200 ಗೆಲುವು.. ವಿಶ್ವಕ್ಕೆ IND ಬಾಸ್ ಸೋತರು ಹೃದಯ ಗೆದ್ದ JAPAN

200 ಗೆಲುವು.. ವಿಶ್ವಕ್ಕೆ IND ಬಾಸ್   ಸೋತರು ಹೃದಯ ಗೆದ್ದ JAPAN

 

ಭಾರತದ ಬೌಲಿಂಗ್ ವಿಭಾಗಕ್ಕೂ ICC ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಸುದ್ದಿ ಸಿಕ್ಕಿದೆ. ಶ್ರೀ ಚರಣಿ ಮತ್ತು ದೀಪ್ತಿ ಶರ್ಮಾ ಮಹಿಳಾ T20I ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಮೊದಲ ಎರಡು ಸ್ಥಾನಗಳನ್ನು ಮುಂದುವರಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿನ ಭಾರತದ ಉತ್ತಮ ಪ್ರದರ್ಶನದ ಬಳಿಕ ಭಾರತೀಯ ಬೌಲರ್‌ಗಳ ರ‍್ಯಾಂಕಿಂಗ್ ಮತ್ತಷ್ಟು ಗಮನ ಸೆಳೆದಿದೆ.

2026 ರ ಏಷ್ಯನ್ ಕ್ರೀಡಾಕೂಟದ ಕ್ರಿಕೆಟ್ ಫೈನಲ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾವನ್ನು 147 ರನ್‌ಗಳಿಂದ ಸೋಲಿಸಿತು. ಟೀಂ ಇಂಡಿಯಾದ ಈ ವಿಜಯದ ಬಳಿಕ ತಂಡದಲ್ಲಿ ಆಡಿದ್ದ ತಮಿಳುನಾಡಿನ ಮಧುರೈ ನಿವಾಸಿ ಜಿ ಕಮಲಿನಿ ಅವರಿಗೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ 75 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಈ ಅಮೋಘ ಗೆಲುವಿಗೆ ಭಾರತ ತಂಡವನ್ನು ಅಭಿನಂದಿಸಿದ ವಿಜಯ್, ಕಮಲಿನಿಯ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ

ಭಾರತದ ವಿರುದ್ಧದ ಐದು ಪಂದ್ಯಗಳ T20I ಸರಣಿಗೆ ನ್ಯೂಜಿಲೆಂಡ್ ಬಲಿಷ್ಠ ವೇಗದ ಬೌಲಿಂಗ್ ಪಡೆಯನ್ನು ಪ್ರಕಟಿಸಿದೆ. 16 ಸದಸ್ಯರ ತಂಡದಲ್ಲಿ ಬರೋಬ್ಬರಿ ಏಳು ವೇಗದ ಬೌಲರ್‌ಗಳಿದ್ದಾರೆ. ಆಡಂ ಮಿಲ್ನೆ ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಭಾರತ-ನ್ಯೂಜಿಲೆಂಡ್ ಸರಣಿ ಅಕ್ಟೋಬರ್ 22ರಿಂದ ಆರಂಭವಾಗಲಿದೆ.

ಇದನ್ನೂ ಓದಿ: NZ ಟೂರ್ ನಲ್ಲಿ BCCI ಬ್ಲಂಡರ್! – ODIಗೆ ಗಿಲ್ ಬಿಟ್ಟು ಶ್ರೇಯಸ್ ಕ್ಯಾಪ್ಟನ್

ಭಾರತೀಯ ವೇಗಿ ಯಶ್ ದಯಾಳ್ ಮತ್ತೆ ಉತ್ತರ ಪ್ರದೇಶದ ರಣಜಿ ಟ್ರೋಫಿ ಕ್ಯಾಂಪ್‌ಗೆ ಮರಳಿದ್ದಾರೆ. ಕಳೆದ 16 ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದ ದಯಾಳ್ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು UPCA ತಿಳಿಸಿದೆ. ಸೆಪ್ಟೆಂಬರ್ 25ರಿಂದ ಲಖನೌನಲ್ಲಿ ನಡೆಯಲಿರುವ ಕ್ಯಾಂಪ್‌ನಲ್ಲಿ ಅವರು ಭಾಗವಹಿಸಲಿದ್ದಾರೆ.

ಭಾರತದ ವೇಗಿ ಮುಕೇಶ್ ಕುಮಾರ್ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನ ಅಂತಿಮ ಎರಡು ಪಂದ್ಯಗಳಿಗೆ ನಾಟಿಂಗ್‌ಹ್ಯಾಮ್‌ಶೈರ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಮುಕೇಶ್‌ಗೆ ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡುವ ಮತ್ತೊಂದು ಅವಕಾಶ ಸಿಕ್ಕಿದೆ. ಕೌಂಟಿ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನದ ಮೇಲೆ ಅಭಿಮಾನಿಗಳ ಗಮನವಿದೆ.

IPL 2026 ಬಳಿಕ ವೃತ್ತಿಪರ ಕ್ರಿಕೆಟ್‌ನಿಂದ ದೂರವಿದ್ದ ಹಾರ್ದಿಕ್ ಪಾಂಡ್ಯಾ ಮತ್ತೆ ಕ್ರಿಕೆಟ್‌ಗೆ ಮರಳುವ ಹಾದಿಯಲ್ಲಿದ್ದಾರೆ. ಅವರನ್ನು ಭಾರತ A ತಂಡಕ್ಕೆ ಕರೆಸಿಕೊಳ್ಳಲಾಗಿದೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಹಾರ್ದಿಕ್ ಅವರ ಕಮ್‌ಬ್ಯಾಕ್ ಭಾರತ ತಂಡಕ್ಕೆ ಮಹತ್ವದ ಬೆಳವಣಿಗೆಯಾಗಬಹುದು ಎಂಬ ಚರ್ಚೆ  ನಡೆಯುತ್ತಿದೆ.

ಲೀಗ್‌ನ 20 ವರ್ಷಗಳ ಯಶಸ್ವಿ ಪಯಣವನ್ನು ಸ್ಮರಿಸಲು ಬಿಸಿಸಿಐ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬೃಹತ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸುತ್ತಿದೆ. ಕೇವಲ ಬಾಲಿವುಡ್ ತಾರೆಗಳು ಮಾತ್ರವಲ್ಲದೆ, ಅಂತರರಾಷ್ಟ್ರೀಯ ಪಾಪ್ ಗಾಯಕರು ಹಾಗೂ ಹಳೆಯ ಐಪಿಎಲ್ ಆವೃತ್ತಿಗಳ ದಿಗ್ಗಜ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದು ಕ್ರೀಡಾ ಇತಿಹಾಸದಲ್ಲೇ ಅತ್ಯಂತ ವೆಚ್ಚದಾಯಕ ಮತ್ತು ಭವ್ಯ ಆರಂಭಕ್ಕೆ ಸಾಕ್ಷಿಯಾಗಲಿದೆ.

5 ಓವರ್‌ಗಳ ಟಿ20 ಪಂದ್ಯದಲ್ಲಿ ಭಾರತ ಗೆದ್ರೂ ಜಪಾನ್‌ನ ಹಾಡಿಹೊಗಳಲಾಗ್ತಿದೆ. 5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡ ಜಪಾನ್ 30 ರನ್ ಗಳಿಸಿತು. ಗೆಲುವಿಗೆ ಬೇಕಾಗಿದ್ದ 33 ರನ್‌ಗಳಿಂದ ಕೇವಲ 3 ರನ್‌ ದೂರದಲ್ಲಿ ಜಪಾನ್ ನಿಂತಿತು. ಅಂತಿಮವಾಗಿ ಭಾರತ ರೋಚಕವಾಗಿ 2 ರನ್‌ಗಳ ಗೆಲುವು ದಾಖಲಿಸಿತು. ಆದ್ರೆ ಇಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಭಾರತ ಗೆದ್ದಿರಬಹುದು, ಆದರೆ ಈ ಪಂದ್ಯದಲ್ಲಿ ಜಪಾನ್ ತೋರಿಸಿದ ಹೋರಾಟ, ಆತ್ಮವಿಶ್ವಾಸ ಮತ್ತು ಕೊನೆಯ ಕ್ಷಣದವರೆಗಿನ ಹೋರಾಟವೇ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ. ದೊಡ್ಡ ಟೀಂ ಮುಂದೆ ಕ್ರಿಕೆಟ್‌ನಲ್ಲಿ ಏನೂ ಅಲ್ಲದ ಒಂದು ತಂಡ ದೊಡ್ಡ ಹೋರಾಟ ನೀಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಜಪಾನ್ ಮತ್ತು ಭಾರತ ಪಂದ್ಯದಲ್ಲಿ ವೈಡ್ ವಿವಾದ ಜೋರಾಗಿದೆ. ಜಪಾನ್ ಗೆಲುವಿಗೆ ಕೊನೆಯ 4 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಈ ವೇಳೆ ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಬೌಲಿಂಗ್ ಮಾಡುತ್ತಿದ್ದರು. ಜಪಾನ್‌ನ ಎಡಗೈ ಬ್ಯಾಟರ್ ಅಲೆಕ್ಸಾಂಡರ್ ಶಿರಾಯ್-ಪ್ಯಾಟ್‌ಮೋರ್ ರಿವರ್ಸ್ ಸ್ವೀಪ್  ಮಾಡಲು ಯತ್ನಿಸಿದರು. ಚೆಂಡು ಅವರ ಲೆಗ್ ಸೈಡ್‌ಗಿಂತ ಹೊರಗೆ ಹೋದಾಗ ತಕ್ಷಣವೇ ಆನ್-ಫೀಲ್ಡ್ ಅಂಪೈರ್ ‘ವೈಡ್’ ಎಂದು ಘೋಷಿಸಿದರು. ಟೀಂ ಇಂಡಿಯಾ ಆಟಗಾರರು ಅದು ವೈಡ್ ಅಲ್ಲ ಎಂದಾಗ , ಮತ್ತೆ ಅಂಪೈರ್‌ಗಳು ಚರ್ಚಿಸಿ, ಆ ವೈಡ್ ತೀರ್ಪನ್ನು ಹಿಂಪಡೆದು, ಅದನ್ನು ‘ಡಾಟ್ ಬಾಲ್’ ಎಂದು ಘೋಷಿಸಿದರು. ಆದ್ರೆ ಅಂಪೈರ್ ಈ ನಿರ್ಧಾರ ತಪ್ಪು ಅಂತ ಚರ್ಚೆ ನಡೆಯುತ್ತಿದೆ.

ಜಪಾನ್ ವಿರುದ್ಧ ನಡೆದ ಐತಿಹಾಸಿಕ ಟಿ20 ಪಂದ್ಯದಲ್ಲಿ 2 ರನ್ ಗಳ ರೋಚಕ ಗೆಲುವು ಸಾಧಿಸಿದ ಭಾರತ ತಂಡ ಚುಟುಕು ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನು ಗೆದ್ದ ವಿಶ್ವದ ಪ್ರಪ್ರಥಮ ತಂಡ ಎಂಬ ವಿಶ್ವದಾಖಲೆ ನಿರ್ಮಿಸಿದೆ.

 

Kishor KV

Leave a Reply

Your email address will not be published. Required fields are marked *