ಮಳೆಗೆ ತತ್ತರಿಸಿದ ದೇವರನಾಡು – ಕೇರಳದಲ್ಲಿ ರಣಮಳೆಗೆ ಬಲಿಯಾದವರ ಸಂಖ್ಯೆ 26ಕ್ಕೇರಿಕೆ

ಮಳೆಗೆ ತತ್ತರಿಸಿದ ದೇವರನಾಡು – ಕೇರಳದಲ್ಲಿ ರಣಮಳೆಗೆ ಬಲಿಯಾದವರ ಸಂಖ್ಯೆ 26ಕ್ಕೇರಿಕೆ

ಕೇರಳದಲ್ಲಿ ರಣಮಳೆ ಮುಂದುವರೆದಿದೆ. ದೇವರನಾಡಿನಲ್ಲಿ ವರುಣನ ರೌದ್ರಾವತಾರಕ್ಕೆ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 25ಕ್ಕೇರಿದೆ. ಪ್ರವಾಹ ಪರಿಸ್ಥಿತಿ, ಭೂಕುಸಿತ ಮುಂದುವರೆದಿದ್ದು, ನಾಪತ್ತೆಯಾದವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನೂ  ಓದಿ: ಸಕಲೇಶಪುರದಲ್ಲಿ ರೈಲ್ವೆ ಹಳಿ ಮೇಲೆ ಬಿದ್ದ ಮಣ್ಣು ತೆರವು – ಬೆಂಗಳೂರು , ಕರಾವಳಿ ರೈಲು ಸಂಚಾರ ಆರಂಭ

ರಣಭೀಕರ ಮಳೆಗೆ ದೇವರನಾಡು ತತ್ತರಿಸಿದೆ. ಕೇರಳದಾದ್ಯಂತ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಏಳು ಜನರು ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದಿದ್ದಾರೆ. ರಾಜ್ಯಾದ್ಯಂತ ಮಳೆಗೆ ಬಲಿಯಾದವರ ವಿವರವನ್ನು ಸ್ವತಃ ಮುಖ್ಯಮಂತ್ರಿಗಳೇ ನೀಡಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಪೂಂಜಾರ್ ವಿಧಾನಸಭಾ ಕ್ಷೇತ್ರದ ಎರಟ್ಟುಪೆಟ್ಟ ಪ್ರದೇಶದಲ್ಲಿ ಇಬ್ಬರು ಮತ್ತು ಪುತ್ತುಪ್ಪಳ್ಳಿಯಲ್ಲಿ ಆಕಸ್ಮಿಕವಾಗಿ ನೀರಿನ ಟ್ಯಾಂಕ್‌ಗೆ ಬಿದ್ದು ಒಂದು ಮಗು ಸೇರಿದಂತೆ ಒಟ್ಟು ಮೂರು ಸಾವುಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ. ಉಳಿದಂತೆ ಮಲಪ್ಪುರಂನಲ್ಲಿ ನಾಲ್ಕು, ಎರ್ನಾಕುಲಂ ಮತ್ತು ಕೊಲ್ಲಂನಲ್ಲಿ ತಲಾ ಇಬ್ಬರು ಹಾಗೂ ಇಡುಕ್ಕಿ, ಮುವಾಟ್ಟುಪುಳ, ಕಣ್ಣೂರು ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ನಾಪತ್ತೆಯಾಗಿರುವ ಏಳು ಜನರ ಪೈಕಿ ಕೊಲ್ಲಂ ಮತ್ತು ಕಣ್ಣೂರಿನಲ್ಲಿ ತಲಾ ಇಬ್ಬರು ಕಾಣೆಯಾಗಿದ್ದರೆ, ಮಲಪ್ಪುರಂ, ಇಡುಕ್ಕಿ ಮತ್ತು ಮುವಾಟ್ಟುಪುಳದಲ್ಲಿ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ. ವಿಳಿಂಜಂ ಮತ್ತು ಮುಥಲಪೋಳಿಯಲ್ಲೂ ತಲಾ ಒಂದು ಸಾವು ಹಾಗೂ ತಲಾ ಒಬ್ಬರು ನಾಪತ್ತೆಯಾದ ವರದಿಗಳು ಬಂದಿವೆ.

ಬೃಹತ್ ರಕ್ಷಣಾ ಕಾರ್ಯಾಚರಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮತ್ತು ರಕ್ಷಿಸಲು ಸೇನಾ ಪಡೆಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಸುಲೂರಿನಿಂದ ಬಂದ ಎರಡು ಹೆಲಿಕಾಪ್ಟರ್‌ಗಳು ಈಗಾಗಲೇ ತಿರುವನಂತಪುರಂ ತಲುಪಿದ್ದು, ಪತ್ತನಂತಿಟ್ಟಕ್ಕೆ ಒಂದು ಮತ್ತು ಕೊಟ್ಟಾಯಂಗೆ ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ. ಸದ್ಯ ರಾಜ್ಯದಾದ್ಯಂತ 316 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಪ್ರವಾಹ ಮತ್ತು ಭೂಕುಸಿತದಿಂದ ಸ್ಥಳಾಂತರಗೊಂಡ 11,018 ಜನರಿಗೆ ಆಶ್ರಯ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ರಾಜ್ಯದ ಒಟ್ಟು 14 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ನೀಡಿದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಯನಾಡ್, ಮಲಪ್ಪುರಂ, ಎರ್ನಾಕುಲಂ, ಇಡುಕ್ಕಿ, ಕೊಟ್ಟಾಯಂ, ಆಲಪ್ಪುಳ ಮತ್ತು ಪತ್ತನಂತಿಟ್ಟ ಸೇರಿದಂತೆ 10 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದರೆ, ಪಾಲಕ್ಕಾಡ್, ತ್ರಿಶೂರ್, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್’ ಘೋಷಿಸಲಾಗಿದೆ. ಕರಾವಳಿ ಹಾಗೂ ಒಳನಾಡಿನಲ್ಲಿ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಕೆಲವು ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

200 ಮಿಲಿಮೀಟರ್‌ಗಿಂತ ಹೆಚ್ಚಿನ ಮಳೆಯನ್ನು ಅತ್ಯಂತ ಭಾರೀ ಮಳೆ ಎನ್ನಲಾಗುತ್ತದೆ, ಆದರೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಪ್ರಮಾಣ 300 ಮಿಲಿಮೀಟರ್ ದಾಟಿದ್ದು, ವಡಸ್ಸೇರಿಕ್ಕರದಲ್ಲಿ ದಾಖಲೆಯ 350 ಮಿಲಿಮೀಟರ್ ಮಳೆಯಾಗಿದೆ.

Sulekha

Leave a Reply

Your email address will not be published. Required fields are marked *