವುದನ್ನು ನೋಡಿದ ಅವರು ಅದನ್ನು ವಿಡಿಯೋ ಮಾಡಿದ್ದಾರೆ. ಮಾತ್ರವಲ್ಲದೆ ಇಲಿಯನ್ನು ರಕ್ಷಿಸಲು ಚರಂಡಿಗೆ ಹಾರಿ ಇಲಿಯನ್ನು ಹೊರತೆಗೆದಿದ್ದಾರೆ. ಅಷ್ಟರೊಳಗೆ ಇಲಿ ಸತ್ತು ಹೋಗಿತ್ತು. ಇದಾದ ನಂತರ ವಿಕೇಂದ್ರ ಬದೌನ್ ಸದರ್ ಕೊತ್ವಾಲಿಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ಸದರ್ ಕೊತ್ವಾಲಿ ಪೊಲೀಸರು ಇಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅದರ ವರದಿಯ ಆಧಾರದ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ, ಮಾಧ್ಯಮಗಳಲ್ಲಿ ಬಿಡುಗಡೆಯಾದ ವಿಡಿಯೋಗಳನ್ನು ಸಂಬಂಧಿಸಿ ವಿವಿಧ ಇಲಾಖೆಗಳ ತಜ್ಞರ ಅಭಿಪ್ರಾಯಗಳು ಸೇರಿದಂತೆ 30 ಪುಟಗಳ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 11 (1) (ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ) ಮತ್ತು ಸೆಕ್ಷನ್ 429 (ಪ್ರಾಣಿಗಳನ್ನು ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು) ಅಡಿಯಲ್ಲಿ ಮನೋಜ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ರಾಜೇಶ್ ಯಾದವ್ ಅವರು ಚಾರ್ಜ್‌ಶೀಟ್‌ನಲ್ಲಿ ಬರೆದಿದ್ದಾರೆ.

suddiyaana