29 ಅಡಿ ಎತ್ತರದ ಮೊಬೈಲ್ ಟವರನ್ನೇ ಹೊತ್ತೊಯ್ದ ಖತರ್ನಾಕ್ ಕಳ್ಳರು!
ನಗ-ನಾಣ್ಯ ದೋಚುವ, ಎಟಿಎಂಗಳಿಗೆ ಕಳ್ಳರು ಕನ್ನ ಹಾಕುವುದು ಸಾಮಾನ್ಯ. ಆದರೆ ಬಿಹಾರದ ಸಬ್ಜಿಬಾಘ್‌ನಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್ ವೊಂದು ಸುಮಾರು 29 ಅಡಿ ಎತ್ತರದ ಮೊಬೈಲ್ ಟವರನ್ನೇ ಲಪಟಾಯಿಸಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಿಟಿಎಲ್ ಕಂಪನಿ ಪ್ರೈವೇಟ್ ಲಿಮಿಟೆಡ್ ಕಂಪನಿ ಎಂದು ಹೇಳಿಕೊಂಡು ಕಳ್ಳರ ಗ್ಯಾಂಗ್ 29 ಅಡಿ ಎತ್ತರದ ಮೊಬೈಲ್ ಟವರ್ ಕಳಚಿ ಅದನ್ನು ಟ್ರಕ್‌ನಲ್ಲಿ ಹೊತ್ತೊಯ್ದಿದ್ದಾರೆ. ಜಿಟಿಎಲ್ ಕಂಪನಿ 5ಜಿ ಸೇವೆ ಜಾರಿಗೂ ಮುನ್ನ ಸ್ಥಳ ಪರಿಶೀಲನೆಗೆ ಬಂದಿದೆ. ಈ ವೇಳೆ ಕಳ್ಳರ ಕರಾಮತ್ತು ಬಯಲಾಗಿದೆ.
ಇದನ್ನೂ ಓದಿ: ಮೂವರು ಮಕ್ಕಳಿಗೆ ಜನ್ಮ ನೀಡಿದರೆ ಅಧಿಕ ವೇತನ, 3 ಲಕ್ಷ ಸಹಾಯಧನ! – ಸರ್ಕಾರದಿಂದ ಬಂಪರ್ ಆಫರ್
ಮೊಬೈಲ್ ಸೇವಾ ಪೂರೈಕೆದಾರ ಕಂಪನಿ ಏರ್‌ಸೆಲ್ 2006ರಲ್ಲಿ ಶಾಹೀನ್ ಎಂಬುವರ ನಾಲ್ಕು ಮಹಡಿಯ ಕಟ್ಟಡದ ಮೇಲೆ ಟವರ್ ಸ್ಥಾಪಿಸಿತ್ತು. ಬಳಿಕ ಅದನ್ನು ಜಿಟಿಎಲ್ ಕಂಪನಿ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಿತ್ತು. ಅಂದಿನಿಂದ ಈ ಕಂಪನಿಯೇ ನಿರ್ವಹಿಸುತ್ತಿತ್ತು. 2022ರ ಆಗಸ್ಟ್ 31ರಂದು ನಡೆಸಿದ ತಪಾಸಣೆ ವೇಳೆ ಟವರ್ ಇತ್ತು. ಆದರೆ, ಇತ್ತೀಚಿನ ತಪಾಸಣೆ ವೇಳೆ ನಾಪತ್ತೆಯಾಗಿದೆ ಅಂತ ಕಂಪನಿ ತಿಳಿಸಿದೆ.
ಕಂಪನಿಯ ವಲಯ ವ್ಯವಸ್ಥಾಪಕ ಮೊಹಮ್ಮದ್ ಶಾನವಾಜ್ ಅನ್ವರ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಟವರ್ ಅಳವಡಿಸಲಾಗಿದ್ದ ಕಟ್ಟಡದ ಮಾಲೀಕ ಶಾಹೀನ್ ನನ್ನು ಈಗಾಗಲೇ ಪೊಲೀಸರು ವಿಚಾರಣೆ ನಡೆಸಿದ್ದಾರೆ.
”ಕೆಲವು ತಿಂಗಳ ಹಿಂದೆ ಜಿಟಿಎಲ್ ಕಂಪನಿಯ ಸಿಬ್ಬಂದಿ ಎಂದು ಹೇಳಿಕೊಂಡು ಕೆಲವರು ಮನೆಗೆ ಬಂದು ಪರಿಶೀಲನೆ ನಡೆಸಿದ್ದರು. ಟವರ್‌ನಲ್ಲಿ ತಾಂತ್ರಿಕ ದೋಷವಿರುವ ಕಾರಣ ಕಂಪನಿಯ ಆದೇಶದಂತೆ ಬೇರೆ ಟವರ್ ಸ್ಥಾಪಿಸಬೇಕಿದೆ. ಹಾಗಾಗಿ ಇದನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿ ಟ್ರಕ್‌ನಲ್ಲಿ ಸಾಗಿಸಿದ್ದರು” ಎಂದು ಕಟ್ಟಡ ಮಾಲೀಕ ಶಾಹೀನ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಜಿಟಿಎಲ್ ಕಂಪನಿ ಕೆಲವು ತಿಂಗಳಿಂದ ಟವರ್ ಸ್ಥಾಪಿಸಲಾಗಿದ್ದ ಮನೆಯ ಮಾಲೀಕನಿಗೆ ಬಾಡಿಗೆ ನೀಡಿರಲಿಲ್ಲ. ಹಾಗಾಗಿ ಇದರಲ್ಲಿ ಮಾಲೀಕನ ಪಾತ್ರವಿದೆ ಎಂಬ ಗುಮಾನಿ ಪೊಲೀಸರಿಗಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.