RCB ಬೆನ್ನೆಲುಬು ಟಿಮ್ ಡೇವಿಡ್ – IPLಗೂ ಮುನ್ನವೇ ಬೆಸ್ಟ್ ಫಿನಿಶರ್ ಹವಾ
2025ರ ಐಪಿಎಲ್ಗೆ ಇನ್ನು 2 ತಿಂಗಳಷ್ಟೇ ಬಾಕಿ. ಇಂಗ್ಲೆಂಡ್ ವಿರುದ್ಧ ಟಿ-20 ಹಾಗೇ ಏಕದಿನ ಸರಣಿ ಮುಗಿದ್ಮೇಲೆ ಚಾಂಪಿಯನ್ಸ್ ಟ್ರೋಫಿ. ಚಾಂಪಿಯನ್ಸ್ ಟ್ರೋಫಿ ಆದ್ಮೇಲೆ ಸೀದಾ ಐಪಿಎಲ್ ಅಬ್ಬರ ಶುರು. ಅದ್ರಲ್ಲೂ ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಅಧ್ಯಾಯ ಬರೆಯೋದ್ರಲ್ಲಿ ಡೌಟೇ ಇಲ್ಲ. ಹೊಸ ಹೊಸ ಆಟಗಾರರಿಗೆ ಮಣೆ ಹಾಕಿದ್ದ ಬೆಂಗಳೂರು ಟೀಮ್ ಅಚ್ಚರಿಯ ರೀತಿಯಲ್ಲಿ ಆಟಗಾರರನ್ನ ಖರೀದಿ ಮಾಡಿತ್ತು.
ಐಪಿಎಲ್ನ ಮೋಸ್ಟ್ ಪಾಪ್ಯುಲರ್ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರೂ ಒಂದು. ದೇಶ, ವಿದೇಶಗಳ ಲೀಗ್, ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಆರ್ಸಿಬಿ ಫ್ಯಾನ್ಸ್ ಇದ್ದೇ ಇರ್ತಾರೆ. ಬಟ್ ವಿಪರ್ಯಾಸ ಅಂದ್ರೆ ಕಳೆದ 17 ಸೀಸನ್ಗಳಿಂದ ಕಪ್ ಗೆಲ್ಲುವಲ್ಲಿ ಫೇಲ್ಯೂರ್ ಆಗ್ತಿದೆ. ಮೂರು ಸಲ ಫಿನಾಲೆ ತಲುಪಿದ್ರೂ ಟ್ರೋಫಿಗೆ ಮುತ್ತಿಕ್ಕೋ ಭಾಗ್ಯ ಸಿಕ್ಕಿಲ್ಲ. ಬಟ್ ಈ ವರ್ಷ ಕಪ್ ಬರವನ್ನ ನೀಗಿಸಿಕೊಳ್ಳಲೇಬೇಕು ಅಂತಾ ಪಣ ತೊಟ್ಟಿದೆ. ಅದಕ್ಕಾಗೇ ಹರಾಜಿನಲ್ಲಿ ಕ್ವಾಲಿಟಿ ಆಟಗಾರರಿಗೆ ಮಣೆ ಹಾಕಿತ್ತು. ಈ ಪೈಕಿ ಟಿಮ್ ಡೇವಿಡ್ ಕೂಡ ಬೆಸ್ಟ್ ಸೆಲೆಕ್ಷನ್ ಎನಿಸಿಕೊಳ್ತಿದ್ದಾರೆ.
ಇದನ್ನೂ ಓದಿ : ಟೆಸ್ಟ್ ನ ಬೆಸ್ಟ್ ಕ್ಯಾಪ್ಟನ್ ವಿರಾಟ್ – ಕೊಹ್ಲಿಗಿದ್ದ ಅದೃಷ್ಟ ರೋಹಿತ್ ಗೆ ಬದಲಾಗಿದ್ದೆಲ್ಲಿ?
ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಟಿಮ್ ಡೇವಿಡ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹೊಬಾರ್ಟ್ ಹರಿಕೇನ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಹೊಬಾರ್ಟ್ ಹರಿಕೇನ್ಸ್ ತಂಡದ ಪರ ಆಡ್ತಿರುವ ಟಿಮ್ ಡೇವಿಡ್ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದಾರೆ. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಕ್ರೀಸ್ಗೆ ಆಗಮಿಸುತ್ತಿದ್ದಂತೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಡಿಲೇಡ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಡೇವಿಡ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ 28 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 62 ರನ್ ಚಚ್ಚಿದರು. ಈ ಪಂದ್ಯ ಮುಗಿದ್ಮೇಲೆ ಟಿಮ್ ಡೇವಿಡ್ ಫುಲ್ ಟ್ರೆಂಡಿಂಗ್ನಲ್ಲಿದ್ದಾರೆ. ಆರ್ ಸಿಬಿ ಫ್ಯಾನ್ಸ್ ಅಂತೂ ತಂಡಕ್ಕೆ ಬೆಸ್ಟ್ ಫಿನಿಶರ್ ಸಿಕ್ಕಿರೋ ಖುಷಿಯಲ್ಲಿದ್ದಾರೆ.
ಆಸ್ಟ್ರೇಲಿಯಾ ಆಲ್ ರೌಂಡರ್ ಆಗಿರುವ ಟಿಮ್ ಡೇವಿಡ್ 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೊಂದಿಗೆ ಐಪಿಎಲ್ ಜರ್ನಿ ಸ್ಟಾರ್ಟ್ ಮಾಡಿದ್ರು. ಇದೀಗ ಐಪಿಎಲ್ 2025 ರ ಹರಾಜಿನಲ್ಲಿ ₹ 3 ಕೋಟಿಗೆ ಮುಂಬೈ ತಂಡದಿಂದ ಮತ್ತೆ ಬೆಂಗಳೂರು ಟೀಂ ಸೇರಿದ್ದಾರೆ. ಟಿಮ್ ಡೇವಿಡ್ ಬೆಸ್ಟ್ ಫಿನಿಶರ್ ಆಗಿದ್ದು ಟಿ-20 ಫಾರ್ಮೆಟ್ಗೆ ಸೂಪರ್ ಆಟಗಾರ. T20 ಪಂದ್ಯಗಳಲ್ಲಿ 160.30 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹಾಗೇ IPL ಸ್ಟ್ರೈಕ್ ರೇಟ್ 170ರ ಮೇಲಿದೆ. M. ಚಿನ್ನಸ್ವಾಮಿ ಕ್ರೀಡಾಂಗಣದಂತಹ ಸಣ್ಣ ಮೈದಾನದಲ್ಲಿ ಇನ್ನೂ ಹೆಚ್ಚು ಆರ್ಭಟಿಸಬಲ್ಲರು. ಟಿಮ್ ಡೇವಿಡ್ ಕೇವಲ ಐಪಿಎಲ್ ಸ್ಟಾರ್ ಅಲ್ಲ ಮಾತ್ರವಲ್ದೇ ವಿಶ್ವದಾದ್ಯಂತ ಟಿ 20 ಲೀಗ್‌ಗಳನ್ನು ಆಡಿದ್ದಾರೆ. ಬಿಗ್ ಬ್ಯಾಷ್ ಆಗಿರಲಿ, ಪಿಎಸ್‌ಎಲ್ ಆಗಿರಲಿ ಅಥವಾ ಸಿಪಿಎಲ್ ಆಗಿರಲಿ ಚೆಂಡನ್ನು ಮೈದಾನದ ಎಲ್ಲಾ ಮೂಲೆಗಳಿಗೂ ಒಡೆದಿದ್ದಾರೆ. ಸದ್ಯ ಆರ್ಸಿಬಿಯಲ್ಲಿ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿರೋದ್ರಿಂದ ಮಿಡಲ್ ಆರ್ಡರ್ ನಲ್ಲಿ ಬೆಸ್ಟ್ ಆಫ್ಶನ್ ಎನಿಸಿಕೊಳ್ಳಲಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡದಲ್ಲೂ ತಂಡಕ್ಕೆ ಆಸರೆಯಾಗಬಲ್ಲರು. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ ರಂತಹ ಸ್ಟಾರ್ ಬ್ಯಾಟರ್ಸ್ ಟಾಪ್ ಆರ್ಡರ್ ನಲ್ಲಿದ್ರೆ ಮಿಡಲ್ ಆರ್ಡರ್ ನಲ್ಲಿ ಟಿಮ್ ಡೇವಿಡ್ ಶಕ್ತಿಯಾಗಬಹುದು.