ತಿರುಪತಿಗೂ KMFಗೂ ಇದ್ದ ಸಂಬಂಧ ಕಡಿತ – ಇನ್ಮುಂದೆ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ!

ತಿರುಪತಿಗೂ KMFಗೂ ಇದ್ದ ಸಂಬಂಧ ಕಡಿತ – ಇನ್ಮುಂದೆ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ!

ತಿರುಪತಿ ಲಡ್ಡು ಪ್ರಸಾದ ಅಂದ್ರೆ ಪ್ರತಿಯೊಬ್ಬ ಭಕ್ತರಿಗೂ ಅಚ್ಚುಮೆಚ್ಚು. ಕಷ್ಟಪಟ್ಟು ತಿರುಮಲ ಬೆಟ್ಟ ಹತ್ತೋ ಭಕ್ತರಂತೂ ಲಡ್ಡು ಪ್ರಸಾದವನ್ನು ಸ್ವೀಕರಿಸಿ ಪುನೀತರಾಗುತ್ತಾರೆ. ತಿಮ್ಮಪ್ಪನ ಲಡ್ಡು ಪ್ರಸಾದದ ಸ್ವಾದಿಷ್ಟ ರುಚಿಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಆದರೆ  ಇನ್ನುಮುಂದೆ ತಿರುಪತಿ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ. ಯಾಕಂದ್ರೆ ಬಹಳ ವರ್ಷದ ಬಳಿಕ ತಿರುಪತಿ ತಿಮ್ಮಪ್ಪ ಹಾಗೂ ನಂದಿನಿ ತುಪ್ಪದ ಸಂಬಂಧ ಕಡಿತವಾಗಿದೆ.

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಹಲವು ವರ್ಷಗಳಿಂದ ನಂದಿನಿ ತುಪ್ಪವನ್ನು ಬಳಸಲಾಗುತ್ತಿತ್ತು. ತಿರುಮಲಕ್ಕೆ ಕೆಎಂಎಫ್​ನಿಂದ ತಾಜಾ, ತಾಜಾ ತುಪ್ಪ ಸರಬರಾಜು ಆಗುತ್ತಿತ್ತು. ಆದರೆ ಇನ್ನು ಮುಂದೆ ತಿರುಪತಿ ಲಡ್ಡು ತಯಾರಿಕೆಗಾಗಿ ಸರಬರಾಜು ಆಗುತ್ತಿದ್ದ ತುಪ್ಪವನ್ನು ಇನ್ನುಮುಂದೆ ಕಳುಹಿಸಿಕೊಡಲಾಗುವುದಿಲ್ಲ ಎಂದು ಕೆಎಂಎಫ್​ ಅಧ್ಯಕ್ಷ ಭೀಮಾ ನಾಯಕ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಟನ್ ಗಟ್ಟಲೆ ಚಿನ್ನ, 960 ಸ್ವತ್ತು.. ₹85,705 ಕೋಟಿ ಆಸ್ತಿ ಮೌಲ್ಯ – ವಿಶ್ವಕ್ಕೇ ಕುಬೇರ ತಿರುಪತಿ ತಿಮ್ಮಪ್ಪ

ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ನೀಡಬೇಕು, ಇಷ್ಟು ದೇವಸ್ಥಾನಕ್ಕೆಂದು ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಸಲ ಕೆಎಂಎಫ್ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ಟೆಂಡರ್​ ಅನ್ನು ಕೈಬಿಟ್ಟಿದೆ. ಕಡಿಮೆ ಬೆಲೆಗೆ ತುಪ್ಪ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಹಾಲಿನ ಕೊರತೆ ತಲೆದೂರಿದೆ, ಹೀಗಾಗಿ ಅದರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದು ನಮಗೂ ಕೂಡ ಅನಿವಾರ್ಯ, ಹೀಗಾಗಿ ನಂದಿನಿ ತುಪ್ಪದ ಬೆಲೆಯನ್ನು ಕೂಡ ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ನಂದಿನಿ ತುಪ್ಪ ಮಾರಾಟ ಮಾಡದಿರಲು ಕೆಎಂಎಫ್​ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್ 1 ರಿಂದ ಹಾಲು ಬೆಲೆ ಹೆಚ್ಚಾಗುವುದರಿಂದ ನಾವು ತುಪ್ಪಕ್ಕೆ ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದೇವೆ. ಗುಣಮಟ್ಟದಿಂದಾಗಿ ಕೆಎಂಎಫ್​ ತುಪ್ಪ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ. ಯಾವುದೇ ಕಂಪನಿ ಕಡಿಮೆ ಬೆಲೆಗೆ ಬಿಡ್ ಮಾಡಿದರೆ ಅವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ, ಲಡ್ಡುಗಳಿಗೆ ರುಚಿ ನೀಡುವಲ್ಲಿ ನಂದಿನಿ ತುಪ್ಪದ ಪಾತ್ರ ಮಹತ್ವದ್ದಾಗಿದೆ ಎಂದು ಭೀಮಾ ನಾಯಕ್ ಹೇಳಿದ್ದಾರೆ.

suddiyaana