12 ಗಂಟೆಗಳ ಅವಧಿಯಲ್ಲೇ 3 ಸಲ ಭೂಕಂಪ – ಉತ್ತರಕಾಶಿ ಬಗ್ಗೆ ತಜ್ಞರು ಕೊಟ್ಟ ಎಚ್ಚರಿಕೆ ಏನು..?

12 ಗಂಟೆಗಳ ಅವಧಿಯಲ್ಲೇ 3 ಸಲ ಭೂಕಂಪ – ಉತ್ತರಕಾಶಿ ಬಗ್ಗೆ ತಜ್ಞರು ಕೊಟ್ಟ ಎಚ್ಚರಿಕೆ ಏನು..?

ಉತ್ತರಾಖಂಡದ ಉತ್ತರಕಾಶಿಯಲ್ಲಿ ಪದೇಪದೆ ಭೂಕಂಪ ಸಂಭವಿಸುತ್ತಿದ್ದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಭಾನುವಾರ 12 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಲಘು ಭೂಕಂಪವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ದಾಖಲೆ ಮಟ್ಟದಲ್ಲಿ ಕರಗಿತು ಮಂಜುಗಡ್ಡೆ – ಮುಳುಗಡೆಯಾಗುತ್ತಾ  ಕರಾವಳಿ ಪ್ರದೇಶಗಳು?

ಶನಿವಾರ ಮಧ್ಯರಾತ್ರಿ 12.45ರ ಸುಮಾರಿಗೆ ಮೊದಲಿಗೆ ಭೂಕಂಪ ಸಂಭವಿಸಿದ್ದು, 2.5 ತೀವ್ರತೆ ದಾಖಲಾಗಿದೆ. ಇದರ ಕೇಂದ್ರ ಬಿಂದು ಭಟ್ಟಾರಿ ತಾಲೂಕಿನ ಸಿರೂರ್ ಅರಣ್ಯದಲ್ಲಿ ಪತ್ತೆಯಾಗಿದೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಎರಡನೇ ಬಾರಿಗೆ ಭೂಕಂಪನ ಸಂಭವಿಸಿದ್ದು, ಇದರ ತೀವ್ರತೆ ಕಡಿಮೆ ಇದ್ದಿದ್ದರಿಂದ ಮಾಪನ ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಮಾಹಿತಿ ನೀಡಿದ್ದಾರೆ. ಹಾಗೇ ಭಾನುವಾರ ಬೆಳಗ್ಗೆ 10ಗಂಟೆ 10 ನಿಮಿಷಕ್ಕೆ ಮೂರನೇ ಬಾರಿಗೆ ಭೂಮಿ ಕಂಪಿಸಿದೆ. ಇದರ ತೀವ್ರತೆ 1.8ರಷ್ಟಿದ್ದು, ಉತ್ತರ ಕಾಶಿಯ ಈಶಾನ್ಯದಲ್ಲಿ ಇದರ ಕೇಂದ್ರ ಬಿಂದು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.

ಉತ್ತರಕಾಶಿ ಭಾರತದ ಭೂಕಂಪ ಮಾಪನ ನಕ್ಷೆಯಲ್ಲಿ ಗರಿಷ್ಠ ಅಪಾಯ ಸಾಧ್ಯತೆಯ ವಲಯದಲ್ಲಿ ಬರುತ್ತದೆ. ಹೀಗಾಗಿ ಟರ್ಕಿಯನ್ನ ಇತ್ತೀಚೆಗೆ ಧ್ವಂಸಗೊಳಿಸಿದಷ್ಟು ತೀವ್ರತೆಯ ಭೂಕಂಪವೊಂದು ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹಾಗೇ ಯಾವುದೇ ಕ್ಷಣದಲ್ಲಾದ್ರೂ ಭೂಕಂಪ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದು ಆತಂಕಕ್ಕೆ ಕಾರಣವಾಗಿದೆ.

suddiyaana