ರೈತರ ಮಕ್ಕಳನ್ನ ಮದುವೆಯಾದ್ರೆ ₹2 ಲಕ್ಷ ಅನುದಾನ – ಯಾರಿಗೆ ಅನ್ವಯವಾಗುತ್ತೆ, ಹೇಗೆ ಗೊತ್ತಾ..!?
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನ ಗೆಲ್ಲಲು ಮೂರೂ ಪಕ್ಷಗಳು ನಾನಾ ಆಮಿಷಗಳನ್ನ ಒಡ್ಡುತ್ತಿವೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಜೆಡಿಎಸ್ ಕೂಡ ಹಲವು ಯೋಜನೆಗಳನ್ನ ಘೋಷಣೆ ಮಾಡಿದೆ. ಅದ್ರಲ್ಲೂ ಈಗ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರೈತರ ಮಕ್ಕಳನ್ನ ಮದುವೆಯಾಗುವವರಿಗೆ 2 ಲಕ್ಷ ರೂಪಾಯಿ ಅನುದಾನ ಕೊಡೋದಾಗಿ ಘೋಷಣೆ ಮಾಡಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್ಡಿಕೆ, ರೈತರ ಮಕ್ಕಳು ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ ಅನ್ನೋ ಮಾತಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ರೂಪಾಯಿ ಅನುದಾನ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಘೋಷಣೆ ಮಾಡಿದ್ದಾರೆ. ಮುಳಬಾಗಿಲು ತಾಲೂಕಿನ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಶಿನಿಗೇನಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ (JDS Convention) ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿರುವ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಸಿದ್ದು, ಡಿಕೆಶಿಯನ್ನ ಕಟ್ಟಿ ಹಾಕಲು ಸೋಮಣ್ಣ, ಅಶೋಕ್ ಅಖಾಡಕ್ಕೆ? – ಬಿಜೆಪಿ ಮಾಸ್ಟರ್ ಪ್ಲ್ಯಾನ್ ಏನು?
ಇದೇ ವೇಳೆ ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕೆಸಿ ವ್ಯಾಲಿ ಯೋಜನೆ ಹೆಸರಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಜೇಬು ತುಂಬಿಸಿಕೊಂಡಿದ್ದಾರೆ. ಆ ಹಣದಿಂದಲೇ ಅವರು ಚುನಾವಣೆಗೆ ಹೋಗುತ್ತಿದ್ದಾರೆ ಎಂದರು. ಯರಗೋಳ್ ನೀರಾವರಿ ಯೋಜನೆಗೆ ವಿಷಯುಕ್ತ ಕೆಸಿ ವ್ಯಾಲಿ ನೀರಾವರಿ ಯೋಜನೆ ನೀರನ್ನು ಸೇರಿಸಲು ಹೊರಟಿದ್ದಾರೆ. ನಮ್ಮ ಸರ್ಕಾರ ಬಂದರೆ ಶುದ್ಧೀಕರಿಸಿ ಕುಡಿಯುವ ನೀರು ಕೊಡುತ್ತೇವೆ. ನಾನು ಶಪಥ ಮಾಡಿದ್ದೇನೆ ಮುಂದೆ ನಮ್ಮ ಸರ್ಕಾರ ಬಂದರೆ ಮೂರನೇ ಹಂತದ ಶುದ್ಧೀಕರಣ ಮಾಡಿ ಶುದ್ದ ಕುಡಿಯುವ ನೀರು ಕೊಡುತ್ತವೆ ಎಂದರು.