ಜಗತ್ತಿನ ಪಾಲಿಗೆ ಅತ್ಯಂತ ನಿರ್ಣಾಯಕವಾಗಲಿದೆ 2024 – ಅಮೆರಿಕ ಸೇರಿ 40 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಚುನಾವಣೆ
ಜಗತ್ತಿನ ಪಾಲಿಗೆ 2024 ಅತ್ಯಂತ ಮಹತ್ವದ ವರ್ಷವಾಗಲಿದೆ. ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ, ವಿಶ್ವದ ದೊಡ್ಡಣ್ಣ ಅಮೆರಿಕ, ಬಲಿಷ್ಟ ರಾಷ್ಟ್ರ ರಷ್ಯಾ, ಯುದ್ಧಪೀಡಿತ ಉಕ್ರೇನ್, ಆರ್ಥಿಕ ದಿವಾಳಿಯಾಗಿರುವ ಪಾಕಿಸ್ತಾನ, ಇಂಡೋನೇಷ್ಯಾ, ಇರಾನ್, ಸೌತ್ ಆಫ್ರಿಕಾ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ಚುನಾವಣೆ ನಡೆಯಲಿದೆ. 300 ಕೋಟಿಗೂ ಹೆಚ್ಚು ಮತದಾರರು ತಮ್ಮ ರಾಷ್ಟ್ರದ ಮುಖ್ಯಸ್ಥರನ್ನು ಆಯ್ಕೆ ಮಾಡ್ತಾರೆ. ಜನವರಿಯಲ್ಲಿ ತೈವಾನ್‌ನಲ್ಲಿ ನಡೆಯುವ ಚುನಾವಣೆಯಿಂದ ಹಿಡಿದು ವರ್ಷದ ಕೊನೆಗೆ ಅಂದರೆ 2024ರ ನವೆಂಬರ್ ನಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯವರೆಗೆ ಪ್ರಮುಖ ಚುನಾವಣೆಗಳು ನಡೆಯಲಿವೆ. ಬ್ಲೂಮ್‌ಬರ್ಗ್ ಎಕನಾಮಿಕ್ಸ್ ಪ್ರಕಾರ, ಈ ರಾಷ್ಟ್ರಗಳಲ್ಲಿನ ಮತದಾರರು ಪ್ರಪಂಚದ ಜನಸಂಖ್ಯೆಯ ಸುಮಾರು ಶೇಕಡಾ 41ರಷ್ಟು ಪ್ರತಿನಿಧಿಸುತ್ತಾರೆ. 44.2 ಟ್ರಿಲಿಯನ್ ಡಾಲರ್ ಅಥವಾ ಗರಿಷ್ಠ ಬೆಳವಣಿಗೆ ದರದ ಶೇಕಡಾ 42ರಷ್ಟು ಕೊಡುಗೆ ನೀಡಲಿದ್ದಾರೆ.
ಇನ್ನು ವಿಶ್ವದಲ್ಲಿಯೇ ಭಿನ್ನವಾದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಹೊಂದಿರುವ ಅಮೆರಿಕದಲ್ಲೂ 2024ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ವಿಶ್ವದ ದೊಡ್ಡಣ್ಣ ಅಂತಾನೇ ಕರೆಸಿಕೊಳ್ಳುವ ಅಮೆರಿಕದಲ್ಲೂ ಕೂಡ 2024ರ ಅಂತ್ಯದ ವೇಳೆಗೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. 2024ರ ನವೆಂಬರ್ 5 ರಂದು, ಅಮೆರಿಕನ್ನರು ತಮ್ಮ ರಾಷ್ಟ್ರದ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಇಲ್ಲಿ ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ ಮಧ್ಯೆ ನೇರ ಹಣಾಹಣಿಯಾಗಿದೆ. 86 ವರ್ಷದ ಜೋ ಬೈಡನ್ ಮತ್ತು ಅವರ ಪ್ರತಿಸ್ಪರ್ಧಿ ಮಾಜಿ ಅಧ್ಯಕ್ಷ 77 ವರ್ಷದ ಡೊನಾಲ್ಡ್ ಟ್ರಂಪ್ ಇಬ್ಬರೂ ಕೂಡ ಎರಡನೇ ಬಾರಿಗೆ ಅಧ್ಯಕ್ಷರಾಗುವ ತವಕದಲ್ಲಿದ್ದಾರೆ. ಇನ್ನು ಅಮೆರಿಕದಲ್ಲಿ ಅಧ್ಯಕ್ಷರ ಅಧಿಕಾರಾವಧಿ 4 ವರ್ಷಗಳು ಮಾತ್ರ. ಅದ್ರಲ್ಲೂ ಒಬ್ಬ ವ್ಯಕ್ತಿ ಕೇವಲ 2 ಬಾರಿ ಅಂದ್ರೆ 8 ವರ್ಷಗಳ ಕಾಲ ಮಾತ್ರವೇ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಬಹುದು. ಅಮೆರಿಕದ ಸಂವಿಧಾನಕ್ಕೆ 1951ರಲ್ಲಿ 22ನೇ ತಿದ್ದುಪಡಿ ತರುವ ಮೂಲಕ ಅಧ್ಯಕ್ಷರ ಆಯ್ಕೆಯನ್ನು ಕೇವಲ 2 ಬಾರಿಗೆ ಸೀಮಿತಗೊಳಿಸಲಾಗಿದೆ.
ಇದನ್ನೂ ಓದಿ : ರಾಮಮಂದಿರಕ್ಕಾಗಿ ರಥಯಾತ್ರೆ ಮರೆತುಬಿಟ್ರಾ? – ಬಿಜೆಪಿ, ಮಂದಿರದ ಟ್ರಸ್ಟ್ ಯೂ ಟರ್ನ್ ಹೊಡೆದಿದ್ಯಾಕೆ?
2 ಶತಮಾನಗಳಿಗೂ ಹೆಚ್ಚು ಸುದೀರ್ಘ ಇತಿಹಾಸ ಹೊಂದಿರುವ ಅಮೆರಿಕ ಪ್ರಜಾಪ್ರಭುತ್ವದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರು ನೇರವಾಗಿ ಭಾಗವಹಿಸುವುದಿಲ್ಲ. ಪರೋಕ್ಷ ಮತದಾನದ ಮೂಲಕ ಅಧ್ಯಕ್ಷರನ್ನು ಅಮೆರಿಕದಲ್ಲಿ ಆಯ್ಕೆ ಮಾಡಲಾಗುತ್ತದೆ. ಅಮೆರಿಕದಲ್ಲಿ ದ್ವಿಪಕ್ಷ ಪದ್ಧತಿ ಜಾರಿಯಲ್ಲಿದೆ. ಅಧ್ಯಕ್ಷರನ್ನು ಎಲೆಕ್ಟೊರೋಲ್ ಕಾಲೇಜುಗಳ ಮೂಲಕ ಆಯ್ಕೆಮಾಡಲಾಗುತ್ತದೆ. ಎಲೆಕ್ಟೋರಾಲ್ ಕಾಲೇಜುಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಸಾರ್ವಜನಿಕರು ಮತ ಹಾಕುತ್ತಾರೆ. ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರ ಸಿಗುತ್ತದೆ. ಇದು ಅಮೆರಿಕದ ಕಥೆಯಾದ್ರೆ ಜಗತ್ತಿನ ಮತ್ತೊಂದು ಬಲಿಷ್ಠ ರಾಷ್ಟ್ರ ರಷ್ಯಾದಲ್ಲೂ 2024ಕ್ಕೆ ಚುನಾವಣೆ ನಡೆಯಲಿದೆ.
ಯುದ್ಧೋತ್ಸಾಹಿ ವ್ಲಾಡಿಮಿರ್ ಪುಟಿನ್ ಕೂಡ ಮತ್ತೊಮ್ಮೆ ರಷ್ಯಾ ಅಧಿಪತಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಎರಡು ವರ್ಷಗಳಿಂದ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ಪುಟಿನ್ 2024ರ ಮಾರ್ಚ್ 17ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸೋದಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಸುಧೀರ್ಗ 24 ವರ್ಷಗಳಿಂದಲೂ ರಷ್ಯಾವನ್ನು ಆಳುತ್ತಿರುವ 71 ವರ್ಷದ ಪುಟಿನ್ ಇನ್ನೂ ಆರು ವರ್ಷಗಳವರೆಗೆ ವಿಸ್ತರಿಸಲು ಭರ್ಜರಿ ಸಿದ್ಧರೆ ನಡೆಸಿದ್ದಾರೆ. ಈಗಾಗಲೇ ಐದನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹಾಗೇನಾದ್ರೂ ಮತ್ತೆ ಪುಟಿನ್ ಸೆಲೆಕ್ಟ್ ಆದ್ರೆ 2030 ರವರೆಗೆ ಅಧಿಕಾರದಲ್ಲಿ ಇರುತ್ತಾರೆ. ಅಲ್ಲದೆ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಿಕೊಳ್ಳಲು 2020 ರಲ್ಲಿ 2036 ರವರೆಗೆ ಸೈದ್ಧಾಂತಿಕವಾಗಿ ಅಧಿಕಾರದಲ್ಲಿ ಉಳಿಯಲು ಸಂವಿಧಾನವನ್ನು ತಿದ್ದುಪಡಿ ಮಾಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ 16 ಅಭ್ಯರ್ಥಿಗಳು ಸ್ಪರ್ಧಿಸೋದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದ್ರೆ ಪುಟಿನ್ ಅವ್ರೇ ಐದನೇ ಬಾರಿಗೆ ಅಧಿಕಾರಕ್ಕೇರಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು 2022 ಆರಂಭದಿಂದಲೂ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ರಷ್ಯಾ ಸೇನೆ ಉಕ್ರೇನ್ನಲ್ಲಿ ಭಾಗಶಃ ವಶಪಡಿಸಿಕೊಂಡಿರುವ ನಾಲ್ಕು ಪ್ರಾಂತ್ಯಗಳಲ್ಲೂ ಮತದಾನ ನಡೆಸೋದಾಗಿ ಘೋಷಣೆ ಮಾಡಿದೆ. ಮತ್ತೊಂದೆಡೆ ರಷ್ಯಾದ ದಾಳಿಯಿಂದ ತತ್ತರಿಸಿರುವ ಉಕ್ರೇನ್ನಲ್ಲೂ 2024ರ ಮಾರ್ಚ್ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಬೇಕಿದೆ. 45 ವರ್ಷದ ವೊಲೊಡಿಮಿರ್ ಝೆಲೆನ್ಸ್ಕಿ 2019ರಿಂದ ಉಕ್ರೇನ್ ಅಧ್ಯಕ್ಷರಾಗಿದ್ದಾರೆ. ಉಕ್ರೇನ್ ಅಧ್ಯಕ್ಷರ ಅಧಿಕಾರಾವಧಿ 5 ವರ್ಷಗಳು ಇರಲಿದೆ. ಸದ್ಯ 2024ರ ಮಾರ್ಚ್ ತಿಂಗಳಿಗೆ ಝೆಲೆನ್ಸ್ ಕಿ ಅಧಿಕಾರಾವಧಿ ಕೊನೆಯಾಗಲಿದೆ. ಆದರೆ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ ಕಿ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ರಷ್ಯಾ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಸಮರ ಕಾನೂನು ಜಾರಿಯಲ್ಲಿದೆ. ಸಮರ ಕಾನೂನು ಜಾರಿಯಲ್ಲಿದ್ದಾಗ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸಲಾಗುವುದಿಲ್ಲ ಎಂದು ಉಕ್ರೇನಿಯನ್ ಕಾನೂನು ಹೇಳುತ್ತದೆ. ಹೀಗಾಗಿ ಉಕ್ರೇನ್ ಅಧ್ಯಕ್ಷೀಯ ಚುನಾವಣೆ ನಡೆಯುತ್ತೋ ಇಲ್ಲವೋ ಅನ್ನೋ ಕುತೂಹಲವೂ ಇದೆ.
ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೂ 2024 ಆರಂಭದಲ್ಲೇ ಸಾರ್ವತ್ರಿಕ ಚುನಾವಣೆ ನಡೆಯಲಿವೆ. ಜನವರಿ 7ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಇನ್ನು ಪಾಕಿಸ್ತಾನದಲ್ಲೂ ಕೂಡ ಸರ್ಕಾರದ ಅವಧಿ ಮುಗಿದಿದ್ದು, ಇದೀಗ ಹಂಗಾಮಿ ಸರ್ಕಾರ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಅಲ್ಲಿನ ಸರ್ಕಾರ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. 16ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಚುನಾಯಿಸಲು 2024 ರ ಫೆಬ್ರವರಿ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಇನ್ನು 2024ರ ಜೂನ್‌ನಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಗಳು ನಡೆಯಲಿದೆ. 400 ದಶಲಕ್ಷಕ್ಕೂ ಹೆಚ್ಚು ಮತದಾರರು 27 ಸದಸ್ಯ ರಾಷ್ಟ್ರಗಳ 720 ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಹಾಗೇ ಜೂನ್‌ನಲ್ಲಿ ಮೆಕ್ಸಿಕೋದಲ್ಲೂ ಚುನಾವಣೆ ನಡೆಯಲಿದೆ. ಹೀಗೆ 40ಕ್ಕೂ ಹೆಚ್ಚು ರಾಷ್ಟ್ರಗಳು ಮುಂದಿನ ವರ್ಷ ತನ್ನ ರಾಷ್ಟ್ರಗಳ ಮುಖ್ಯಸ್ಥರನ್ನ ಆಯ್ಕೆ ಮಾಡಿಕೊಳ್ಳಲಿವೆ. ಅಷ್ಟೇ ಅಲ್ಲದೆ 2024ರಲ್ಲಿ ನಡೆಯುವ ಬಲಿಷ್ಠ ರಾಷ್ಟ್ರಗಳ ಚುನಾವಣೆಗಳು ಭವಿಷ್ಯವನ್ನ ನಿರ್ಧರಿಸಲಿವೆ ಎಂದೇ ಅಂದಾಜಿಸಲಾಗುತ್ತಿದೆ. ಯಾಕಂದ್ರೆ ಜಾಗತಿಕ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮಗಳು ಬೀರಿವೆ. ಕಳೆದ 2 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧ ಹಾಗೂ ಇಸ್ರೇಮ್ ಹಮಾಸ್ ಕದನ ಜಗತ್ತಿನ ಮೇಲೆ ಭಾರೀ ಪರಿಣಾಮ ಬೀರಿವೆ. ನಿರಂತರ ಹಣದುಬ್ಬರ ಮತ್ತು ಹೆಚ್ಚಿದ ಸಾಲದ ವೆಚ್ಚಗಳು, ಸಾಂಕ್ರಾಮಿಕ ರೋಗದ ನಂತರದ ಬದುಕನ್ನು ಸಾಮಾನ್ಯ ಸ್ಥಿತಿಗೆ ತರಲು ಅಡ್ಡಿಯಾಗುತ್ತಿವೆ. 2024 ರ ಚುನಾವಣಾ ವರ್ಷವು ಜಗತ್ತಿನಲ್ಲಿ ಬಹುಮುಖಿ ಬಿಕ್ಕಟ್ಟುಗಳನ್ನ ಬಗೆಹರಿಸಲು ನಿರ್ಣಾಯಕವಾಗಿದೆ. ಹೀಗಾಗಿ ಯಾರನ್ನ ಆಯ್ಕೆ ಮಾಡಬೇಕು ಅನ್ನೋ ನಿರ್ಧಾರ ಆಯಾ ರಾಷ್ಟ್ರಗಳ ಮತದಾರರ ಕೈಯಲ್ಲೇ ಇದೆ.