255 ಕ್ಷೇತ್ರಗಳಲ್ಲಷ್ಟೇ ಸ್ಪರ್ಧಿಸಲು ಕಾಂಗ್ರೆಸ್ ಚಿಂತನೆ – ಮೈತ್ರಿಗಾಗಿ ಭವಿಷ್ಯ ಕಳೆದುಕೊಳ್ಳುತ್ತಾ ‘ಕೈ’ ಪಡೆ..?
ಒಂದು ಕಾಲಕ್ಕೆ ಪಕ್ಷ ಅಂದ್ರೆ ಜನ ಕಾಂಗ್ರೆಸ್ ಅಂತಿದ್ರು. ಆದ್ರೀಗ ಅದೇ ಕಾಂಗ್ರೆಸ್ ದೇಶದಲ್ಲಿ ಹಿಡಿತ ಕಳೆದುಕೊಳ್ತಿದೆ. ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪ್ರಾಬಲ್ಯ ಮತ್ತಷ್ಟು ಕುಗ್ಗಿದೆ. ಮೋದಿ ಅಲೆ ಹೆಚ್ಚಾಗ್ತಿದೆ. ಇದೇ ಕಾರಣಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಸೋಲಿಸೋಕೆ ಕಾಂಗ್ರೆಸ್ ವಿಪಕ್ಷಗಳ ಮೊರೆ ಹೋಗಿದೆ. ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಒಮ್ಮತದ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸೋಕೆ ತಯಾರಿ ಆರಂಭಿಸಿದೆ. ಆದ್ರೆ ಒಟ್ಟು ಕ್ಷೇತ್ರಗಳ ಪೈಕಿ ಕೇವಲ 255 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳನ್ನ ಹಾಕಲಾಗುತ್ತೆ ಎಂಬ ಮಾಹಿತಿ ಹೊರ ಬಿದ್ದಿದೆ. ಅಂದ್ರೆ 2019 ರ ಚುನಾವಣೆಗಿಂತ ಕಡಿಮೆ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮುಂದಾಗಿದೆ. ಉಳಿದ ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ ಬಿಟ್ಟುಕೊಡಲಿದೆ.
ಇದನ್ನೂ ಓದಿ : ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ರಿಸಲ್ಟ್ – ಹೀಗೆ ಆದರೆ ಟೆಸ್ಟ್ ಪಂದ್ಯದ ಭವಿಷ್ಯವೇನು?
ಇಂಡಿಯಾ ಒಕ್ಕೂಟದಲ್ಲಿರುವ ಉಳಿದ ಪಕ್ಷಗಳ ಜತೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಲಾಗುತ್ತಿದೆ. ಯಾವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಬೇಕು ಯಾವ ಕ್ಷೇತ್ರವನ್ನ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷವು 255 ಸ್ಥಾನಗಳ ಮೇಲೆ ಕೇಂದ್ರೀಕರಿಸಲಿದೆ ಎಂದಿದ್ದಾರೆ. ಭಾರತ ಮೈತ್ರಿಕೂಟದ ಪಕ್ಷಗಳಿಗೆ ಅವಕಾಶ ಕಲ್ಪಿಸಲು ಈ ಬಾರಿ ಕಡಿಮೆ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಪಕ್ಷವು ಸಿದ್ಧವಾಗಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು 421 ಸ್ಥಾನಗಳಲ್ಲಿ ಸ್ಪರ್ಧಿಸಿ 52 ಸ್ಥಾನಗಳನ್ನು ಗೆದ್ದಿತ್ತು. ಇದು ಬೆರಳೆಣಿಕೆಯ ರಾಜ್ಯಗಳಲ್ಲಿ ಮೈತ್ರಿಯ ಭಾಗವಾಗಿತ್ತು. ಹೀಗಾಗಿ ಈ ಸಲ ಮತ್ತಷ್ಟು ಸ್ಥಾನಗಳನ್ನ ವಿಪಕ್ಷಗಳಿಗೆ ಬಿಟ್ಟುಕೊಡೋಕೆ ಮುಂದಾಗಿದೆ