ಗೃಹಲಕ್ಷ್ಮೀ ಯೋಜನೆಗೆ ಮುಹೂರ್ತ ಫಿಕ್ಸ್? – ಸರ್ವರ್ ಸಮಸ್ಯೆಗೆ ಸರ್ಕಾರದಿಂದ ಹೊಸ ಪ್ಲಾನ್!
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆ ಯಾವಾಗ ಜಾರಿ ಆಗುತ್ತೆ ಅಂತಾ ಜನ ಕಾಯುತ್ತಾ ಇದ್ದಾರೆ. ಮನೆ ಒಡತಿಗೆ 2 ಸಾವಿರ ರೂ. ನೀಡುವ ‘ಗೃಹಲಕ್ಷ್ಮಿ’ ಯೋಜನೆ ಅಂತು ಇಂತು ಮುಹೂರ್ತ ಕೂಡಿಬಂದಿದೆ. ಇದೇ ಜುಲೈ 14 ರಿಂದ ಗೃಹ ಲಕ್ಷ್ಮೀ ಯೋಜನೆ ಜಾರಿಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತದೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಒಂದು ಕೋಟಿಗೂ ಅಧಿಕ ಗ್ರಾಹಕರಿಂದ ನೋಂದಣಿ!
ಜುಲೈ 14 ರಿಂದ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ರಾಜ್ಯ ಸರ್ಕಾರದ ಪ್ಲ್ಯಾನ್ ಮಾಡಿಕೊಂಡಿದ್ದು, ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಗೃಹಲಕ್ಷ್ಮಿ ಯೋಜನೆ ಲಾಂಚ್ ಕಾರ್ಯಕ್ರಮ ನಡೆಸಲು ಚಿಂತನೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಮ್ಮುಖದಲ್ಲಿ 10 ರಿಂದ 15 ಮನೆ ಯಜಮಾನಿಯನ್ನು ಗುರುತಿಸಿ ಸಾಂಕೇತಿಕವಾಗಿ ಹಣ ವರ್ಗಾವಣೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ.
ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಅನುಸಾರವಾಗಿ ಫಲಾನುಭವಿಗಳಿಗೆ ನಿರಂತರ ಹಣ ವರ್ಗಾವಣೆ ಮಾಡುವ ಬಗ್ಗೆಯೂ ಯೋಜನೆ ಹಾಕಿದ್ದು, ಇದಕ್ಕಾಗಿ ವಿಶೇಷ ಅಪ್ ಹಾಗೂ ಇನ್ನಿತರ ಡಿಜಿಟಲ್ ಪೋರ್ಟಲ್ ಗಳನ್ನು ಸಿದ್ದಪಡಿಸಲಾಗಿದೆ. ಗೃಹ ಲಕ್ಷ್ಮೀ ಯೋಜನೆಗೆ ಸರ್ಕಾರದಿಂದ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗುತ್ತೆ ಎಂದು ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಅದರಂತೆ ಸರ್ವರ್ ಸಮಸ್ಯೆಗೆ ಕಡಿವಾಣ ಹಾಕಲು ಇದೀಗ ಸರ್ಕಾರವೇ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿದ್ದು, ಅಧಿಕೃತವಾಗಿ ಬಿಡುಗಡೆ ಮಾಡುವುದೊಂದೇ ಬಾಕಿ ಇದೆ. ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್ನಲ್ಲಿ ಆ್ಯಪ್ ಲಭ್ಯವಾಗಲಿದೆ. ಇನ್ನೂ ಸೇವಾಸಿಂಧು ವೆಬ್ಸೈಟ್ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ.