ಒಂದೇ ದಿನ 3 ರೆಡ್ ಕಾರ್ಡ್..! – ಫುಟ್ಬಾಲ್ ಮೈದಾನದಿಂದಲೇ ಹೊರನಡೆದ ಆಟಗಾರರು

ಒಂದೇ ದಿನ 3 ರೆಡ್ ಕಾರ್ಡ್..! –  ಫುಟ್ಬಾಲ್ ಮೈದಾನದಿಂದಲೇ ಹೊರನಡೆದ ಆಟಗಾರರು

ಫಿಫಾ ವಿಶ್ವಕಪ್ ಹಬ್ಬ ಶುರುವಾಗಿದೆ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾದ ಫುಟ್‌ಬಾಲ್‌ನಲ್ಲಿ ಶಿಸ್ತು ಮುಖ್ಯ. ಪಂದ್ಯದ ವೇಳೆ ಆಟಗಾರರು ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಅಶಿಸ್ತಿನ ವರ್ತನೆ ತೋರಿದರೆ ರೆಫರಿ ರೆಡ್ ಕಾರ್ಡ್ ಪ್ರದರ್ಶಿಸುತ್ತಾರೆ. ಈ ಕಾರ್ಡ್ ಹೊರಬಿದ್ದರೆ ಆಟಗಾರನಿಗೆ ಮಾತ್ರವಲ್ಲ, ಇಡೀ ತಂಡಕ್ಕೇ ಭಾರಿ ಹಿನ್ನಡೆಯಾಗುತ್ತದೆ. ಇದೀಗ ಮೂವರು ಆಟಗಾರರು ಇದೇ ಮೊದಲ ಬಾರಿಗೆ ಮೈದಾನದಿಂದ ಹೊರನಡೆದಿದ್ದಾರೆ.

ಇದನ್ನೂ ಓದಿ:ಜೀವನ ಈಗಷ್ಟೇ ಆರಂಭವಾಗಿದೆ ಗೆಳೆಯ – ಜೆಂಟಲ್‌ಮನ್‌ ಕ್ರಿಕೆಟರ್ ವಿಲಿಯಮ್ಸನ್ ನಿವೃತ್ತಿಗೆ ಕೊಹ್ಲಿ ಭಾವುಕ

ಫಿಫಾ ವಿಶ್ವಕಪ್​ ಶುರುವಾಗಿದೆ. ಮೆಕ್ಸಿಕೋದ ಪ್ರತಿಷ್ಠಿತ ಎಸ್ಟಾಡಿಯೋ ಅಝಟೆಕಾ ಕ್ರೀಡಾಂಗಣದಲ್ಲಿ ನಡೆದ ಮೆಕ್ಸಿಕೋ ಮತ್ತು ಸೌತ್ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯ ಕೆಟ್ಟ ದಾಖಲೆ ಬರೆದಿರುವುದು ಈಗ ಚರ್ಚೆಯ ವಿಚಾರವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ಸೌತ್ ಆಫ್ರಿಕಾವನ್ನು 2-0 ಗೋಲುಗಳಿಂದ ಮಣಿಸಿತು. ಆದರೆ, ಈ ಪಂದ್ಯ ಫುಟ್‌ಬಾಲ್ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಪಂದ್ಯವಾಗಿ ದಾಖಲಾಗಿದೆ. ಇದಕ್ಕೆ ಮುಖ್ಯ ಕಾರಣ ಮೂವರು ಆಟಗಾರರು ರೆಡ್ ಕಾರ್ಡ್ ಪಡೆದಿರುವುದು. ಈ ಪಂದ್ಯದಲ್ಲಿ ರೆಫರಿಯಾಗಿ ಕಾಣಿಸಿಕೊಂಡ ಬ್ರೆಝಿಲ್​ನ ವಿಲ್ಟನ್ ಪೆರೇರಾ ಸಂಪಾಯೊ ಅವರು ದ್ವಿತೀಯಾರ್ಧದಲ್ಲಿ ಒಟ್ಟು 3 ನೇರ ರೆಡ್ ಕಾರ್ಡ್‌ಗಳನ್ನು ಪ್ರದರ್ಶಿಸಿ ಇತಿಹಾಸ ನಿರ್ಮಿಸಿದರು.  ಅಂದರೆ ವಿಶ್ವಕಪ್ ಇತಿಹಾಸದಲ್ಲಿ ಉದ್ಘಾಟನಾ ಪಂದ್ಯವೊಂದರಲ್ಲೇ ಮೂವರು ಆಟಗಾರರು ಮೈದಾನದಿಂದ ಹೊರಹಾಕಲ್ಪಟ್ಟಿರುವುದು ಇದೇ ಮೊದಲು.

ಫಿಫಾ ವಿಶ್ವಕಪ್​ನಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.ಅದರಲ್ಲೂ ರೆಡ್ ಕಾರ್ಡ್ ಸಿಗಲು ಕಾರಣಗಳು ಕೂಡಾ ಇದೆ. ಮೈದಾನದಲ್ಲಿ ಆಟಗಾರರು ಗಲಾಟೆ ಅಥವಾ ವಾಗ್ವಾದದ ಸಮಯದಲ್ಲಿ ಎದುರಾಳಿ ಅಥವಾ ರೆಫರಿಯನ್ನು ನಿಂದಿಸುವುದನ್ನು ಬಚ್ಚಿಡಲು ತಮ್ಮ ಬಾಯಿಯನ್ನು ಕೈ ಅಥವಾ ಜೆರ್ಸಿಯಿಂದ ಮುಚ್ಚಿಕೊಂಡರೆ ನೇರವಾಗಿ ರೆಡ್ ಕಾರ್ಡ್ ನೀಡುವ ನಿಯಮ ತರಲಾಗಿದೆ. ತೀರ್ಪುಗಾರರ ನಿರ್ಧಾರವನ್ನು ಪ್ರತಿಭಟಿಸಿ ಅಶಿಸ್ತು ತೋರಿದರೆ ಅಥವಾ ಮೈದಾನ ಬಿಟ್ಟು ಹೊರನಡೆದರೆ ಕಠಿಣ ಕಾರ್ಡ್ ಶಿಕ್ಷೆ ಕಾಯಂ ಆಗಿದೆ.

ಇನ್ನು ಯಾರೆಲ್ಲಾ ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರಗೆ ಹೋಗಿದ್ದಾರೆ ಎಂದು ನೋಡುವುದಾದರೆ, ಮೆಕ್ಸಿಕೋ ತಂಡದ ಆಟಗಾರ ಬ್ರಿಯಾನ್ ಗುಟಿಯೆರೆಸ್ ​ಗೆ ಗೋಲು ಗಳಿಸಲು ಉತ್ತಮ ಅವಕಾಶವಿತ್ತು. ಈ ವೇಳೆ ಸಿಥೋಲ್ ಅವರು ನಿಯಮಬಾಹಿರವಾಗಿ ಅತ್ಯಂತ ಅಪಾಯಕಾರಿ ಟ್ಯಾಕಲ್ ಮಾಡಿ ಬೀಳಿಸಿದರು. ಈ ಅಪಾಯಕಾರಿ ಟ್ಯಾಕಲ್ ಕಾರಣ ಮ್ಯಾಚ್ ರೆಫರಿ ತಕ್ಷಣವೇ ಸ್ಪೆಫೆಲೊ ‘ಯಾಯಾ’ ಸಿಥೋಲ್​ಗೆ ನೇರ ರೆಡ್ ಕಾರ್ಡ್ ನೀಡಿದ್ದಾರೆ.

ಸೌತ್ ಆಫ್ರಿಕಾ ಆಟಗಾರ ಥೆಂಬಾ ಝ್ವಾನೆ . ಮೆಕ್ಸಿಕೋ ತಂಡದ ರಾಬರ್ಟೊ ಅಲ್ವಾರಾಡೊ ಅವರೊಂದಿಗೆ ನಡೆದ ಗಲಾಟೆಯ ಸಂದರ್ಭದಲ್ಲಿ, ಝ್ವಾನೆ ಅವರು ಅಶಿಸ್ತಿನ ವರ್ತನೆ ತೋರಿದ್ದರು. ವಿಡಿಯೋ ಅಸಿಸ್ಟೆಂಟ್ ರೆಫರಿ ಮರುಪರಿಶೀಲನೆಯ ನಂತರ, ಅವರು ಎದುರಾಳಿಯ ಮುಖಕ್ಕೆ ಹೊಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ರೆಫರಿ ಥೆಂಬಾ ಝ್ವಾನೆಗೆ ನೇರ ರೆಡ್ ಕಾರ್ಡ್ ನೀಡಿದ್ದಾರೆ.

ಮೆಕ್ಸಿಕೋ ಆಟಗಾರ ಸೆಸಾರ್ ಮಾಂಟೆಸ್. ಪಂದ್ಯ ಮುಗಿಯಲು ಕೇವಲ ಕೆಲವು ನಿಮಿಷಗಳು ಬಾಕಿ ಇರುವಾಗ ಮೆಕ್ಸಿಕೋದ ಡಿಫೆಂಡರ್ ಸೆಸಾರ್ ಮಾಂಟೆಸ್ ಸೌತ್ ಆಫ್ರಿಕಾ ಆಟಗಾರನನ್ನು ಕೆಳಗೆ ಉರುಳಿಸಿದ್ದರು. ಈ ಆಕ್ರಮಣಕಾರಿ ಆಟಕ್ಕೆ  ಸೆಸಾರ್ ಮಾಂಟೆಸ್​ಗೆ ರೆಡ್ ಕಾರ್ಡ್ ನೀಡಲಾಯಿತು. ರೆಡ್ ಕಾರ್ಡ್ ಪಡೆದ ಆಟಗಾರ ತಕ್ಷಣವೇ ಮೈದಾನವನ್ನು ಬಿಟ್ಟು ಹೊರಹೋಗಬೇಕು. ಅವರು ಪಂದ್ಯದ ಉಳಿದ ಅವಧಿಯಲ್ಲಿ ಮೈದಾನದಲ್ಲಿ ಆಡುವಂತಿಲ್ಲ. ಮತ್ತು ಸಬ್‌ಸ್ಟಿಟ್ಯೂಟ್ ಬೆಂಚ್‌ನಲ್ಲಿಯೂ ಕುಳಿತುಕೊಳ್ಳುವಂತಿಲ್ಲ. ಹಾಗೆಯೇ ರೆಡ್ ಕಾರ್ಡ್ ಪಡೆದ ಆಟಗಾರನ ಬದಲಿಗೆ ಸಬ್ಸ್​ಟಿಟ್ಯೂಟ್ ಆಗಿ ಮತ್ತೊಬ್ಬ ಆಟಗಾರನನ್ನು ಮೈದಾನಕ್ಕೆ ಇಳಿಸಲು ಅವಕಾಶವಿರುವುದಿಲ್ಲ. ಇದರಿಂದಾಗಿ ಆ ತಂಡವು ಉಳಿದ ಪಂದ್ಯವನ್ನು ಕೇವಲ 10 ಆಟಗಾರರೊಂದಿಗೆ ಆಡಬೇಕಾಗುತ್ತದೆ. ಇದು ತಂಡದ ಸೋಲಿಗೂ ಕಾರಣವಾಗಬಹುದು.

 

Sulekha

Leave a Reply

Your email address will not be published. Required fields are marked *