ಕರ್ನಾಟಕದಲ್ಲಿ ಉಷ್ಣಾಂಶ ವಾಡಿಕೆಗಿಂತ 3 ರಿಂದ 4 ಡಿಗ್ರಿ ಹೆಚ್ಚಳ.. – ಮಳೆ ನಡುವೆಯೂ ಈಗ ಸೆಕೆಗಾಲ..!

ಕರ್ನಾಟಕದಲ್ಲಿ ಉಷ್ಣಾಂಶ ವಾಡಿಕೆಗಿಂತ 3 ರಿಂದ 4 ಡಿಗ್ರಿ ಹೆಚ್ಚಳ.. – ಮಳೆ ನಡುವೆಯೂ ಈಗ ಸೆಕೆಗಾಲ..!

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತವಾಗಿ ಮಳೆ ಸುರಿಯುತ್ತಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಮಾತ್ರ ಮಳೆರಾಯ ಕೃಪೆ ತೋರುವಂತೆ ಕಾಣುತ್ತಿಲ್ಲ. ಮಳೆಯ ಕೊರೆತೆಯ ಪರಿಣಾಮ ಗರಿಷ್ಠ ಉಷ್ಣಾಂಶದಲ್ಲಿ ವಾಡಿಕೆಗಿಂತ ಸರಾಸರಿ 3 ರಿಂದ 4 ಡಿಗ್ರಿ ಸೆಲ್ಶಿಯಸ್ ಹೆಚ್ಚಳವಾಗುತ್ತಿದೆ. ಇದರಿಂದ ರಾಜ್ಯದ ಹಲವು ಜಿಲ್ಲೆಗಳ ಜನ- ಜಾನುವಾರು ತತ್ತರಿಸಿ ಹೋಗಿವೆ.

ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಕಾರ ರಾಜ್ಯದಲ್ಲಿ 85.2 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ 63.5 ಸೆಂ.ಮೀ. ಮಳೆಯಾಗಿದ್ದು, ಶೇ.25ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್‌ ಅ.10ರವರೆಗೆ ವಾಡಿಕೆ ಪ್ರಕಾರ 5.9 ಸೆಂ.ಮೀ. ಮಳೆಯ ಬದಲು 2.2 ಸೆಂ.ಮೀ ಮಾತ್ರ ಮಳೆಯಾಗಿದ್ದು, ಶೇ.62 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ರಾಜ್ಯದ ಉಷ್ಣಾಂಶದಲ್ಲಿ ಹೆಚ್ಚಳವಾಗಿದ್ದು, ಬೇಸಿಗೆಗೆ 5 ತಿಂಗಳು ಮೊದಲೇ ರಾಜ್ಯದಲ್ಲಿ ಭಾರೀ ಸೆಖೆಯ ವಾತಾವರಣ ನಿರ್ಮಾಣವಾಗಿದೆ.  ಮಳೆಗಾಲದಲ್ಲೇ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ ರೈತರು ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಸುಮಲತಾ ರಾಜಕೀಯ ಭವಿಷ್ಯ ಅತಂತ್ರ – ಮಂಡ್ಯ ಸಂಸದೆ ಮುಂದಿನ ನಡೆ ಬಗ್ಗೆಯೇ ಕುತೂಹಲ

ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹೊನ್ನಾವರ, ಕಲಬುರಗಿ, ಮಂಡ್ಯ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ಬಾದಾಮಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ. ಇನ್ನು ಉತ್ತರ ಒಳನಾಡಿನಲ್ಲಿ ಮುಂಗಾರು ಅವಧಿಯಲ್ಲಿ ಉಂಟಾದ ಮಳೆ ಕೊರತೆ ಈಗಲೂ ಮುಂದುವರೆದಿದೆ. ಬಾಗಲಕೋಟೆಯಲ್ಲಿ ಮಂಗಳವಾರ ವಾಡಿಕೆಗಿಂತ ಐದು ಡಿಗ್ರಿ ಸೆಲ್ಶಿಯಸ್‌ ಹೆಚ್ಚಾಗಿದೆ. ಬಾಗಲಕೋಟೆಯಲ್ಲಿ ಅಕ್ಟೋಬರ್‌ನ ವಾಡಿಕೆ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಶಿಯಸ್‌ ಆಗಿದೆ.

ಇನ್ನು ಮಲೆನಾಡು ಭಾಗದಲ್ಲೂ ಮುಂಗಾರು ಆರಂಭದಿಂದಲೂ ಭಾರಿ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. ಕಳೆದ ಮೂರು ತಿಂಗಳಲ್ಲಿ ಜುಲೈನಲ್ಲಿ ಸ್ವಲ್ಪ ಮಳೆಯಾಗಿರುವುದನ್ನು ಬಿಟ್ಟರೆ ಮಳೆ ಕೊರತೆಯಾಗಿದೆ. ಹೀಗಾಗಿ, ಹಾಸನದಲ್ಲಿ ಸೋಮವಾರ 28.4 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದ್ದು, ವಾಡಿಕೆಗಿಂತ ಐದು ಡಿಗ್ರಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ವಾಡಿಕೆಗಿಂತ ಮೂರು ಡಿಗ್ರಿ ಸೆಲ್ಶಿಯಸ್‌ ಏರಿಕೆ ಕಂಡು ಬಂದಿದೆ. ಉಳಿದಂತೆ ಗದಗ, ಚಿತ್ರದುರ್ಗದಲ್ಲಿ ವಾಡಿಕೆ ಪ್ರಮಾಣಕ್ಕಿಂತ ನಾಲ್ಕು ಡಿಗ್ರಿ ಸೆಲ್ಶಿಯಸ್‌ ಏರಿಕೆಯಾಗಿದೆ. ಕಲಬುರಗಿ, ಮಂಡ್ಯ, ರಾಯಚೂರು ಹಾಗೂ ವಿಜಯಪುರದಲ್ಲಿ ವಾಡಿಕೆ ಪ್ರಮಾಣಕ್ಕಿಂತ 3 ಡಿಗ್ರಿ ಸೆಲ್ಶಿಯಸ್‌ ಹೆಚ್ಚಾದರೆ, ಬೆಳಗಾವಿ, ಹೊನ್ನಾವರ ಹಾಗೂ ಕಾರವಾರದಲ್ಲಿ ತಲಾ 2 ಡಿಗ್ರಿ ಸೆಲ್ಶಿಯಸ್‌ ಕಳೆದ ಮೂರು-ನಾಲ್ಕು ದಿನದಲ್ಲಿ ಹಚ್ಚಳವಾದ ವರದಿಯಾಗಿದೆ.

Shwetha M