ನರ್ಮದಾ ನದಿ ದಡದಲ್ಲಿ ಗಿಳಿಗಳ ಮಾರಣಹೋಮ – ವಿಷ ಆಹಾರದಿಂದ 200 ಗಿಳಿ ಸಾ**ವು

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ವಿಷ ಆಹಾರ ಸೇವಿಸಿ 200ಕ್ಕೂ ಹೆಚ್ಚು ಗಿಳಿಗಳು ಮೃತಪಟ್ಟಿವೆ. ಬದ್ವಾ ಪ್ರದೇಶದ ನದಿ ದಂಡೆಯಲ್ಲಿರುವ ಸೇತುವೆಯ ಬಳಿ ಕಳೆದ ನಾಲ್ಕು ದಿನಗಳಲ್ಲಿ ಇಷ್ಟು ಪ್ರಮಾಣದ ಗಿಳಿಗಳು ಸಾವನ್ನಪ್ಪಿದ್ದು, ಮೊದಲು ಹಕ್ಕಿ ಜ್ವರ ಎನ್ನಲಾಗಿತ್ತು. ನಂತ್ರ ಮೃತಗಿಳಿಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ , ವಿಷ ಪ್ರಾಶನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾಣೆಯಾದ ಅಪ್ಪನನ್ನ ಹುಡುಕಿ ಕೊಟ್ಟ ಇನ್ಸ್ಟಾ – ಒಂದೇ ಒಂದು ಪೋಸ್ಟ್ನಿಂದ ಒಂದಾದ ಕುಟುಂಬ
ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವು ಗಿಳಿಗಳು ಜೀವಂತ ಇದ್ದವು. ಆದರೆ, ಆಹಾರದಲ್ಲಿನ ವಿಷ ಪ್ರಮಾಣ ತೀವ್ರವಾಗಿದ್ದ ಕಾರಣ ಅವು ಬದುಕಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ತಿಳಿಸಿದ್ದಾರೆ. ಗಿಳಿಗಳ ಈ ಸಾವು ಈ ಪ್ರದೇಶದಲ್ಲಿ ಹಕ್ಕಿ ಜ್ವರದ ಆತಂಕವನ್ನು ಉಂಟು ಮಾಡಿತು. ಪಶು ವೈದ್ಯರು ಇವುಗಳ ಪರೀಕ್ಷೆ ನಡೆಸಿದಾಗ ಇದರಲ್ಲಿ ಯಾವುದೇ ಜ್ವರದ ಸುಳಿವು ಕಂಡು ಬಂದಿಲ್ಲ. ಈ ಘಟನೆ ಬೆನ್ನಲ್ಲೇ ಇದೀಗ ಈ ಸೇತುವೆ ಸುತ್ತಮುತ್ತ ಪಕ್ಷಿಗಳಿಗೆ ಆಹಾರ ನೀಡುವಿಕೆಗೆ ನಿರ್ಬಂಧ ವಿಧಿಸಲಾಗಿದ್ದು, ಇದರ ಕಟ್ಟುನಿಟ್ಟಿನ ಜಾರಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾವನ್ನಪ್ಪಿದ ಪಕ್ಷಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಬಲ್ಪುರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಪ್ರಕಾರ, ವಿಷ ಉಣಿಸುವಿಕೆ ಅಥವಾ ಸೂಕ್ತವಲ್ಲದ ಆಹಾರಗಳು ಈ ಸಾವಿಗೆ ಕಾರಣವಾಗಿದೆ. ಪಶು ಪಾಲನ ಮತ್ತು ಅರಣ್ಯ ಇಲಾಖೆ ತಂಡ ಹಾಗೇ ವನ್ಯಜೀವಿ ವಿಭಾಗವೂ ಕಳೆದ ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದು, ನಿವಾಸಿಗಳಿಗೂ ಕೂಡ ಎಚ್ಚರಿಕೆ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯೆ ಡಾ. ಮನಿಷಾ ಚೌಹಾಣ್ ಮಾತನಾಡಿ, ಗಿಳಿಗಳಲ್ಲಿ ಆಹಾರ ವಿಷದ ಲಕ್ಷಣಗಳು ಕಂಡುಬಂದಿದ್ದು, ಹಕ್ಕಿ ಜ್ವರದ ಯಾವುದೇ ಲಕ್ಷಣಗಳಿಲ್ಲ. ಜನರು ಸಾಮಾನ್ಯವಾಗಿ ತಿಳಿಯದೆಯೇ ಪಕ್ಷಿಗಳಿಗೆ ಆಹಾರವನ್ನು ನೀಡುತ್ತಾರೆ. ಅದು ಅವುಗಳ ಜೀರ್ಣಾಂಗ ವ್ಯವಸ್ಥೆಗೆ ಮಾರಕ ಆಗುತ್ತದೆ. ಸತ್ತ ಪಕ್ಷಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಉಂಡೆಗಳು ಕಂಡುಬಂದಿವೆ ಎಂದು ಪಶುವೈದ್ಯಕೀಯ ವಿಸ್ತರಣಾ ಅಧಿಕಾರಿ ಡಾ. ಸುರೇಶ್ ಬಾಘೇಲ್ ತಿಳಿಸಿದ್ದಾರೆ.

ನೋಡಿರಿ

