3 ಬಣಗಳಾಯ್ತಾ ಟೀಂ ಇಂಡಿಯಾ? – ರೋಹಿತ್ ಮಾತು ಕೇಳ್ತಿಲ್ಲ ಗಂಭೀರ್
SL, NZ ಸರಣಿ ಸೋಲಿನ ಸತ್ಯ ರಿವೀಲ್
ಗೆಲುವಿಗೆ ಸಾವಿರ ಅಪ್ಪಂದಿರು.. ಸೋಲು ಅನಾಥ ಅನ್ನೋ ಚೆಂದದ ಒಂದು ಮಾತಿದೆ. ಈ ಮಾತು ಈಗ ಟೀಂ ಇಂಡಿಯಾಗೆ ಕರೆಕ್ಟಾಗೇ ಸೂಟ್ ಆಗ್ತಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ಟೆಸ್ಟ್ ಸರಣಿ ಕಳ್ಕೊಂಡ ಭಾರತ ತಂಡದಲ್ಲಿ ಇದೀಗ ಮಹಾಬಿರುಕೊಂದು ಕಾಣಿಸಿಕೊಂಡಿದೆ. ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋ ಸುದ್ದಿ ಹೊರ ಬಿದ್ದಿದೆ. ಅದೆಲ್ಲಕ್ಕಿಂತ ಶಾಕಿಂಗ್ ವಿಚಾರ ಅಂದ್ರೆ ಟೀಂ ಇಂಡಿಯಾದಲ್ಲಿ ಮೂರು ಬಣಗಳಾಗಿದೆ ಅನ್ನೋದು. ಹಾಗಾದ್ರೆ ಒಂದು ಸೋಲು ತಂಡದಲ್ಲಿ ಒಡಕು ತಂತಾ? ಗಂಭೀರ್ ಮತ್ತು ರೋಹಿತ್ ನಡುವಿನ ಮುನಿಸಿಗೆ ಇದೇನಾ ಕಾರಣ? ಲಂಕಾ ಸರಣಿಯಲ್ಲೂ ನಡೆದಿತ್ತಾ ಮನಸ್ಥಾಪ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ರಿಟೇನ್ ಟ್ವಿಸ್ಟ್ ಕೊಟ್ಟ RCB – 9 ಹೆಸ್ರು.. ಕೊಹ್ಲಿ ಕ್ಯಾಪ್ಟನ್.. KL ಎಂಟ್ರಿ?
ವಾರಗಳ ಹಿಂದಷ್ಟೇ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾ ದೇಶವನ್ನ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ನ್ಯೂಜಿಲೆಂಡ್ ವಿರುದ್ಧ ಇಂಥಾದ್ದೊಂದು ಕಳಪೆ ಪ್ರದರ್ಶನ ನೀಡುತ್ತೆ ಅಂತಾ ಯಾರೊಬ್ರೂ ಊಹೆ ಮಾಡಿರಲಿಲ್ಲ. ಬೆಂಗಳೂರಿನಲ್ಲಿ ಮಳೆ ರಗಳೆ ನಡುವೆ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 50 ರನ್ಗಳ ಗಡಿಯನ್ನೂ ದಾಟದೇ ಆಲೌಟ್ ಆಗಿ ಪಂದ್ಯ ಕಳ್ಕೊಂಡಿದ್ರು. ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಮ್ಯಾಚ್ನಲ್ಲೂ ರನ್ ಗಳಿಸೋಕೆ ಒದ್ದಾಡಿ ಕಿವೀಸ್ ಪಡೆಗೆ ಶರಣಾಗಿದ್ರು. ಇದೀಗ ಮುಂಬೈನಲ್ಲಿ ಮೂರನೇ ಮತ್ತು ಕೊನೇ ಮ್ಯಾಚ್ ಇದೆ. ವಿಷ್ಯ ಏನಪ್ಪ ಅಂದ್ರೆ ಸರಣಿ ಕೈಚೆಲ್ಲಿದ್ರೂ ಕೂಡ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ರೇಸ್ನಲ್ಲಿ ಉಳಿಯೋಕೆ ಈ ಪಂದ್ಯವನ್ನ ಗೆಲ್ಲಲೇಬೇಕಿದೆ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಮತ್ತೊಂದಿಷ್ಟು ಬದಲಾವಣೆಗೋ ಚಾನ್ಸಸ್ ಕೂಡ ಇದೆ. ಇದೇ ಬದಲಾವಣೆಯೇ ಈಗ ತಂಡದಲ್ಲಿ ಬಿರುಕಿನ ಗೆರೆ ಮೂಡಿಸಿದೆ.
ಕೋಚ್ ಗಂಭೀರ್ ಮತ್ತು ರೋಹಿತ್ ಶರ್ಮಾ ನಡುವೆ ಮನಸ್ತಾಪ?
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತವರಿನಲ್ಲೇ ಬ್ಯಾಕ್ ಟು ಬ್ಯಾಕ್ ಸೋಲು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಸೋಲನ್ನ ಅಭಿಮಾನಿಗಳು ಅರಗಿಸಿಕೊಳ್ಳೋ ಮೊದಲೇ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಾಭಿಪ್ರಾಯದ ಹೊಗೆಯಾಡ್ತಿದೆ. ಐಸಿಸಿ ಟಿ20 ವಿಶ್ವಕಪ್ ಗೆದ್ದ ಮೇಲೆ ಕ್ರಿಕೆಟ್ ಲೋಕದಲ್ಲಿ ಉತ್ತುಂಗದಲ್ಲಿದ್ದ ಭಾರತೀಯ ಕ್ರಿಕೆಟ್ ತಂಡ ಮತ್ತು ಸ್ಟಾರ್ ಆಟಗಾರರು ಇದೀಗ ಇದ್ದಕ್ಕಿದ್ದಂತೆ ಫೇಲ್ಯೂರ್ ಆಗ್ತಿದ್ದಾರೆ. ವಿಶ್ವಕಪ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕ ಆಟಗಾರರು ಏಕದಿನ ಮತ್ತು ಟೆಸ್ಟ್ ತಂಡಗಳಲ್ಲಿ ಕಂಪ್ಲೀಟ್ ಹಳ್ಳ ಹಿಡಿದಿದ್ದಾರೆ. ಈ ಎರಡೂ ಸ್ವರೂಪಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನವು ನಿರಂತರವಾಗಿ ಕುಸಿಯಲಾರಂಭಿಸಿದೆ. ಇದೇ ಸೋಲಿನಿಂದಾಗಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಇಬ್ಬರ ನಡುವೆ ಮನಸ್ತಾಪ ಮೂಡಿದೆ. ತಂಡವನ್ನು ನಡೆಸುವ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ತಂಡದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಇಬ್ಬರಲ್ಲೂ ಪ್ರತಿಷ್ಠೆ!
ಹೇಳಿ ಕೇಳಿ ರೋಹಿತ್ ಶರ್ಮಾ ಸ್ಟಾರ್ ಆಟಗಾರ. ಹಾಗೇ ಗಂಭೀರ್ ಕೂಡ ಮಾಜಿ ಆಟಗಾರ ಹಾಲಿ ಕೋಚ್. ಬಟ್ ಇಬ್ಬರ ನಡುವೆ ತಾಳಮೇಳ ಸೆಟ್ಟಾಗ್ತಿಲ್ಲ ಅಂತಿವೆ ಇತ್ತೀಚಿನ ಪ್ರದರ್ಶನಗಳು. ನವೆಂಬರ್ 1 ರಿಂದ ಮುಂಬೈನಲ್ಲಿ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕೆಲ ಬದಲಾವಣೆಗಳ ಬಗ್ಗೆ ಸಭೆ ನಡೆದಿದೆ. ಸಭೆಯಲ್ಲಿ ರೋಹಿತ್ ಮತ್ತು ಗಂಭೀರ್ ನಡುವೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಹಾಗೇ ಆಟಗಾರರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ. ಅಷ್ಟೇ ಅಲ್ಲ, ಒಂದು ಹಂತದಲ್ಲಿ ಇಬ್ಬರ ನಡುವೆ ವಾಗ್ವಾದಗಳೂ ನಡೆದಿವೆ ಎಂದು ವರದಿಯಾಗಿದೆ.
ರೋಹಿತ್ ಅಭಿಪ್ರಾಯಗಳಿಗೆ ಬೆಲೆ ಕೊಡ್ತಿಲ್ವಾ ಗಂಭೀರ್?
ರೋಹಿತ್ ಶರ್ಮಾ ಭಾರತ ಕಂಡಂತ ಲೆಜೆಂಡರಿ ಪ್ಲೇಯರ್. ಮಾಜಿ ಕೋಚ್ ರಾಹುಲ್ ದ್ರಾವಿಡ್ ಜೊತೆ ಒಂದೇ ಒಂದು ಸಣ್ಣ ಬಿರುಕೂ ಮೂಡದಂತೆ ಕೆಲಸ ಮಾಡಿದ್ರು. ಬಟ್ ಈಗ ಕೋಚ್ ಗಂಭಿರ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳೇ ರೋಹಿತ್ ಸಿಟ್ಟಗೆ ಕಾರಣ ಆಗಿವೆ. ನಾಯಕ ರೋಹಿತ್ ಶರ್ಮಾ ಒಪ್ಪದ ಹಲವು ನಿರ್ಧಾರಗಳನ್ನು ಗೌತಮ್ ಗಂಭೀರ್ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಇಬ್ಬರ ನಡುವೆ ಸಾಕಷ್ಟು ಚರ್ಚೆಗಳು ನಡೆದಿವೆ. ಅಲ್ದೇ ಗಂಭೀರ್ ಕೋಚ್ ಆದ ನಂತರ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ತಿರೋ ಗಂಭೀರ್ ತಮ್ಮ ನಿರ್ಧಾರಗಳಿಂದ ಹಿಂದೆ ಸರಿಯಲು ಸಿದ್ಧರಿಲ್ಲ ಎನ್ನಲಾಗುತ್ತಿದೆ.
ಟಿ-20ಯಲ್ಲಿ ಧಮಾಕ.. ಏಕದಿನ, ಟೆಸ್ಟ್ ನಲ್ಲಿ ಫೇಲ್ಯೂರ್!
ಯೆಸ್. ನೀವೆಲ್ಲಾ ಗಮನಿಸಿರಬಹುದು. ಟಿ-20 ವಿಶ್ವಕಪ್ ಆದ ಬಳಿಕ ನಡೆದ ಟಿ-20 ಸರಣಿಗಳಲ್ಲಿ ಟೀಮ್ ಇಂಡಿಯಾ ಒಂದೂ ಸರಣಿ ಕೈಚೆಲ್ಲಿಕೊಂಡಿಲ್ಲ. ಬಟ್ ಏಕದಿನ ಮತ್ತು ಟೆಸ್ಟ್್ನಲ್ಲಿ ಮಾತ್ರ ಸೋಲಿನ ಆಘಾತದಲ್ಲಿದೆ. ವಿಪರ್ಯಾಸ ಅಂದ್ರೆ ಟೆಸ್ಟ್ ಮತ್ತು ಏಕದಿನ ಮಾದರಿ ಕ್ರಿಕೆಟ್ನಲ್ಲಿ ಭಾರತ ತಂಡದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಡೇಜಾ, ಕೆಎಲ್ ರಾಹುಲ್, ಆರ್ ಅಶ್ವಿನ್ ಸೇರಿದಂತೆ ಹಿರಿಯರೇ ಆಡ್ತಿದ್ದಾರೆ. ಈ ಎರಡೂ ಸ್ವರೂಪಗಳಲ್ಲಿ, ರೋಹಿತ್ ನಾಯಕರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡ ಸೋಲನ್ನು ಎದುರಿಸಬೇಕಾಗಿ ಬಂದಿದ್ದು, ಇದೀಗ ನ್ಯೂಜಿಲೆಂಡ್ ಟೆಸ್ಟ್‌ನಲ್ಲಿ ನೆಲ ಕಚ್ಚಿದೆ. ಹಿರಿಯ ಆಟಗಾರರು ನಿರಂತರವಾಗಿ ಫೇಲ್ಯೂರ್ ಆಗ್ತಿರೋದು ಕೋಚ್ ಗಂಭೀರ್ ಅವರ ಸಿಟ್ಟಿಗೂ ಕಾರಣವಾಗಗಿದೆ. ಹೀಗಾಘಿ ಸೀನಿಯರ್ಸ್ ಉತ್ತಮ ಪ್ರದರ್ಶನ ನೀಡಲಿ, ಇಲ್ಲದಿದ್ದರೆ ತಂಡದಿಂದ ಕೈಬಿಡಬೇಕು ಎಂದು ಗಂಭೀರ್ ಬಯಸಿದ್ದಾರೆ. ಇದಕ್ಕೆ ರೋಹಿತ್ ಸುತಾರಾಂ ಒಪ್ಪಿಗೆ ನೀಡ್ತಿಲ್ಲ.
ಮನೆಯೊಂದು ಮೂರು ಬಾಗಿಲಾದ ಟೀಂ ಇಂಡಿಯಾ?
ಸೀನಿಯರ್ಸ್ನ ತಂಡದಿಂದ ಕೈ ಬಿಡೋ ಗಂಭೀರ್ ಚಿಂತನೆಯಿಂದಾಗಿ ಹಲವು ಹಿರಿಯ ಆಟಗಾರರು ರೋಹಿತ್ ಪರ ಒಲವು ತೋರಿದ್ದಾರೆ. ಈ ಮೂಲಕ ತಂಡ ಈಗ 3 ಗುಂಪುಗಳಾಗಿ ಡಿವೈಡ್ ಆಗಿದೆ. ಇದರಲ್ಲಿ ರೋಹಿತ್ ಶರ್ಮಾ ಸೇರಿದಂತೆ ಕೆಲವು ಹಿರಿಯ ಆಟಗಾರರಿದ್ದರೆ, ಕೋಚ್ ಗಂಭೀರ್ ಜೊತೆ ಕೆಲ ಆಟಗಾರರು ನಿಂತಿದ್ದಾರೆ. ಇವುಗಳ ಹೊರತಾಗಿ, ಯಾವುದೇ ಗುಂಪಿನ ಭಾಗವಾಗಿರದ ಆಟಗಾರರಲ್ಲಿ ಸ್ವಲ್ಪ ಭಾಗವಿದೆ. ಇದೇ ಕಾರಣಕ್ಕೆ ಹಿರಿಯರ ತಂಡದ ಸರಣಿಯಲ್ಲಿ ಗೆಲುವು ಸಾಧ್ಯವಾಗ್ತಿಲ್ಲ ಅನ್ನೋದು ವಿಶ್ಲೇಷಕರ ಮಾತು.
ಒಟ್ನಲ್ಲಿ ತಂಡ ಅಂತಾ ಬಂದಾಗ ಪ್ರತಿಷ್ಠೆಗಳನ್ನ ಪಕ್ಕಕ್ಕಿಟ್ಟು ಗೆಲುವಿಗಾಗಿ ಆಟ ಆಡ್ಬೇಕು. ಅದನ್ನ ಬಿಟ್ಟು ನಂದೇ ನಡೀಬೇಕು ಅಂತಾ ಕೂತ್ರೆ ಹೀಗೇ ಆಗೋದು.