ಮೋದಿ ರಿಮೋಟ್ ಮೂವರ ಕೈಯಲ್ಲಿ! – 3.Oದಲ್ಲಿ ಕಂಟ್ರೋಲ್ ಮಾಡ್ತಾರಾ?
ಮೋದಿ ಮನ್ ಕೀ ಬಾತ್ ನಡೆಯಲ್ವಾ?
ಲೋಕಸಭೆ ಚುನಾವಣೆಯಲ್ಲಿ ತನ್ನ ಸಾಧನೆಯ ಬಗ್ಗೆ ಕಾಂಗ್ರೆಸ್ ಹಾಗೂ ಇಂಡಿಯಾ ಬ್ಲಾಕ್ ಖುಷಿಯಲ್ಲಿದೆ. ಆದರೆ ಅವರೆಷ್ಟೇ ಬೀಗಿದರೂ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಾಗಿಲ್ಲ.. ನೇರವಾಗಿ ಬಿಜೆಪಿಗೆ ಸತತ ಮೂರನೇ ಬಾರಿ ಬಹುಮತದ ಹ್ಯಾಟ್ರಿಕ್ ಗೆಲುವು ಸಿಕ್ಕಿಲ್ಲ.. ಹಾಗಿದ್ದರೂ ಎನ್‌ಡಿಎ ಮೈತ್ರಿಕೂಟಕ್ಕೆ ಹ್ಯಾಟ್ರಿಕ್ ಗೆಲುವು ಸಿಕ್ಕಿದೆ.. ಬಹುಮತವಿಲ್ಲದ ಕಾರಣದಿಂದ ಈಗ ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ, ಯಾವುದೇ ಪ್ರಮುಖ ಕಾಯ್ದೆಯನ್ನು ಜಾರಿಗೊಳಿಸಲು ಮಸೂದೆಗಳನ್ನು ಸಿದ್ಧಪಡಿಸುವಾಗಲೂ ಈ ಮೂವರ ಅಭಿಪ್ರಾಯಕ್ಕೆ ಮಣೆ ಹಾಕಲೇ ಬೇಕಾದ ಅನಿವಾರ್ಯತೆ ಮೋದಿಯವರಿಗಿದೆ.. ಗುಜರಾತ್‌ನಲ್ಲಿ ಮುಖ್ಯಮಂತ್ರಿ ಆದಲ್ಲಿಂದಲೂ ಬಹುಮತದೊಂದಿದೆ ಸರ್ಕಾರ ನಡೆಸಿದ್ದ ಮೋದಿ ಈಗ ದೋಸ್ತಿಗಳ ಹೆಗಲ ಮೇಲೆ ಸಾಗಿ ಸಮ್ಮಿಶ್ರ ಸರ್ಕಾರದ ರಥವನ್ನು ಎಳೆಯಬೇಕಿದೆ.. ಹೀಗಾಗಿಯೇ ಮೋದಿ ತ್ರೀ ಪಾಯಿಂಟ್ .0 ಸರ್ಕಾರಕ್ಕೆ ತಂತಿ ಮೇಲಿನ ನಡಿಗೆ ಫಿಕ್ಸ್ ಎಂಬಂತಾಗಿದೆ..
ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ರಾತ್ರಿಯಾಗುತ್ತಿದ್ದಂತೆ ಸಂಭ್ರಮಾಚರಣೆ ಜೋರಾಗಿತ್ತು.. ಮೋದಿ ಮೋದಿ ಎಂಬ ಘೋಷಣೆ.. ಕಾರ್ಯಕರ್ತರ ನಡುವೆಯೇ ಎರಡೂ ಕೈಗಳನ್ನು ಮೇಲೆತ್ತಿ ವಿಕ್ಟರಿ ಸಿಂಬಲ್ ತೋರಿಸುತ್ತಾ ಮೋದಿ ನಡೆದು ಬಂದಿದ್ದರು.. ಅವರಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಾಥ್ ನೀಡಿದ್ದರು.. ಈ ಸ್ವರೂಪದ ಸೆಲೆಬ್ರೇಷನ್‌ಗಾಗಿ ಬಿಜೆಪಿ ಮೊದಲೇ ಸಜ್ಜಾಗಿತ್ತು.. ನಿನ್ನೆ ಸಂಭ್ರಮಾಚಾರಣೆ ಇದ್ದರೂ ಎಲ್ಲರ ಮುಖದಲ್ಲೂ ಒಂದು ರೀತಿಯ ಬಲವಂತದ ನಗುವಿತ್ತು.. ಒತ್ತಾಯದ ಹರ್ಷವಿತ್ತು.. ಸಂಭ್ರಮಾಚರಣೆಯಲ್ಲಿದ್ದವರಲ್ಲೂ ಎಷ್ಟು ಘೋಷಣೆ ಕೂಗಬೇಕು? ಯಾವಾಗ ಘೋಷಣೆ ಕೂಗಬೇಕು ಎಂಬ ಬಗ್ಗೆಯೂ ಅನುಮಾನಗಳು ಇದ್ದಂತ ಕಾಣುತ್ತಿತ್ತು.. ಹಾಗಿದ್ದರೂ ಬಿಜೆಪಿ ನಾಯಕರು ಹರ್ಷಾಚರಣೆ ಮಾಡುತ್ತಿದ್ದರು.. ಯಾಕಂದ್ರೆ ಬಹುಮತ ಸಾಧಿಸಲು ಸಾಧ್ಯವಾಗದ ನೋವು, ಮೈತ್ರಿಯ ಅನಿವಾರ್ಯತೆ ಅವರನ್ನು ಕಾಡುತ್ತಿತ್ತು.. ಈಗ ಮೋದಿಯವರು ಮನ್‌ಕೀ ಬಾತ್ ಮಾತ್ರ ಕೇಳಿದ್ರೆ ಸಾಕಾಗೋದಿಲ್ಲ.. ಈಗ ಮೀತ್ರೋಂ ಕೀ ಬಾತ್ ಕೂಡ ಕೇಳಬೇಕಿದೆ.. ಯಾಕಂದ್ರೆ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಸಿಕ್ಕಿದ್ದು ಕೇವಲ 240 ಕ್ಷೇತ್ರಗಳಲ್ಲಿ ಮಾತ್ರ ಗೆಲುವು,, ಖುದ್ದು ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲೇ ಕ್ಲೀನ್ ಸ್ವೀಪ್ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ.. ಬಹುಮತಕ್ಕಿಂತ 33 ಸೀಟುಗಳಷ್ಟು ದೂರದಲ್ಲಿದ್ದಾರೆ ಮೋದಿ.. 273ರ ಮ್ಯಾಜಿಕ್ ನಂಬರ್ ದಾಟಲು ಮೋದಿ ನೇತೃತ್ವದ ಬಿಜೆಪಿಗೆ ಸಾಧ್ಯಾವಾಗಿಲ್ಲ.. ಹೀಗಾಗಿಯೇ ಅವರೀಗ ಮಿತ್ರರ ಹೆಗಲನ್ನು ಆಧರಿಸಿಯೇ ಸರ್ಕಾರದಲ್ಲಿ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.. ಎನ್‌ಡಿಎ ಗೆಲುವು ಸಾಧಿಸಿದ್ದನ್ನು ಬಿಜೆಪಿ ಕಚೇರಿಯಲ್ಲಿ ಸಂಭ್ರಮಿಸುತ್ತಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ಘೋಷಿಸಿದ್ದಾರೆ.
ಪ್ರಧಾನಿ ಮೋದಿಯವರು ಕೂಡ ಬಹಳ ವಿನಮ್ರತೆಯಿಂದಲೇ ಜನರು ನೀಡಿದ ತೀರ್ಪನ್ನು ಸ್ವೀಕರಿಸಿದ್ದಾರೆ.. ಮೂರನೇ ಬಾರಿಯೂ ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡೋದಾಗಿ ಹೇಳಿದ್ದಾರೆ.
ಆದರೆ ಹೀಗೆ ಮೂರನೇ ಬಾರಿಗೆ ಪ್ರಧಾನಿಯಾಗಲು ಸಿದ್ಧರಾಗಿದ್ದರೂ ಇಲ್ಲಿ ಮೋದಿಯವರ ರಿಮೋಟ್ ಈಗ ಮೂವರ ಕೈ ಸೇರಿದೆ.. ಕಳೆದೆರಡರು ಅವಧಿಯ ಸರ್ಕಾರದಲ್ಲಿ ಪಟಾಪಟ್ ನಿರ್ಧಾರ, ಕಠಿಣ ನಿಲುವುಗಳ ಮೂಲಕ ಮೋದಿ ಹೆಸರಾಗಿದ್ದರು.. ಆದ್ರೆ ಈಗ ಸಂಪೂರ್ಣವಾಗಿಯೇ ಅದೇ ಕಾರ್ಯಶೈಲಿಯಲ್ಲಿ ಮುಂದುವರೆಯುವುದು ಸ್ವಲ್ಪ ಕಷ್ಟವಾಗಬಹುದು.. ಯಾಕಂದ್ರೆ ಈ ಮೂವರ ಮರ್ಜಿ ಎಲ್ಲರಿಗಿಂತ ಸ್ವಲ್ಪ ಜಾಸ್ತಿಯೇ ಮೋದಿಯವರ ಮೇಲಿರಲಿದೆ.. ಅದರಲ್ಲಿ ಮೊದಲನೆಯವರು ಟಿಡಿಪಿಯ ಚಂದ್ರಬಾಬು ನಾಯ್ಡು.. ಆಂಧ್ರಪ್ರದೇಶದಲ್ಲಿ ದಿಗ್ವಿಜಯ ಸಾಧಿಸಿರುವ ಚಂದ್ರಬಾಬು ನಾಯ್ಡು ಅವರಿಗೆ ದೆಹಲಿ ರಾಜಕಾರಣದ ಆಳಅಗಲ ಚೆನ್ನಾಗಿಯೇ ಗೊತ್ತಿದೆ.. 1996ರಿಂದ ದೆಹಲಿಯಲ್ಲಿ ನಡೆದಿದ್ದ ಸಮ್ಮಿಶ್ರ ಸರ್ಕಾರಗಳ ಕಾಲಘಟ್ಟದಲ್ಲಿ 2004ರವರೆಗೆ ನಾಯ್ಡು ದೆಹಲಿ ರಾಜಕಾರಣದಲ್ಲಿ ಕಿಂಗ್ ಮೇಕರ್ ಆಗಿಯೇ ಇದ್ದರು.. ಈಗಲೂ ಅದೇ ಅವಕಾಶ ನಾಯ್ಡುಗೆ ಸಿಕ್ಕಿದೆ.. ದೆಹಲಿಯಿಂದ ದುಡ್ಡಿನ ಹರಿವು ಈ ಬಾರಿ ಆಂಧ್ರದ ಕಡೆಗೆ ಜಾಸ್ತಿಯಾಗಲಿದೆ.. ಹಾಗೇನಾದರೂ ತಾವು ಕೇಳಿದ್ದಕ್ಕೆಲ್ಲಾ ಒಪ್ಪದೇ ಇದ್ದರೆ, ತನ್ನ ದಾರಿ ತನ್ನದು ಎಂಬ ರೀತಿಯಲ್ಲಿ ನಡೆಯಲು ನಾಯ್ಡು ಹಿಂದೆ ಮುಂದೆ ನೋಡುವವರಲ್ಲ.. ಅವರಿಗೆ ಈಗ ಸರಿಯಾದ ಜೋಡಿಯಾಗುವವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್… ಈ ಲೋಕಸಭಾ ಚುನಾವಣೆಯ ನಂತರ ನಿತೀಶ್ ಬಾಬು ಅವರನ್ನು ಸಿಎಂ ಸ್ಥಾನದಿಂದ ಬಿಜೆಪಿ ಕೆಳಗಿಳಿಸಬಹುದು ಅಂತ ಹೇಳ್ತಾ ಇದ್ರು.. ಆದ್ರೆ ನಿತೀಶ್ ಕುಮಾರ್ ಸ್ಥಾನ ಈಗ ಭದ್ರವಾಗುವುದರ ಜೊತೆಗೆ ದೆಹಲಿಯ ರಿಮೋಟ್‌ನಲ್ಲಿ ಅವರಿಗೂ ಅರ್ಧಪಾಲು ಸಿಕ್ಕಿದೆ.. ಚಂದ್ರಬಾಬು ನಾಯ್ಡು ಅವರಂತೆಯೇ 1990 ದಶಕದ ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಪಳಗಿದ್ದರು.. ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು.. ಹೀಗಾಗಿ ನಿತೀಶ್ ಮತ್ತು ಚಂದ್ರಬಾಬು ನಾಯ್ಡು ಅವರ ಬೇಕು ಬೇಡಗಳನ್ನು ಕೇಳಿಯೇ ಮೋದಿ ಹೆಜ್ಜೆಯಿಡಬೇಕಾಗುತ್ತದೆ.. ಅದರಲ್ಲಿ ಪಲ್ಟು ಚಾಚಾ ಖ್ಯಾತಿಯ ನಿತೀಶ್ ಕುಮಾರ್ ಒಂದು ರೀತಿಯಲ್ಲಿ odd dayಗಳಲ್ಲಿ ಆರ್‌ಜೆಡಿ ಜೊತೆ ಈವನ್ ಡೇಗಳಲ್ಲಿ ಬಿಜೆಪಿ ಜೊತೆಗೆ ಸರ್ಕಾರ ನಡೆಸುವವರಂತೆ ಈ ಕಡೆ ಆ ಕಡೆ ಹಾರುತ್ತಲೇ ಇರುತ್ತಾರೆ.. ಸ್ವಲ್ಪ ಸಿಟ್ಟು ಬಂದರೂ ಬಿಜೆಪಿಗೆ ಟಾಟಾ ಗುಡ್‌ಬೈ ಹೇಳಿ, ಇಂಡಿಯಾ ಬ್ಲಾಕ್ ಸೇರಿದರೂ ಅಚ್ಚರಿಪಡಬೇಕಿಲ್ಲ..
ಈ ಇಬ್ಬರು ಮಾತ್ರವಲ್ಲದೆ ಮೂರನೇಯ ಶಕ್ತಿಯೂ ಕೂಡ ಈಗ ರಿಮೋಟ್ ಬಳಸಬಹುದು.. ಮೊದಲ ಎರಡು ಅವಧಿಗಳಲ್ಲಿ ಪೂರ್ಣಬಹುಮತವಿದ್ದಾಗ ಆರ್‌ಎಸ್‌ಎಸ್‌ನ ಮಾತನ್ನು ಮೋದಿ ಎಷ್ಟು ಕೇಳಿದರು ಎಷ್ಟು ಕೇಳಿಲ್ಲ ಎಂಬುದು ಬೇರೆ ಮಾತು.. ಆದ್ರೀಗ ಆರ್‌ಎಸ್‌ಎಸ್ ಕೂಡ ಸರ್ಕಾರದ ಮೇಲೆ ಹೆಚ್ಚಿನ ಹಿಡಿತ ಹೊಂದಬಹುದು.. ಒಬ್ಬರೇ ವ್ಯಕ್ತಿಯ ಮೇಲೆ ಅತಿಯಾದ ಅವಲಂಬನೆಯನ್ನು ಯಾವತ್ತಿದ್ದರೂ ವಿರೋಧಿಸಿ, ಸಂಘ ಶಕ್ತಿಯ ಮೇಲೆಯೇ ನಂಬಿಕೆಯಿಟ್ಟಿರುವ ಆರ್‌ಎಸ್‌ಎಸ್ ಕೂಡ ಈಗ ಸರ್ಕಾರಕ್ಕೆ ನಿರ್ದಿಷ್ಟ ಸೂಚನೆಗಳನ್ನು ನೀಡಬಹುದು ಎಂಬ ವಿಶ್ಲೇಷಣೆ ರಾಷ್ಟ್ರಮಟ್ಟದ ವಿಶ್ಲೇಷಕರಿಂದಲೂ ಶುರುವಾಗಿದೆ. ಆದ್ರೆ ಇದು ಎಷ್ಟು ನಿಜವಾಗುತ್ತದೆ ಎಂಬುದಕ್ಕೆ ಮೋದಿಯವರ ಮುಂದಿನ ದಿನಗಳ ಆಡಳಿತ ಸಾಕ್ಷಿ ಹೇಳಲಿದೆ..
ಹಾಗಿದ್ದರೂ ಇಲ್ಲಿ ರಾಹುಲ್ ಗಾಂಧಿಯವರು ಕಂಡಿದ್ದ ಕನಸೊಂದು ನನಸಾಗದೇ ಉಳಿದಂತಿದೆ.. ಲೋಕಸಭೆ ಚುನಾವಣಾ ಪ್ರಚಾರಣ ಕಣದಲ್ಲಿ ರಾಹುಲ್ ಒಂದು ಘೋಷಣೆ ಮೊಳಗಿಸಿದ್ದರು.. ಬೇಕಿದ್ದರೆ ಬರೆದು ಕೊಡ್ತೀನಿ ಅಂದಿದ್ದರು.. ಮೋದಿ ಪ್ರಧಾನಿಯಾಗುವುದು ಖತಂ ಕಹಾನಿ ಎಂದಿದ್ದರು..
ಆಧ್ರೆ ಮೋದಿಯವರನ್ನು ಪೂರ್ಣಬಹುಮತದ ಸರ್ಕಾರ ರಚನೆಯಿಂದ ತಡೆಯಲು ಯಶಸ್ವಿಯಾದರೂ ಈ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಾಗಿಲ್ಲ.. ಏನೇ ರಾಜಕೀಯ ಸರ್ಕಸ್ ನಡೆದರೂ ಮೋದಿಯವರು ಪ್ರಧಾನಮಂತ್ರಿ ಆಗಬಹುದು.. ಹಾಗಿದ್ದರೂ ಮೊದಿಯವರ ಮೂರನೇ ಅವಧಿಯ ಪ್ರಧಾನಮಂತ್ರಿ ಆಡಳಿತ ಹೇಗಿರುತ್ತೆ ಮತ್ತು ಅವರ ಮೇಲೆ ಮಿತ್ರರ ಒತ್ತಡ ಯಾವ ಸ್ಪರೂಪದಲ್ಲಿರುತ್ತದೆ ಎಂದು ನೋಡಬೇಕಿದೆ..