ಕಣ್ಣಾಮುಚ್ಚಾಲೆ ಆಡುತ್ತಾ ಫ್ರಿಡ್ಜ್ ನಲ್ಲಿ ಅಡಗಿ ಕುಳಿತ ಸಹೋದರಿಯರು – ಬಾಗಿಲು ಲಾಕ್ ಆಗಿ ಉಸಿರುಗಟ್ಟಿ ಇಬ್ಬರು ಸಾವು

ಕಣ್ಣಾಮುಚ್ಚಾಲೆ ಆಡುತ್ತಾ ಫ್ರಿಡ್ಜ್ ನಲ್ಲಿ ಅಡಗಿ ಕುಳಿತ ಸಹೋದರಿಯರು – ಬಾಗಿಲು ಲಾಕ್ ಆಗಿ ಉಸಿರುಗಟ್ಟಿ ಇಬ್ಬರು ಸಾವು

ಮಕ್ಕಳೆಲ್ಲಾ ಸೇರಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದರು. ಹೀಗೆ ಆಡುತ್ತಿದ್ದ ಇಬ್ಬರು ಬಾಲಕಿಯರು ಮಾತ್ರ ಯಾರ ಕಣ್ಣಿಗೂ ಬೀಳಲೇ ಇಲ್ಲ. ಕೊನೆಗೆ ದೊಡ್ಡವರೆಲ್ಲಾ ಸೇರಿ ಮಕ್ಕಳು ಎಲ್ಲಿ ಹೋದ್ರು ಅಂತಾ ಹುಡುಕಾಡುತ್ತಿದ್ರು. ಆದರೆ ಅವರು ಪತ್ತೆಯಾಗಿದ್ದು ಮಾತ್ರ ಘೋರ ಸ್ಥಿತಿಯಲ್ಲಿ. ಯಾಕಂದ್ರೆ ಕಣ್ಣಾಮುಚ್ಚಾಲೆ ಆಟ ಇಬ್ಬರ ಪ್ರಾಣವನ್ನೇ ತೆಗೆದಿತ್ತು.

ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕಣ್ಣಾಮುಚ್ಚಾಲೆ ಆಡುತ್ತಿದ್ದ ಸೋದರಿಯರಿಬ್ಬರು ಮನೆಯಲ್ಲಿ ಬಳಕೆಯಾಗದೆ ಮೂಲೆಯಲ್ಲಿ ಬಿದ್ದಿದ್ದ ಫ್ರಿಡ್ಜ್ ನಲ್ಲಿ ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ. ಪುಟ್ಟ ಬಾಲಕಿಯರು ಫ್ರಿಡ್ಜ್ ಒಳಗಡೆ ಹೋಗಿ ಅಡಗಿಕೊಳ್ಳುತ್ತಿದ್ದಂತೆ ಹೊರಗಿನಿಂದ ಫ್ರಿಡ್ಜ್ ಆಕಸ್ಮಿಕಕ್ಕಾಗಿ ಲಾಕ್ ಆಗಿದೆ. ಪರಿಣಾಮ ಬಾಲಕಿರಿಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ. ಕೆಲ ಹೊತ್ತಿನ ಹಿಂದೆ ಕಣ್ಣೆದುರೇ ಓಡಾಡುತ್ತಿದ್ದ, ಆಟವಾಡುತ್ತಿದ್ದ ಮಕ್ಕಳು ಕಾಣದಿರುವಾಗ ಮನೆಯ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಾಡಿದರೂ ಪತ್ತೆಯಾಗದ ಕಾರಣ ಮನೆಯವರು ಆತಂಕಗೊಂಡಿದ್ದಾರೆ. ಕೆಲ ಹೊತ್ತಿನ ಹುಡುಕಾಟದ ಬಳಿಕ ಹಳೆಯ ಫ್ರೀಜರ್ ನಲ್ಲಿ ಪುಟ್ಟ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ : 2 ವರ್ಷದಲ್ಲಿ ಸುಮಾರು 900 ಹೆಣ್ಣು ಭ್ರೂಣ ಹತ್ಯೆ! – ಐವರು ವೈದ್ಯರ ಸೇರಿ 9 ಮಂದಿ ಅರೆಸ್ಟ್

10 ವರ್ಷದ ಪಾಯಲ್ ಮತ್ತು 11 ವರ್ಷದ ರಿತಿಕಾ ದಿನನಿತ್ಯ ಒಟ್ಟಿಗೆ ಆಟವಾಡುತ್ತಿದ್ದರು. ಹಾಗೆಯೇ ಕಳೆದ ಗುರುವಾರ ಮಧ್ಯಾಹ್ನ ಕೂಡ ಒಟ್ಟಿಗೆ ಕಣ್ಣಾಮುಚ್ಚಾಲೆ ಆಡಿದ್ದಾರೆ. ಈ ವೇಳೆ ಮನೆಯಲ್ಲಿ ಬಳಸದೇ ಮೂಲೆಯಲ್ಲಿ ಇಟ್ಟಿದ್ದ ಫ್ರಿಡ್ಜ್ ನಲ್ಲಿ ಅಡಗಿ ಕೂತಿದ್ದಾರೆ. ಮೊದಲೇ ಹಾಳಾಗಿದ್ದ ಫ್ರಿಡ್ಜ್ ಹೊರಗಡೆಯಿಂದ ಅಚಾನಕ್ಕಾಗಿ ಲಾಕ್​​ ಆಗಿದೆ. ಅಲ್ಲಿಯೇ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಡೀಪ್ ಫ್ರೀಜರ್‌ನಲ್ಲಿದ್ದ ಎರಡೂ ದೇಹಗಳು ಆಗಲೇ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಬಾಲಕಿಯ ತಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಈ ಭೀಕರ ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಊರಿಗೆ ಮರಳಿದ್ದಾರೆ. ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಪುಟ್ಟ ಬಾಲಕಿಯ ಮೃತದೇಹದ ಅಂತಿಮ ವಿಧಿಗಳನ್ನು ನಡೆಸಿ, ಒಟ್ಟಿಗೆ ದಹನ ಮಾಡಲಾಗಿದೆ ಎಂದು ತಿಳಿದುಬಂದಿದೆ.

Shantha Kumari