ಪುತ್ತಿಲ ಪರಿವಾರದಿಂದ ಬಿಜೆಪಿಗೆ 3 ದಿನ ಡೆಡ್ ಲೈನ್ – ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧ ಅಂತ ಎಚ್ಚರಿಕೆ

ಪುತ್ತಿಲ ಪರಿವಾರದಿಂದ ಬಿಜೆಪಿಗೆ 3 ದಿನ ಡೆಡ್ ಲೈನ್ –  ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧ ಅಂತ ಎಚ್ಚರಿಕೆ

ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂಪರ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಪುತ್ತಿಲ ಕಳೆದ ವಿಧಾಸನಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋತರೂ ಪುತ್ತಿಲ ಪರಿವಾರದ ಮೂಲಕ ಬಿಜೆಪಿಗೆ ದೊಡ್ಡ ಹೊಡೆತ ನೀಡಿದ್ರು. ಇದೀಗ ಮರಳಿ ಬಿಜೆಪಿಗೆ ಪುತ್ತಿಲರನ್ನ ಸೇರಿಸಿಕೊಳ್ಳೋಕೆ ರಾಜ್ಯ ಮಟ್ಟದ ನಾಯಕರು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷವನ್ನು ಬಲ ಪಡಿಸಲು ಮುಂದಾಗಿದ್ದಾರೆ. ಆದ್ರೆ ಬಿಜೆಪಿ ನಾಯಕರಿಗೆ ಪುತ್ತಿಲ ಬಿಗ್ ಶಾಕ್ ಕೊಟ್ಟಿದ್ದಾರೆ. ಹಾಗಾದ್ರೆ ಪುತ್ತಿಲ ಬಿಜೆಪಿಗೆ ಸೇರ್ಪಡೆಯಾಗ್ತಾರಾ..? ಏನೆಲ್ಲಾ ಕಂಡೀಷನ್ಸ್ ಹಾಕಿದ್ದಾರೆ..? ಈ ಬಗೆಗಿನ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮರಳಿ ಬಿಜೆಪಿಗೆ ಸೇರುತ್ತಾರಾ ಅರುಣ್ ಕುಮಾರ್ ಪುತ್ತಿಲ? – ಫೆಬ್ರವರಿ 5ಕ್ಕೆ ಮುಹೂರ್ತ ಫಿಕ್ಸ್?

ಅರುಣ್ ಕುಮಾರ್ ಪುತ್ತಿಲ ಮತ್ತೆ ಬಿಜೆಪಿ ಸೇರ್ಪಡೆ ಚರ್ಚೆ ಜೋರಾಗಿದೆ. ಪುತ್ತೂರಿನಲ್ಲಿ ಸೋಮವಾರ ಪುತ್ತಿಲ ಪರಿವಾರದ ಬೃಹತ್ ಸಮಾಲೋಚನಾ ಸಭೆ ನಡೆದಿದೆ. ಸಭೆ ಬಳಿಕ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ನಮ್ಮ ಪರಿವಾರ ಬಿಜೆಪಿಗೆ ಸೇರಲು ಸಿದ್ಧವಿದೆ. ಆದ್ರೆ ನಾವು ಯಾರನ್ನೂ ಬೈಯ್ದಿಲ್ಲ, ಹೀಗಾಗಿ ಕ್ಷಮೆ ಕೇಳೋಕೆ ಸಾಧ್ಯವೇ ಇಲ್ಲ. ಇನ್ನು ನಾವೇ ಒಂದು ಮುಹೂರ್ತ ಫಿಕ್ಸ್ ಮಾಡ್ತೇವೆ, ಇವತ್ತಿನಿಂದ ಮೂರು ದಿನಗಳ ಒಳಗೆ ಒಂದು ನಿರ್ಧಾರ ಮಾಡಬೇಕು ಅಂತ ಪುತ್ತಿಲ ಪರಿವಾರ ಬಿಜೆಪಿಗೆ ಡೆಡ್‌ಲೈನ್ ಕೊಟ್ಟಿದ್ದಾರೆ.

ಪುತ್ತೂರಿನಲ್ಲಿ ಸೋಮವಾರ ಪುತ್ತಿಲ ಪರಿವಾರದಿಂದ ಸಭೆ ನಡೆಸಲಾಯ್ತು. ಸಭೆಯಲ್ಲಿ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಪುತ್ತಿಲಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬುದು ಪರಿವಾರದ ಮುಖಂಡರ ಬೇಡಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಾಪ್ ಗ್ರೂಪ್‌ಗಳಲ್ಲಿ 4,23,400 ಜನ ಬೆಂಬಲಿಗರಿದ್ದಾರೆ. ಚುನಾವಣೆಯಲ್ಲಿ ಗೆಲ್ಲಬೇಕಾದರೇ ದೊಡ್ಡ ಸಂಗತಿಯೇ ಅಲ್ಲ, ವ್ಯವಸ್ಥೆಗಳ ಅಗತ್ಯವೂ ಇಲ್ಲ. ನಾವೆಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ರಕ್ತವನ್ನು ಬೆವರು ಮಾಡಿ ಮಾತೃ ಪಕ್ಷವನ್ನು‌ ಅಧಿಕಾರಕ್ಕೆ ತರಲು ದುಡಿದಿದ್ದೇವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಗೌರವ ತರುವ ವ್ಯವಸ್ಥೆಗಳು ಸುಸೂತ್ರವಾಗಿ‌ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಪುತ್ತಿಲ ಪರಿವಾರ ಸಂಘಟನೆ ಕೆಲವು ತೀರ್ಮಾನಗಳನ್ನ‌ ತೆಗೆದುಕೊಂಡಿದೆ. ಅವರ ನಿರ್ಧಾರಕ್ಕೆ ನಾನು ಕಟಿಬದ್ಧನಾಗಿದ್ದೇನೆ. ಮಾತೃ ಪಕ್ಷದವರು ಈ ಬಗ್ಗೆ ಸೂಕ್ತ ನಿರ್ಧಾರ ಮೂರು ದಿನಗಳೊಳಗೆ ಕೈಗೊಳ್ಳಬೇಕು. ಇಲ್ಲದಿದ್ದರೆ ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧ ಅಂತ ಎಚ್ಚರಿಸಿದ್ದಾರೆ. ಇನ್ನು ಅರುಣ್ ಕುಮಾರ್ ಪುತ್ತಿಲ ಒಳಗೆ ಬಂದ್ರೆ ನಮ್ಮ ಕುರ್ಚಿಗೆ ಪೆಟ್ಟು ಬೀಳುತ್ತೆ ಅಂತ 4 ಜನ ಮಾತ್ರ ಅಡ್ಡಿಯಾಗಿದ್ದಾರೆ. ಅದು ಬಿಟ್ಟರೆ 32,000 ಜನರ ವಿರೋಧವೇ ಇಲ್ಲ ಅಂತ ಪುತ್ತಿಲ ಪರಿವಾರದ ಮುಖಂಡ ಶ್ರೀ ಕೃಷ್ಣ ಉಪಾಧ್ಯಾಯ ಹೇಳಿದ್ದಾರೆ.

ಇನ್ನು ಪುತ್ತಿಲ ಬಿಜೆಪಿಗೆ ಸೇರ್ಪಡೆಯಾಗಲು ಕ್ಷಮೆ ಕೇಳಬೇಕು ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಆದ್ರೆ ನಾವು ಯಾರನ್ನೂ ಬೈದಿಲ್ಲ ಹಾಗಾಗಿ ಯಾರಲ್ಲೂ ಕ್ಷಮೆ ಕೇಳುವ ಅವಶ್ಯತೆಯಿಲ್ಲ. ನಾವೇ ಒಂದು ಮುಹೂರ್ತ ಫಿಕ್ಸ್ ಮಾಡ್ತೇವೆ. ಪುತ್ತಿಲ ಪರಿವಾರ ಬಿಜೆಪಿಗೆ ಸೇರಲು ಸಿದ್ದವಿದೆ. ಆದ್ರೆ ಕ್ಷಮೆ ಕೇಳುವುದಕ್ಕೆ ಸಾಧ್ಯವಿಲ್ಲ ಎಂದು ಪುತ್ತಿಲ ಪರಿವಾರ ಕಡ್ಡಿ ಮುರಿದಂತೆ ಹೇಳಿದೆ. ಅಲ್ಲದೆ ಅರುಣ್ ಪುತ್ತಿಲಗೆ ಬೆಂಬಲಿಗರ ಪಡೆ ಹೆಚ್ಚಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೂ ಎರಡನೇ ಸ್ಥಾನ ಪಡೆದಿದ್ರು. ಪುತ್ತಿಲ ಪರಿವಾರ ಸಂಘಟನೆ ಸ್ಥಾಪನೆಯಾದ ಬಳಿಕವಂತೂ ಅಂತರ ಇನ್ನೂ ಹೆಚ್ಚುತ್ತಲೇ ಹೋಯಿತು. ಅರುಣ್ ಪುತ್ತಿಲ  ಜಿಲ್ಲೆಯಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡು ಬಲಪಂಥೀಯ ಕಾರ್ಯಕರ್ತರೊಂದಿಗೆ ಸಭೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪುತ್ತಿಲ ಪರಿವಾರದಿಂದಲೂ ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ತಿದ್ದಾರೆ. ಒಂದು ವೇಳೆ ಪುತ್ತಿಲ ಬೇಡಿಕೆಗಳಿಗೆ ಬಿಜೆಪಿ ಒಪ್ಪದೇ ಇದ್ದ ಪಕ್ಷದಲ್ಲಿ ಮತ್ತೆ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದಾಗಿ ಹೇಳಿದ್ದಾರೆ. ಹಾಗೇನಾದ್ರೂ ಆದ್ರೆ ಮತ್ತೊಮ್ಮೆ ಬಿಜೆಪಿಗೆ ಹಿನ್ನಡೆಯಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

Sulekha