ಲೋಕಸಭೆ ಕಲಾಪದಲ್ಲಿ ಮುಂದುವರಿದ ಭದ್ರತಾ ಉಲ್ಲಂಘನೆ ಪ್ರಕರಣದ ಗದ್ದಲ – ಮತ್ತೆ ವಿರೋಧ ಪಕ್ಷದ ಇಬ್ಬರು ಸದಸ್ಯರು ಅಮಾನತು!

ಸಂಸತ್‌ನಲ್ಲಿ ಸಂಭವಿಸಿದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವರ ಉತ್ತರಕ್ಕೆ ವಿರೋಧ ಪಕ್ಷಗಳ ಸಂಸದರು ಒತ್ತಾಯಿಸುತ್ತಿದ್ದಾರೆ. ಈ ವಿಚಾರವಾಗಿಯೇ ಬುಧವಾರ ಕೂಡ ಸದನದಲ್ಲಿ ಗದ್ದಲ, ಕೋಲಾಹಲ ಮುಂದುವರಿದಿದೆ. ಕಲಾಪ ನಡೆಯುತ್ತಿರುವ ವೇಳೆ ಭಾರಿ ಗದ್ದಲ ಉಂಟುಮಾಡಿದ ವಿರೋಧ ಪಕ್ಷಗಳ ಇಬ್ಬರು ಸದಸ್ಯರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಮಾನತು ಮಾಡಿದ್ದಾರೆ.
ಹೌದು, ಡಿ13 ರಂದು ಲೋಕಸಭೆ ಕಲಾಪದ ವೇಳೆ ಭದ್ರತಾ ವೈಫಲ್ಯ ಸಂಭವಿಸಿದೆ. ಇಬ್ಬರು ಒಳನುಸುಳುಕೋರರು ಲೋಕಸಭೆಯ ಸಭಾಂಗಣಕ್ಕೆ ಪ್ರವೇಶಿಸಿ, ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಬಿಡುಗಡೆ ಮಾಡಿದ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಮಾತನಾಡಬೇಕೆಂದು ವಿಪಕ್ಷ ಸಂಸದರು ಒತ್ತಾಯಿಸುತ್ತಿದ್ದಾರೆ. ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪದ ಬಗ್ಗೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಕೂಡ ಸದನಲ್ಲಿ ಕಲಾಪಕ್ಕೆ ಅಡ್ಡಿ ಪಡಿಸಿ, ಸದನದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಮತ್ತೆ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಮುಂದುವರಿದ ಭದ್ರತಾ ಉಲ್ಲಂಘನೆ ಪ್ರಕರಣದ ಕೋಲಾಹಲ – ಮತ್ತೆ 49 ಸದಸ್ಯರು ಅಮಾನತು!
ಬುಧವಾರ ಕಲಾಪಕ್ಕೆ ಅಡ್ಡಿಪಡಿಸಿ, ಸದನದಲ್ಲಿ ದುರ್ನಡತೆ ತೋರಿದ ಆರೋಪದ ಮೇರೆಗೆ ಕೇರಳ ಕಾಂಗ್ರೆಸ್ ಸಂಸದ ಥಾಮಸ್ ಚಾಜಿಕಡನ್ (ಮಣಿ) ಮತ್ತು ಸಿಪಿಐಎಂ ಸಂಸದ ಎ ಎಂ ಆರಿಫ್ ಅವರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆ ಅಮಾನತು ಮಾಡಿದೆ. ಈ ಮೂಲಕ ಅಮಾನತುಗೊಂಡ ಸಂಸದರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಇದು ಸಂಸತ್ ಕಲಾಪದ ಇತಿಹಾಸದಲ್ಲೇ ಅತ್ಯಧಿಕ ಎಂದು ಹೇಳಲಾಗಿದೆ.
ಕಳೆದ ವಾರದಿಂದ ವಿರೋಧ ಪಕ್ಷದ ನಾಯಕರ ಅಮಾನತು ಕ್ರಮ ಆರಂಭವಾಗಿದೆ. ಕಲಾಪದ ವೇಳೆ ಉಂಟಾದ ಭದ್ರತಾ ಲೋಪದ ಕುರಿತು ಪ್ರತಿಪಕ್ಷ ಸಂಸದರು ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ಅಶಿಸ್ತಿನ ವರ್ತನೆಯ ಆಧಾರದ ಮೇಲೆ 13 ಲೋಕಸಭಾ ಸಂಸದರು ಮತ್ತು ಒಬ್ಬ ರಾಜ್ಯಸಭಾ ಸಂಸದರನ್ನು ಶನಿವಾರ ಅಮಾನತುಗೊಳಿಸಲಾಗಿತ್ತು. ಬಳಿಕ ಸೋಮವಾರ ಕೂಡ ಕಲಾಪದ ವೇಳೆ ಗದ್ದಲ ಮುಂದುವರಿದಿದ್ದು, ಒಂದೇ ದಿನದಲ್ಲಿ 79 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ. ಮಂಗಳವಾರ ಕೂಡ 49 ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಇದೀಗ ಬುಧವಾರ ಇಬ್ಬರು ವಿರೋಧ ಪಕ್ಷದ ಸದಸ್ಯರನ್ನು ಅಮಾನತು ಮಾಡಲಾಗಿದೆ. ಇದೀಗ ಈ ಅಧಿವೇಶನದಲ್ಲಿ ಅಮಾನತುಗೊಂಡ ಒಟ್ಟು ಸಂಸದರ ಸಂಖ್ಯೆ 143ಕ್ಕೇರಿದೆ.