ಕೆಜಿಗೆ 2.7 ಲಕ್ಷ ರೂ.. ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಯ ಮಾವಿನ ಹಣ್ಣು – ಇಲ್ಲಿದೆ ಅಚ್ಚರಿಯ ಮಾಹಿತಿ..

ಕೆಜಿಗೆ 2.7 ಲಕ್ಷ ರೂ.. ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಯ ಮಾವಿನ ಹಣ್ಣು – ಇಲ್ಲಿದೆ ಅಚ್ಚರಿಯ ಮಾಹಿತಿ..

ಮಾವಿನ ಹಣ್ಣಿನಲ್ಲಿ ಎಷ್ಟೆಲ್ಲಾ ವೆರೈಟಿ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಹಣ್ಣುಗಳ ರಾಜ ಮಾವಿನ ಹಣ್ಣಿಗೆ ಆಯಾ ತಳಿಗೆ ತಕ್ಕಂತೆ ಆಯಾ ದರವೂ ಇದ್ದೇ ಇರುತ್ತೆ ಬಿಡಿ.  ಕೆಲವೊಮ್ಮೆ ಮಾವು ಬೆಳೆ ಕೈಕೊಟ್ಟಾಗ, ಮಾವು ಇಳುವರಿ ಕಡಿಮೆಯಾದಾಗ ಮಾತ್ರವೇ ಮಾವಿನ ಹಣ್ಣಿನ ದರ ದುಬಾರಿಯಾಗಿರುತ್ತೆ. ಇಲ್ಲದಿದ್ರೆ ಗ್ರಾಹಕರಿಗೆ ಕೈಗೆಟುಕೋ ರೀತಿಯಲ್ಲಿ ಮಾವಿನ ಹಣ್ಣಿನ ದರ ಇದ್ದೇ ಇರುತ್ತೆ. ಆದ್ರೀಗ ನಾವು ಹೇಳೋಕೆ ಹೊರಟಿರೋದು ಅತ್ಯಂತ ಅಪರೂಪದ ಹಾಗೂ ಜಗತ್ತಿನಲ್ಲೇ ಇರೋ ಅತಿ ದುಬಾರಿಯ ಮಾವಿನ ಹಣ್ಣಿನ ಬಗ್ಗೆ. ಇನ್ನು ಮಾವಿನ ಹಣ್ಣು ಅಂದಾಕ್ಷಣ ಎಲ್ಲರಿಗೂ ಗೊತ್ತಿರೋ ಬಣ್ಣ ಹಳದಿ. ಕೆಲವೊಂದು ಹಸಿರು ಬಣ್ಣದಲ್ಲೂ ಇರುತ್ತೆ. ಆದರೆ ನಾವು ತೋರಿಸೋಕೆ ಹೊರಟಿರೋ ಮಾವಿನ ಹಣ್ಣಿನ ಬಣ್ಣವೇ ಬೇರೆ. ಅಷ್ಟೇ ಅಲ್ಲ ಇದು ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಯ ಮಾವಿನ ಹಣ್ಣು.

ಇದನ್ನೂ ಓದಿ: ಮಾವು ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಹಣ್ಣಿನ ಪ್ರದರ್ಶನ –ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟ..!

ಇಡೀ ವಿಶ್ವವನ್ನೇ ತನ್ನೆಡೆ ಸೆಳೆದ ಮಾವಿನ ಹಣ್ಣು ಮೊದಲು ಕಂಡು ಬಂದಿದ್ದು ಜಪಾನ್ ನಲ್ಲಿ. ಮಿಯಝಾಕಿ ಎಂಬ ನಗರದಲ್ಲಿ ಈ ಮಾವಿನ ಹಣ್ಣನ್ನ ಬೆಳೆಯಲಾಗುತ್ತದೆ. ಹೀಗಾಗಿ ಈ ಮಾವಿನ ಹಣ್ಣನ್ನ ಮಿಯಾಝಾಕಿ ಎಂದೇ ಕರೆಯಲಾಗುತ್ತದೆ. ಈ ಮಾವಿನ ಹಣ್ಣಿನ ಬಣ್ಣ ನೇರಳೆ. ವಿಶಿಷ್ಟ ರೀತಿಯ ಬಣ್ಣ ಹೊಂದಿರೋ ಈ ಮಾವಿನ ಹಣ್ಣು ಕೆಜಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 2 ಲಕ್ಷದ 70 ಸಾವಿರ ರೂಪಾಯಿ.  ಅತ್ಯಂತ ದುಬಾರಿ ಮಾವಿನ ಹಣ್ಣುಗಳನ್ನ ಟೈಯ ನೋ ಟೊಮೆಗೋ ಅಥವಾ ಎಗ್ಸ್ ಆಫ್ ಸನ್ ಶೈನ್ ಎಂದೂ ಕರೆಯಲಾಗುತ್ತದೆ. ಮಾವಿನ ಮರ ಹೂ ಬಿಟ್ಟ ಮೇಲೆ ಹಸಿರು ಕಾಯಿ ಬಿಡುತ್ತದೆ. ನಂತರ ಕಾಯಿ ಮಾಗಿ ಹಣ್ಣಾಗುವಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದ್ರೆ, ಈ ಮಿಯಾಝಾಕಿ ಮಾವು ಕಾಯಿ ಇರುವಾಗ ಕಡು ನೇರಳೆ ಬಣ್ಣ ಹೊಂದಿರುತ್ತದೆ. ಅದು ಮಾಗಿ ಹಣ್ಣಾದ ಮೇಲೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಮಾವಿನ ಹಣ್ಣಿನ ಆಕೃತಿ ನೋಡೋಕೆ ಡೈನೋಸಾರ್ ಮೊಟ್ಟೆಯಂತೆ ಕಾಣುತ್ತದೆ. ಹಾಗಾಗಿಯೇ ಈ ಮಾವಿನ ಹಣ್ಣನ್ನ ಡ್ರ್ಯಾಗನ್ಸ್ ಮೊಟ್ಟೆ ಎಂದೂ ಕರೆಯಲಾಗುತ್ತದೆ. ಒಂದು ಹಣ್ಣು ಸಾಮಾನ್ಯವಾಗಿ 350 ಗ್ರಾಮ್ ಇದ್ದು ಸಕ್ಕರೆ ಅಂಶ ಶೇಕಡಾ 15 ರಷ್ಟು ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ.

ವಿಶ್ವದಲ್ಲೇ ದುಬಾರಿಯೆನಿಸಿಕೊಂಡಿರೋ ಈ ತಳಿಯನ್ನ ಭಾರತದಲ್ಲೂ ಅಭಿವೃದ್ಧಿ ಪಡಿಸಲಾಗುತ್ತದೆ. ಮಧ್ಯಪ್ರದೇಶದಲ್ಲಿ ಈ ಮಿಯಾಝಾಕಿ ಮಾವಿನ ಹಣ್ಣನ್ನ ಬೆಳೆಯಲಾಗಿದೆ. ಮಧ್ಯಪ್ರದೇಶದ ದಂಪತಿ ತಮ್ಮ ಮಾವಿನ ತೋಟದಲ್ಲಿ ಇದ ಎರಡು ಸಸಿಗಳನ್ನ ನೆಟ್ಟಿದ್ದರು. ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ವ್ಯಕ್ತಿಯೊಬ್ಬರಿಂದ ಸಸಿಗಳನ್ನ ಪಡೆದಿದ್ದರಂತೆ. ಆಗ ದಂಪತಿಗೆ ಈ ಹಣ್ಣಿನ ಮೌಲ್ಯದ ಬಗ್ಗೆ ತಿಳಿದಿರಲಿಲ್ಲ. ಫಸಲು ಬಿಟ್ಟಾಗಲೇ ಮಾವಿನ ಕಾಯಿ ನೇರಳೆ ಬಣ್ಣ ಅಂತಾ ಗೊತ್ತಾಗಿದೆ. ಈ ದಂಪತಿಯೀಗ ಮಿಯಾಝಾಕಿ ಮಾವಿಗೆ ದಾಮಿನಿ ಎಂದು ನಾಮಕರಣ ಮಾಡಿದ್ದಾರೆ. ಇನ್ನು ಈ ಹಣ್ಣನ್ನ ಬೆಳೆದ ಮೇಲೆ ಈ ದಂಪತಿ ಚಿನ್ನವನ್ನ ಕಾಪಾಡಿಕೊಳ್ಳೋ ರೀತಿ ಕಾಪಾಡಿಕೊಳ್ತಿದ್ದಾರೆ. ಮೊದಲೆರೆಡು ಬಾರಿ ಈ ಮಾವಿನ ಹಣ್ಣನ್ನ ಕದ್ದುಕೊಂಡು ಹೋಗಿದ್ದರಂತೆ. ಹೀಗಾಗಿ ಮಾವಿನ ಹಣ್ಣನ್ನ ರಕ್ಷಿಸಿಕೊಳ್ಳಲು ನಾಲ್ಕು ಮಂದಿ ಭದ್ರತಾಸಿಬ್ಬಂದಿಯನ್ನ ನೇಮಿಸಿಕೊಂಡಿದ್ದಾರೆ. ಜೊತೆಗೆ  6 ನಾಯಿಗಳನ್ನ ಕಾವಲು ಕಾಯಲು ಬಿಟ್ಟಿದ್ದಾರೆ.

ಒಂದು ಕೆಜಿಗೆ ಎರಡೂವರೆ ಲಕ್ಷ ರೂಪಾಯಿ ಕೊಟ್ಟು ಮಾವಿನ ಹಣ್ಣು ಖರೀದಿಸಬೇಕೆಂದ್ರೆ, ಆ ಮಾವಿನ ಹಣ್ಣಿನಲ್ಲಿ ಅಂಥಾದ್ದೇನು ವಿಶೇಷತೆಯಿದೆ ಅನ್ನೋ ಕುತೂಹಲ ಇದ್ದೇ ಇರುತ್ತೆ. ಈ ಮಾವಿನ ಹಣ್ಣಲ್ಲಿ ಫೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಅಂಶವಿದೆ. ಈ ವಿಶೇಷ ಹಣ್ಣಿನಲ್ಲಿ ದೃಷ್ಟಿಹೀನತೆಯನ್ನ ಸುಧಾರಿಸುವ ಶಕ್ತಿಯಿದೆ. ಹೀಗಾಗಿ ಈ ಮಾವಿನ ಹಣ್ಣಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆಯಿದೆ.

suddiyaana