ಬೆಂಗಳೂರಿಗರಿಗೆ ಖುಷಿ ಸುದ್ದಿ! – ಸಿಲಿಕಾನ್‌ ಸಿಟಿಯಲ್ಲಿ ಮತ್ತೆ 3 ಕಡೆಗಳಲ್ಲಿ ‘ನಮ್ಮ ಮೆಟ್ರೋ’ ಮಾರ್ಗ?

ಬೆಂಗಳೂರಿಗರಿಗೆ ಖುಷಿ ಸುದ್ದಿ! – ಸಿಲಿಕಾನ್‌ ಸಿಟಿಯಲ್ಲಿ ಮತ್ತೆ 3 ಕಡೆಗಳಲ್ಲಿ ‘ನಮ್ಮ ಮೆಟ್ರೋ’ ಮಾರ್ಗ?

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ನಿಯಂತ್ರಿಸಲು ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಸರ್ಕಾರ ರೂಪಿಸುತ್ತಲೇ ಇದೆ. ಇವುಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 69 ಕಿಲೋ ಮೀಟರ್ ಮೆಟ್ರೋ ಸೇವೆ ಚಾಲ್ತಿಯಲ್ಲಿದೆ. ಇದೀಗ ಮತ್ತೆ ಹೊಸ 03 ಮೆಟ್ರೋ ಮಾರ್ಗಗಳ ಯೋಜನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋಗಾಗಿ ಮರಗಳ ಮಾರಣ ಹೋಮ! – ಎರಡು ವರ್ಷಗಳಲ್ಲಿ 3,626 ಮರಗಳಿಗೆ ಕೊಡಲಿ ಏಟು

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಬಿಎಂಆರ್‌ಸಿಎಲ್‌ ಸಭೆಯಲ್ಲಿ ಬಿಎಂಆರ್‌ಸಿಎಲ್‌ ಅಧ್ಯಕ್ಷ ಅಂಜುಂ ಪರ್ವೇಜ್‌ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಐಟಿ ಕಾರಿಡಾರ್‌ ಸಂಪರ್ಕಿಸುವ ಸುಮಾರು 77 ಕಿಲೋ ಮೀಟರ್‌ ಉದ್ದದ ಮೂರು ಮಾರ್ಗಗಳ ಪ್ರಸ್ತಾವನೆಯನ್ನು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಸರ್ಕಾರದ ಮುಂದಿರಿಸಿದೆ ಎಂದು ವರದಿಯಾಗಿದೆ.

ವೈಟ್‌ಫೀಲ್ಡ್‌ನಿಂದ ಕಾಟಮನಲ್ಲೂರ್‌ ಗೇಟ್‌ ಮೂಲಕ ಹೊಸಕೋಟೆವರೆಗಿನ 17 ಕಿ.ಮೀ., ಒಳ ವರ್ತುಲ ರಸ್ತೆ (ಇನ್ನರ್‌ ರಿಂಗ್‌ರೋಡ್‌) ಬಳಿ 35 ಕಿ.ಮೀ. ಉದ್ದ, ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಮಾರತಹಳ್ಳಿ ಅಂಡರ್‌ಪಾಸ್‌-ಕಾಡುಗೋಡಿವರೆಗೆ ಸುಮಾರು 25 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ರೂಪಿಸಲು ಸಭೆಯಲ್ಲಿ ಪ್ರಸ್ತಾವನೆ ಇಡಲಾಗಿದೆ. ಈ ಮಾರ್ಗಗಳ ಕುರಿತು ಸಮೀಕ್ಷೆ ಹಾಗೂ ಸಮಗ್ರ ಯೋಜನಾ ವರದಿ ರೂಪಿಸುವ ಕಾರ್ಯ ಇನ್ನಷ್ಟೇ ಆಗಬೇಕಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಮೆಟ್ರೋ ಮೂರನೇ ಹಂತದ ಯೋಜನೆ ಜೆ.ಪಿ.ನಗರ- ಕೆಂಪಾಪುರ ಕೆರೆ ಹಾಗೂ ಹೊಸಹಳ್ಳಿ-ಕಡಬಗೆರೆ ಮಾರ್ಗದ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಎರಡನೇ ಹಂತದ ಯೋಜನೆಗಳಾದ ಹಳದಿ ಮಾರ್ಗದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗ ವರ್ಷಾಂತ್ಯಕ್ಕೆ ಜನಸಂಚಾರಕ್ಕೆ ಮುಕ್ತವಾಗಲಿದೆ. ಜೊತೆಗೆ ರೇಷ್ಮೆ ಕೇಂದ್ರದಿಂದ-ಕೆ.ಆರ್‌.ಪುರ ಮಾರ್ಗ 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

suddiyaana