ಕೆಲಸ ಹುಡುಕುತ್ತಿದ್ದ ಯುವತಿ ಮ*ರ್ಡರ್- ವಿನಯ್ ಕುಲಕರ್ಣಿ ಡೈರಿ ಬಳಿ ಆಗಿದ್ದೇನು ಗೊತ್ತಾ?

ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ 19 ವರ್ಷದ ವಿದ್ಯಾರ್ಥಿಯನ್ನ ಭೀಕರವಾಗಿ ಹತ್ಯೆಗೀಡಾಗಿದ್ದಾಳೆ. 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ನಗರದ ಹೊರವಲಯದಲ್ಲಿ ಎಸೆದು ಪರಾರಿಯಾಗಿರುವ ಘಟನೆ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಧಾರವಾಡದ ಗಾಂಧಿ ಚೌಕ್ ನಿವಾಸಿಯಾಗಿದ್ದ ಝಕಿಯಾ ಮುಲ್ಲಾ (19) ಕೊಲೆಯಾದ ದುರ್ದೈವಿ. ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿದ್ದ ಝಕಿಯಾ, ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಯುವತಿ, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು.
ಇದನ್ನೂ ಓದಿ: ಅಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ! – ದೇಗುಲದ ಆವರಣದಲ್ಲೇ ಮೂಳೆಗಳು ಪತ್ತೆ!
ಇಂದು ಮುಂಜಾನೆ ಮನಸೂರು ರಸ್ತೆಯ ಶಾಸಕ ವಿನಯ್ ಕುಲಕರ್ಣಿ ಅವರ ವಿನಯ್ ಡೈರಿ ಸಮೀಪ ಯುವತಿಯ ಶವ ಪತ್ತೆಯಾಗಿದೆ. ಬೇರೆ ಯಾವುದೋ ಸ್ಥಳದಲ್ಲಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಇಲ್ಲಿಗೆ ತಂದು ಶವವನ್ನು ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಗಳು ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಯುವತಿಯ ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಹತ್ಯೆಗೆ ಕಾರಣವೇನು ಎಂಬುವುದು ತನಿಖೆಯಿಂದ ತಿಳಿದುಬರಬೇಕಿದೆ.

ನೋಡಿರಿ

