ಬ್ಯಾಂಕ್ ಗಳಿಗೇ ಯಾಮಾರಿಸಿದ ಖತರ್ನಾಕ್ ಖದೀಮರು – ನಕಲಿ ದಾಖಲೆಗಳನ್ನು ನೀಡಿ 3 ಬ್ಯಾಂಕ್ ಗಳಲ್ಲಿ 3 ಕೋಟಿ ಸಾಲ!

ಬ್ಯಾಂಕ್ ಗಳಿಗೇ ಯಾಮಾರಿಸಿದ ಖತರ್ನಾಕ್ ಖದೀಮರು – ನಕಲಿ ದಾಖಲೆಗಳನ್ನು ನೀಡಿ 3 ಬ್ಯಾಂಕ್ ಗಳಲ್ಲಿ 3 ಕೋಟಿ ಸಾಲ!

ನಿಮಗೇನಾದ್ರೂ ಲೋನ್ ಬೇಕಾ ಸರ್, ಮೇಡಂ ಅಂತಾ ಫೋನ್​ನಲ್ಲೇ ಕರೆ ಮಾಡಿ ಕೇಳ್ತಾರೆ. ಹೌದು ಬೇಕೂ ಅಂದ್ರೆ ಒಂದಷ್ಟು ಪ್ರಕ್ರಿಯೆಗಳು ಇರುತ್ತವೆ. ಅವುಗಳನ್ನ ಮುಗಿಸಿದ್ರೆ ನಿಮ್ಮ ಹಣದ ವ್ಯವಹಾರದ ಆಧಾರದ ಮೇಲೆ ಲೋನ್ ಕೊಡ್ತಾರೆ. ಅದ್ರಲ್ಲೂ ಮನೆ, ಸೈಟ್, ಆಸ್ತಿಗಳ ಮೇಲೆ ಲೋನ್ ತಗೊಳ್ಳೋದಿದ್ರೆ ಬ್ಯಾಂಕ್ ನವರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಯೇ ಸಾಲ ಕೊಡೋದು. ಆದರೆ ಇಲ್ಲಿ ಐನಾತಿಗಳು ಬ್ಯಾಂಕ್ ಸಿಬ್ಬಂದಿಯನ್ನೇ ಯಾಮಾರಿಸಿದ್ದಾರೆ.

ಸಾವಿರ ರೂಪಾಯಿಯೇ ಆಗಲಿ, ಲಕ್ಷವೇ ಇರಲಿ. ಲೋನ್ ಬೇಕು ಅಂದ್ರೆ ಈಸಿಯಾಗಿ ಸಿಗಲ್ಲ. ಅಂಥಾದ್ರಲ್ಲಿ ಕೋಟಿ ಕೋಟಿ ಲೋನ್ ಕೊಡೋದು ಅಂದ್ರೆ ತಮಾಷೆ ಮಾತಲ್ಲ. ಆದ್ರೆ ಇಲ್ಲಿ ಮಹಿಳೆಯೊಬ್ಬರ ಆಸ್ತಿಯ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಮೂರು ಬ್ಯಾಂಕ್‌ಗಳಲ್ಲಿ ಮೂರು ಕೋಟಿ ರೂಪಾಯಿ ಸಾಲ ಪಡೆದಿರುವ ಘಟನೆ ಬೆಂಗಳೂರಿನಲ್ಲೇ ನಡೆದಿದೆ. ಕೃತ್ಯ ಎಸಗಿದ ಆರೋಪದ ಮೇಲೆ ಐವರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ 6ನೇ ಹಂತದ ನಿವಾಸಿ ಅಂಬುಜಾಕ್ಷಿ ನಾಗರಕಟ್ಟಿ (75) ಎಂಬುವರು 1,350 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿದ್ದ ಮನೆಯನ್ನು ಮಾರಾಟ ಮಾಡಿ ಮಗನ ಜೊತೆ ವಿದೇಶದಲ್ಲಿ ವಾಸಿಸಲು ನಿರ್ಧರಿಸಿದ್ದರು. ಮನೆ ಮಾರುವ ಬಗ್ಗೆ ಅಂಬುಜಾಕ್ಷಿ ತನ್ನ ನೆರೆಹೊರೆಯವರ ಬಳಿ ಹೇಳಿದ್ದಾಳೆ. ಈ ವೇಳೆ ಅವರ ನೆರೆಹೊರೆಯವರಲ್ಲಿ ಒಬ್ಬರಾದ ಮಂಜುನಾಥ್ ತನ್ನ ಸ್ನೇಹಿತ ಭಾಸ್ಕರ್ ಕೃಷ್ಣ ಮನೆಯನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂದು ಹೇಳಿ ಅವರನ್ನು ಸಂಪರ್ಕಿಸಿದ್ದಾರೆ. ಕೃಷ್ಣ ಅಂಬುಜಾಕ್ಷಿಯನ್ನು ಭೇಟಿಯಾಗಿದ್ದು, ಆಸ್ತಿಗಾಗಿ 10,000 ರೂ. ಮುಂಗಡ ಹಣವನ್ನಾಗಿ ನೀಡಿದ್ದಾರೆ. ಕಾನೂನು ಅನುಮತಿ ಪಡೆಯಬೇಕು ಎಂದು ಆಕೆಯಿಂದ ಆಸ್ತಿ ದಾಖಲೆಗಳ ನಕಲು ಪ್ರತಿಗಳನ್ನು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : 8ನೇ ಮಹಡಿಯಿಂದ ಬಿದ್ದ ಲಿಫ್ಟ್- ಐವರು ಟೆಕ್ಕಿಗಳಿಗೆ ಗಂಭೀರ ಗಾಯ

ಯಾವಾಗ ಜಾಗದ ಮಾಲೀಕರಾದ ಅಂಬುಜಾಕ್ಷಿ ಅವರಿಂದ ಮನೆ ದಾಖಲೆ ಪತ್ರಗಳನ್ನ ತೆಗೆದುಕೊಂಡರೋ ಅಲ್ಲೇ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಕೆಲವು ದಿನಗಳ ನಂತರ, ಕೃಷ್ಣ  ಮಹೇಶ್ ಮತ್ತು ಇತರ ಸ್ನೇಹಿತರೊಂದಿಗೆ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಅಂಬುಜಾಕ್ಷಿಯ ಮನೆಗೆ ಹೋಗಿದ್ದಾರೆ. ಆಗ ತನಗೆ ಬ್ಯಾಂಕ್‌ ಲೋನ್‌ ಬೇಕು, ಅದಕ್ಕಾಗಿ ಆಕೆಯ ಸಹಿ ಬೇಕು ಎಂದು ಕೃಷ್ಣ ಹೇಳಿದಾಗ, ಬ್ಯಾಂಕ್‌ ಉದ್ಯೋಗಿಯಾಗಿದ್ದ ಅಂಬುಜಾಕ್ಷಿ ಆತನ ಉದ್ದೇಶವನ್ನು ಪ್ರಶ್ನಿಸಿ ತನ್ನ ಆಸ್ತಿಯನ್ನು ಆತನಿಗೆ ಮಾರಲು ನಿರಾಕರಿಸಿದ್ದಾರೆ. ನಂತರ ಅಂಬುಜಾಕ್ಷಿ ಅವರ ಹೆಸರಿನಲ್ಲಿ ಈಗಾಗಲೇ ಮೂರು ಬ್ಯಾಂಕ್‌ಗಳಲ್ಲಿ 3 ಕೋಟಿ ರೂಪಾಯಿ ಸಾಲ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳು ಬ್ಯಾಂಕ್‌ಗಳಿಂದಲೂ ಹಣ ಡ್ರಾ ಮಾಡಿಕೊಂಡಿದ್ದರು. ಪ್ರಕರಣದ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Shantha Kumari