2 ಪಂದ್ಯಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ – ಯಂಗ್ ಸ್ಟರ್ ಗೆ ಮಣೆ ಹಾಕಿದ ಕಾಂಗರೂ ಪಡೆ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟಿಸಿದೆ. ಅಲ್ಲದೆ, ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮೊದಲ 3 ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರಂಭಿಕ ಆಟಗಾರ ನಾಥನ್ ಮೆಕ್ಸ್ವೀನಿ ಅವರನ್ನು ಡ್ರಾಪ್ ಮಾಡಲಾಗಿದೆ. ಆರು ಇನ್ನಿಂಗ್ಸ್ಗಳ ಪೈಕಿ ಐದರಲ್ಲಿ 10 ರನ್ ದಾಟಲು ಆಗದ ಮೆಕ್ಸ್ವೀನಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಪದೇಪದೇ ವಿಕೆಟ್ ಒಪ್ಪಿಸುತ್ತಿದ್ದರು. ಇದು ತಂಡಕ್ಕೆ ಭಾರೀ ಹಿನ್ನಡೆಯಾಗುತ್ತಿತ್ತು. ಹೀಗಾಗಿ 19 ವರ್ಷದ ನ್ಯೂ ಸೌತ್ ವೇಲ್ಸ್ ತಂಡದ ಬ್ಯಾಟರ್ ಸ್ಯಾಮ್ ಕೊನ್ಸ್ಟಾಸ್ಗೆ ಮಣೆ ಹಾಕಲಾಗಿದ್ದು, ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆಯೋದು ಗ್ಯಾರಂಟಿ ಆಗಿದೆ. ಡಬ್ಲ್ಯುಟಿಸಿ ಫೈನಲ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಆಸ್ಟ್ರೇಲಿಯಾಗೂ ಉಳಿದ 2 ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ : ಭಾರತಕ್ಕೆ WTC ಫೈನಲ್ ಚಾಲೆಂಜ್ – 2 ಮ್ಯಾಚ್.. 3 ಟೀಂ.. ಯಾರಿಗೆ ಟಿಕೆಟ್?
ಟೀಂ ಆಯ್ಕೆ ವೇಳೆ ಆಸ್ಟ್ರೇಲಿಯಾ ತಂಡದಲ್ಲಿ ಇಬ್ಬರು ಬ್ಯಾಕಪ್ ವೇಗಿಗಳಿಗೂ ಚಾನ್ಸ್ ನೀಡಲಾಗಿದೆ. ಜೆ ರಿಚರ್ಡ್ಸನ್ ಮೂರು ವರ್ಷಗಳ ನಂತರ ರೆಡ್-ಬಾಲ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಹಾಗೇ ಇಂಜುರಿಗೆ ತುತ್ತಾಗಿದ್ದ ಜೋಶ್ ಹ್ಯಾಜಲ್ವುಡ್ ಬದಲಿಗೆ ಮೈಕೆಲ್ ನೆಸರ್ಗಿಂತ ಸೀನ್ ಅಬಾಟ್ಗೆ ಆದ್ಯತೆ ನೀಡಲಾಗಿದೆ. ರಿಚರ್ಡ್ಸನ್ ಕೊನೆಯದಾಗಿ 2021ರಲ್ಲಿ ಅಡಿಲೇಡ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡಿದ್ದರು. ನಿರಂತರ ಗಾಯಗಳಿಂದಾಗಿ ಆಯ್ಕೆಯಾಗಿರಲಿಲ್ಲ.
ಬಾರ್ಡರ್ -ಗವಾಸ್ಕರ್ ಟ್ರೋಫಿಯ ಒಂದೊಂದು ಪಂದ್ಯಗಳೂ ಬಾರೀ ರೋಚಕತೆಯಿಂದ ಕೂಡಿವೆ. ಪರ್ತ್ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ಅಬ್ಬರದ ಜಯದೊಂದಿಗೆ ಸರಣಿಯನ್ನು ಆರಂಭಿಸಿತು, ಆಸ್ಟ್ರೇಲಿಯಾವನ್ನು 295 ರನ್ಗಳಿಂದ ಸೋಲಿಸಿತು. ಆದರೆ, ಎರಡನೇ ಟೆಸ್ಟ್ನಲ್ಲಿ ಕಮ್ಬ್ಯಾಕ್ ಮಾಡಿದಂಥ ಆಸ್ಟ್ರೇಲಿಯ ಅಡಿಲೇಡ್ನಲ್ಲಿ 10 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿತು. ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಮಳೆಯಿಂದಾಗಿ ಪಂದ್ಯ ಡ್ರಾ ಆಯಿತು. ಸದ್ಯ 1-1ರಲ್ಲಿ ಸಮಬಲ ಸಾಧಿಸಿರುವ ತಂಡಗಳು 4ನೇ ಟೆಸ್ಟ್ಗಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ತೆರಳಲಿವೆ. ಬಾಕ್ಸಿಂಗ್ ಡೇ ಫೈಟ್ನಲ್ಲಿ ಮೇಲುಗೈ ಸಾಧಿಸೋ ಲೆಕ್ಕಾಚಾರದಲ್ಲಿವೆ.